ಭಟ್ಕಳ: ಮಂಗಳೂರಿನ ನ್ಯೂ ಇಂಗ್ಲಿಷ್ ಶಾಲಾ ಆವರಣದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್.) ಭಟ್ಕಳ ಶಾಖೆ ವತಿಯಿಂದ ವಿಜಯದಶಮಿ ಪ್ರಯುಕ್ತ ಗಣವೇಷಧಾರಿ ಸ್ವಯಂಸೇವಕರಿಂದ ಭವ್ಯ ಪಥಸಂಚಲನಕ್ಕೆ ಚಾಲನೆ ನೀಡಲಾಯಿತು.
ಪಥಸಂಚಲನವು ನ್ಯೂ ಇಂಗ್ಲಿಷ್ ಶಾಲಾ ಆವರಣದಿಂದ ಪ್ರಾರಂಭವಾಯಿತು. ಈ ಪಥಸಂಚಲನವು ಎರಡು ಬೇರೆ ಮಾರ್ಗಗಳಲ್ಲಿ ಸಾಗಿದ್ದು, ಮೊದಲ ಮಾರ್ಗದಲ್ಲಿ ಪಥಸಂಚಲನ ನ್ಯೂ ಇಂಗ್ಲಿಷ್ ಶಾಲೆಯಿಂದ ಸೋನಾರಕೇರಿ, ಆಸರಕೇರಿ ಮೂಲಕ ಮುಖ್ಯ ರಸ್ತೆಯ ಮೂಲಕ ಮಾರಿಕಾಂಬ ದೇವಾಲಯ, ರಥಬೀದಿ, ಹೂವಿನ ಪೇಟೆ ಹಾದು ಹಳೆ ಬಸ್ ನಿಲ್ದಾಣದ ಮೂಲಕ ಪಿ.ಎಲ್.ಡಿ. ಬ್ಯಾಂಕ್ ಮೂಲಕ ಭಟ್ಕಳ ಸರ್ಕಲ್ ಪ್ರವೇಶಿಸಿತು.
ಇನ್ನೊಂದು ಮಾರ್ಗವು ನ್ಯೂ ಇಂಗ್ಲಿಷ್ ಶಾಲೆಯಿಂದ ಬಂದರ ರಸ್ತೆ, ಭಟ್ಕಳ ಸರ್ಕಲ್, ಸಾಗರ ರಸ್ತೆ, ನಾಯಕ ಹೆಲ್ತ್ ಸೆಂಟರ್, ನಾಗಪ್ಪ ನಾಯಕ ರಸ್ತೆ ಮಾರ್ಗವಾಗಿ ಡಿ.ಪಿ. ಕಾಲೋನಿ ರಸ್ತೆ (ಸುದೀಂದ್ರ ಕಾಲೇಜು ಹಿಂಬಾಗ), ಮೆಲ್‌ಹಿತ್ಲು ಮೂಲಕ ಹುರುಳಿಸಾಲ, ಅಲ್ಲಿಂದ ಸಾರ್ವಜನಿಕ ಗಣೇಶೋತ್ಸವ ಭವನದ ಮೂಲಕ ನಾಗಪ್ಪ ನಾಯಕ ರಸ್ತೆ ಹಾದು ಡಾ. ಚಿತ್ತರಂಜನ ಮನೆ ಕ್ರಾಸ್ ಮೂಲಕ ಹಳೆ ವೈಭವ ಎದುರಿನಿಂದ ಪುನಃ ಭಟ್ಕಳ ಸರ್ಕಲ್‌ಗೆ ತಲುಪಿತು.
ಎರಡು ಮಾರ್ಗಗಳಿಂದ ಹೊರಟ ಪಥಸಂಚಲನವು ಭಟ್ಕಳ ಸರ್ಕಲ್‌ನಲ್ಲಿ ಏಕಕಾಲಕ್ಕೆ ತಲುಪಿದ್ದು, ಬಳಿಕ ಪುನಃ ನ್ಯೂ ಇಂಗ್ಲಿಷ್ ಶಾಲಾ ಮೈದಾನದಲ್ಲಿ ಅಂತ್ಯಗೊಂಡಿತು.
ಪಥಸಂಚಲನದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್. ಉತ್ತರ ಪ್ರಾಂತ್ಯದ ಸಂಚಾಲಕರಾದ ಗೋಪಾಲ ಬಳ್ಳಾರಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆರ್.ಎಸ್.ಎಸ್. ಭಟ್ಕಳದ ಭಾಸ್ಕರ ಆಚಾರ್ಯ ಉಪಸ್ಥಿತರಿದ್ದರು. ಈ ಪಥಸಂಚಲನದಲ್ಲಿ 87 ವರ್ಷದ ವೃದ್ದ ವಿಠ್ಠಲ್ ರಾಮ ಪ್ರಭು ಸೇರಿದಂತೆ ಸಣ್ಣಮಕ್ಕಳೂ ಭಾಗವಹಿಸಿದ್ದು ವಿಶೇಷವಾಗಿತ್ತು.
ಈ ಪಥಸಂಚಲನದಲ್ಲಿ ಸಾವಿರಕ್ಕೂ ಅಧಿಕ ಸ್ವಯಂಸೇವಕರು ಭಾಗವಹಿಸಿದ್ದರು.
ಭದ್ರತೆಗಾಗಿ ಭಟ್ಕಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಎರಡು ಡಿ.ಎಸ್.ಪಿ., 7 ಪಿ.ಐ., 27 ಪಿ.ಎಸ್.ಐ., 25 ಎ.ಎಸ್.ಐ., 309 ಹೆಡ್ ಕಾನ್ಸ್‌ಟೇಬಲ್‌ಗಳು, ಕಾನ್ಸ್‌ಟೇಬಲ್‌ಗಳು, 2 ಕೆ.ಎಸ್.ಆರ್.ಪಿ. ಮತ್ತು 5 ಡಿ.ಎ.ಆರ್. ತುಕಡಿಗಳು ನಿಯೋಜಿಸಲ್ಪಟ್ಟಿದ್ದವು. ಭಟ್ಕಳ ಡಿವೈಎಸ್.ಪಿ. ಕೆ. ಮಹೇಶ, ಶಿರಸಿ ಡಿವೈಎಸ್.ಪಿ. ಕೆ.ಎಲ್. ಗಣೇಶ, ನಗರ ಠಾಣೆಯ ಸಿ.ಪಿ.ಐ. ಮಾರ್ಗದರ್ಶನದಲ್ಲಿ ಈ ಬಿಗಿ ಪೊಲೀಸ್ ಬಂದೋಬಸ್ತ್ ಕಾರ್ಯ ನಿರ್ವಹಿಸಲಾಯಿತು.