ಬೆಂಗಳೂರು:ಭಾರತದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರಗಳ “ಧೇಯೊದ್ದೇಶ ಸರ್ವರಿಗೂ ನ್ಯಾಯ ” ಎಂಬುದಾಗಿದೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಧಾರವಾಡ ಹಾಗೂ ಕಲಬುರಗಿ ಪೀಠಗಳಲ್ಲಿ ಏಕಕಾಲಕ್ಕೆ “ ಇ-ಲೋಕ್ ಅದಾಲತ್ ” ನಡೆಸಲು ಉದ್ದೇಶಿಸಿದೆ ಆದುದರಿಂದ ಸಾರ್ವಜನಿಕರು ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳು ಈ ಸದವಕಾಶವನ್ನು ಉಪಯೋಗಿಸಿಕೊಳ‍್ಳುವಂತೆ ಕರ್ನಾಟಕ ಉಚ್ಛನ್ಯಾಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರು ಆದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಕರೆ ನೀಡಿದರು.
ಇಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಹಮ್ಮಿಕೊಂಡಿದ್ದ ಮೆಗಾ ಲೋಕ್ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಅವರು ಇ-ಜನತಾ ನ್ಯಾಯಾಲಯದಲ್ಲಿ ಉಭಯ ಕಕ್ಷಿದಾರರು ನ್ಯಾಯಾಲಯಕ್ಕೆ ಖುದ್ದಾಗಿ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿರುತ್ತದೆ ಎಂದು ತಿಳಿಸಿದರು.
ಈಗಾಗಲೇ ದಿನಾಂಕ : 09-09-2020 ರಂದು ನಡೆದ ಲೋಕ್ ಅದಾಲತ್ ನಲ್ಲಿ ಕರ್ನಾಟಕ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿದ್ದ ಒಟ್ಟು 1,15,938 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿರುತ್ತದೆ.
ಕೋವಿಡ್-19 ಮಹಾ ಸಾಂಕ್ರಾಮಿಕ ರೋಗವು ಸರ್ವವ್ಯಾಪಿಯಾಗಿರುವ ಈ ಸಂದರ್ಭದಲ್ಲಿ ಇ-ಜನತಾ ನ್ಯಾಯಾಲಯವನ್ನು ರಚಿಸಿ ಅದು ಕಾರ್ಯನಿರ್ವಹಿಸಲು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಡೆಸುತ್ತಿರುವ ಇ-ಅದಾಲತ್ ನ ಉಪಯೋಗವನ್ನು ಸಾರ್ವಜನಿಕರು ಹಾಗೂ ಕಕ್ಷಿದಾರರು ಪಡೆಯಬಹುದಾಗಿರುತ್ತದೆ.
ಲೋಕ್ ಅದಾಲತ್ ಮಾಡುವುದು ಸಾರ್ವಜನಿಕರಿಗೆ ಉಪಯುಕ್ತವಾಗಿರುತ್ತದೆ. ಅಪಘಾತ ಪ್ರಕರಣಗಳಲ್ಲಿ ವಿಮಾ ಕಂಪನಿಗಳಿಂದ ಕಕ್ಷಿದಾರರಿಗೆ ಶೀಘ್ರ ನ್ಯಾಯ ದೊರಕುತ್ತದೆ. ನ್ಯಾಯದಿಂದ ವಂಚಿತರಾದ ದುರ್ಬಲ ವರ್ಗದವರಿಗೆ ತಕ್ಷಣ ನ್ಯಾಯ ಒದಗಿಸುವ ವೇದಿಕೆ ಇದಾಗಿದೆ. ಕರ್ನಾಟಕ ರಾಜ್ಯದ ನ್ಯಾಯಾಲಯಗಳಲ್ಲಿ ಒಟ್ಟು 19,81,763 ಪ್ರಕರಣಗಳು ಬಾಕಿ ಇದ್ದು, ಅವುಗಳ ಪೈಕಿ 2,48,620 ಪ್ರಕರಣಗಳನ್ನು ದಿನಾಂಕ : 19-12-2020 ಇ-ಮೆಗಾ ಲೋಕ್ ಅದಾಲತ್ ನಲ್ಲಿ ಇತ್ಯರ್ಥಪಡಿಸಲು ಗುರುತಿಸಲಾಗಿರುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಹಾಗೂ ವಕೀಲರುಗಳು ಉಪಸ್ಥಿತರಿದ್ದರು.