ಚುನಾವಣಾ ಬಾಂಡ್ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಸುಲಿಗೆ ಆರೋಪ; ಕೇಂದ್ರ ಸಚಿವೆ ನಿರ್ಮಲಾ ವಿರುದ್ಧ ಎಫ್‌ಐಆರ್

Source: Vb | By I.G. Bhatkali | Published on 29th September 2024, 6:49 AM | National News |

ಬೆಂಗಳೂರು: ಚುನಾವಣಾ ಬಾಂಡ್ ಮೂಲಕ ಕಾರ್ಪೊರೇಟ್ ಕಂಪೆನಿಗಳಿಂದ ಸಾವಿರಾರು ಕೋಟಿ ರೂ. ಸುಲಿಗೆ ಮಾಡಿದ ಆರೋಪದಡಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಸೇರಿ ಹಲವರ ವಿರುದ್ದ ಬೆಂಗಳೂರಿನ ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ಶನಿವಾರ ಎಫ್‌ಐಆರ್ ದಾಖಲಾಗಿದೆ.

ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಮೇರೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಜಾರಿ ನಿರ್ದೇಶನಾಲಯ(ಈ.ಡಿ)ದ ಅಧಿಕಾರಿಗಳು ಸೇರಿ ಇತರರ ವಿರುದ್ದ ಅಪರಾಧಿಕ ಒಳಸಂಚು, ಸುಲಿಗೆಯಡಿ ಪ್ರಕರಣ ದಾಖಲಿಸಲಾಗಿದೆ.

ಚುನಾವಣಾ ಬಾಂಡ್ ಮೂಲಕ 8 ಸಾವಿರ ಕೋಟಿ ರೂ. ಸುಲಿಗೆ ಮಾಡಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ದೂರುದಾರ ಜನಾಧಿಕಾರ ಸಂಘರ್ಷ ಪರಿಷತ್ (ಜೆಎಸ್‌ಪಿ)ನ ಆದರ್ಶ್ ಆರ್. ಅಯ್ಯರ್ ಎಂಬವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ, ಎಫ್‌ಐಆರ್ ದಾಖಲಿಸುವಂತೆ ಬೆಂಗಳೂರಿನ ತಿಲಕ್‌ ನಗರ ಠಾಣಾ ಪೊಲೀಸರಿಗೆ ಶುಕ್ರವಾರ ಸೂಚನೆ ನೀಡಿತ್ತು.

ದೂರಿನಲ್ಲೇನಿದೆ?: ಜಾರಿ ನಿರ್ದೇಶನಾಲಯ (ಈ.ಡಿ.) ಬಳಸಿಕೊಂಡು ದೇಶದ ಕಾರ್ಪೊರೇಟ್ ಕಂಪೆನಿಗಳ ಮೂಲಕ ದಾಳಿ ಮಾಡಿ, ಅವರಿಂದ ಚುನಾವಣಾ ಬಾಂಡ್ ಮೂಲಕ ಸುಮಾರು 8 ಸಾವಿರ ಕೋಟಿ ರೂ.ವರೆಗೂ ಹಣ ಸುಲಿಗೆ ಮಾಡಲಾಗಿದೆ. ರಾಜ್ಯದಲ್ಲಿ ಮಾಜಿ ಸಂಸದ ನಳಿನ್ ಕುಮಾ‌ರ್ ಕಟೀಲು ರಹಸ್ಯ ಮಾರ್ಗವಾಗಿ ಹಣ ವರ್ಗಾವಣೆಗೆ ಸಹಕರಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ಈ.ಡಿ. ಬಳಸಿಕೊಂಡು ಕಂಪೆನಿಗಳ ಮೇಲೆ ದಾಳಿ ಮಾಡಿ, ಸಿಇಒ ಹಾಗೂ ಎಂ.ಡಿ.ಯನ್ನು ಬಂಧಿಸಲಾಗಿತ್ತು. ಬಂಧನಕ್ಕೆ ಹೆದರಿದ ಕಂಪೆನಿ ಮಾಲಕರಿಗೆ ಚುನಾವಣಾ ಬಾಂಡ್ ಖರೀದಿಗೆ ಒತ್ತಾಯಿಸಿದ್ದಾರೆ ಎಂದು ಆದರ್ಶ ಆರ್. ಅಯ್ಯರ್ ದೂರಿನಲ್ಲಿ ವಿವರಿಸಿದ್ದಾರೆ.

ಕಾರ್ಪೊರೇಟ್ ಅಲ್ಯೂಮಿನಿಯಂ ಮತ್ತು ಕಾಪರ್ ಜೈಂಟ್, ಎಂ.ಎಸ್.ಸ್ಕೆರ್ ಲೈಟ್, ವೇದಾಂತ ಕಂಪೆನಿಗಳಿಂದ 2019ನೇ ಸಾಲಿನ ಎಪ್ರಿಲ್‌ನಿಂದ 2023ರ ನವೆಂಬರ್‌ವರೆಗೆ ಒಟ್ಟು 230.15 ಕೋಟಿ ರೂ. ಪಡೆದುಕೊಂಡಿದ್ದಾರೆ. ಅರವಿಂದ ಫಾರ್ಮಾ ಕಂಪೆನಿಯಿಂದ 2022 ಹಾಗೂ 2023ರವರೆಗೆ 49.5 ಕೋಟಿ ರೂ. ಸೇರಿ ರಹಸ್ಯವಾಗಿ ಸುಮಾರು 8 ಸಾವಿರ ಕೋಟಿ ರೂ.ಗಳನ್ನು ಎಲ್ಲ ಆರೋಪಿಗಳು ಚುನಾವಣಾ ಬಾಂಡ್‌ಗೆ ಪರಿವರ್ತಿಸಿದ್ದಾರೆ. ಈ ಸಂಬಂಧ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆದರ್ಶ್ ಆರ್. ಅಯ್ಯರ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Read These Next

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ರಾಜಿನಾಮೆ ನಿಡ್ತಾರಾ? ಹಾಗಾದ್ರೆ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ?

ಹೊಸದಿಲ್ಲಿ : ಅರವಿಂದ್ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ ಬೆನ್ನಲ್ಲೇ ನಿಜವಾಗ್ಲೂ ...

ಕೇಜ್ರವಾಲ್‌ಗೆ ಜಾಮೀನು; ಬಂಧನದ ಕಾನೂನುಬದ್ಧತೆ ಬಗ್ಗೆ ನ್ಯಾಯಾಧೀಶರಲ್ಲಿ ಭಿನ್ನಾಭಿಪ್ರಾಯ

ಅಭಿವೃದ್ಧಿ ಹೊಂದಿದ ಸಮಾಜಕ್ಕಾಗಿ ಸುಧಾರಿತ ನ್ಯಾಯವ್ಯವಸ್ಥೆಯೊಂದು ಯೊಂದು ಬೇಕು, ವಿಚಾರಣೆ ನಡೆಯುತ್ತಿರುವಾಗ ಆರೋಪಿಗಳನ್ನು ...