ಕರ್ನಾಟಕದ ಅನ್ನ ಉಂಡಿದ್ದೇನೆ, ಕರ್ಮಭೂಮಿಯ ಋಣ ತೀರಿಸಬೇಕು: ಡಾ.ಅಂಜಲಿ ನಿಂಬಾಳ್ಕರ್

Source: S O news | By Staff Correspondent | Published on 16th April 2024, 6:32 PM | Coastal News |

ಕಾರವಾರ: ಕರ್ನಾಟಕದ ಅನ್ನ ಉಂಡಿದ್ದೇನೆ, ಕರ್ಮಭೂಮಿಯ ಋಣ ತೀರಿಸಬೇಕು. ಹಾಗಾಗಿ ಉತ್ತರ ಕನ್ನಡಕ್ಕಾಗಿ ಕೆಲಸ ಮಾಡುವೆ ಎಂದು ಕಾಂಗ್ರೆಸ್ ಪಕ್ಷದ  ಲೋಕಸಭಾ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು.

ನಾಮಪತ್ರ ಸಲ್ಲಿಸಿದ ನಂತರ ಕಾರವಾರ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಉತ್ತರಿಸಿದರು‌.

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಖಾನಾಪುರ- ಕಿತ್ತೂರು ಕೂಡ ಬರುತ್ತದೆ. ಸಂವಿಧಾನದ ಪ್ರಕಾರ ಭಾರತದ ನಾಗರಿಕನಾಗಿ ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಕಳೆದ 10  ವರ್ಷದಿಂದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಆಗಿಲ್ಲ, ಇಲ್ಲಿ ಜನರಿಗಾಗಿ ಏನೂ ಮಾಡಿಲ್ಲ. ಅದಕ್ಕೆ ಏನಾದರೂ ಒಂದು ನೆಪ ಹೂಡಿ ಪ್ರಾಂತೀಯತೆ ಹುಡುಕಿ ಬಿಜೆಪಿಗರು ಟೀಕಿಸುತ್ತಿದ್ದಾರೆ. ಅವರು ಸಂವಿಧಾನ ಓದಿ‌, ತಿಳಿದುಕೊಳ್ಳಲಿ. ಸಂವಿಧಾನ ಬದಲಾವಣೆ ಮಾಡಲು ಮುಂದಾದವರಿಗೆ ಸಂವಿಧಾನ, ನಾಡಿನ ಇತಿಹಾಸವೇ ಗೊತ್ತಿಲ್ಲ. ಬೇಕಿದ್ದರೆ ನಾನೇ ಸಂವಿಧಾನ ಪುಸ್ತಕ ಕೊಡಿಸುವೆ ಎಂದರು.  

ಹುಟ್ಟು ಯಾರ ಕೈಯಲ್ಲೂ ಇರಲ್ಲ. ಇದೇ ಧರ್ಮದಲ್ಲಿ ಹುಟ್ಟಬೇಕು ಎಂದು ಯಾರು ಅರ್ಜಿ ಹಾಕಿರುವುದಿಲ್ಲ. ಹುಟ್ಟಿದ ಮೇಲೆ  ಕರ್ಮಭೂಮಿಯ ಋಣ ತೀರಿಸಬೇಕು. ಕರ್ನಾಟಕದ ಅನ್ನ ಉಂಡಿದ್ದೇನೆ. ಅದರ ಋಣ ತೀರಿಸುವೆ ಎಂದು ಅಂಜಲಿ ಹೇಳಿದರು.

ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಕಳೆದ ೬೦ ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ನಿಪ್ಪಾಣಿ, ಬೆಳಗಾವಿ ಸೇರಿಸಬೇಕೆಂದು ಅವರ ಹೋರಾಟ ನಡೆದಿದೆ. ಪ್ರಕರಣ ಸುಪ್ರಿಂ ಕೋರ್ಟ್‌ನಲ್ಲಿದೆ. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ನಮ್ಮ‌ ಸರ್ಕಾರದ ನಿಲುವೇ ನನ್ನ‌ ನಿಲುವು ಎಂದು ಹೇಳಿದರು. 

ಬಾಬಾ ಸಾಹೇಬ್ ಸಂವಿಧಾನದಲ್ಲಿ ಹೋರಾಟ ಮಾಡುವ ಹಕ್ಕು ನೀಡಿದ್ದಾರೆ. ಎಂಇಎಸ್‌ನವರು ಅವರ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದಾರೆ. ಹೋರಾಟ ಮಾಡುವವರಿಗೆ ಬೇಡ ಎನ್ನಲು ಆಗದು. ಆದರೆ ಅದು ಪ್ರಸ್ತುತವೇ ಎಂದು ನೋಡಬೇಕು. ಇದಕ್ಕೆ ಕಾಂಗ್ರೆಸ್ ತನ್ನ ನಿಲುವು ಹೇಳಿದೆ. ನನಗೆ ಎಂಇಎಸ್ ಹೋರಾಟಗಾರರ ಬಗೆಗೆ ಯಾವುದೇ ಸಾಫ್ಟ್ ಕಾರ್ನರ್ ಇಲ್ಲ ಎಂದರು. 

ಮಹಾಜನ್ ವರದಿ ಅಂತಿಮ. ಮುಖ್ಯಮಂತ್ರಿ ಕನ್ನಡ ನೆಲ- ಜಲದ ಬಗ್ಗೆ ಸ್ಪಷ್ಟತೆ ಹೊಂದಿದ್ದಾರೆ. ಅವರ ನಿಲುವೇ ನಮ್ಮದು ಎಂದರು. ಇದಕ್ಕೆ ಮಾಜಿ ಸಚಿವ ದೇಶಪಾಂಡೆ, ‌ಹಾಲಿ ಸಚಿವ ವೈದ್ಯ ಸಹಮತ ವ್ಯಕ್ತಪಡಿಸಿದರು.

ಕೇಸರಿಯನ್ನ ಬಿಜೆಪಿ ಗುತ್ತಿಗೆ ಪಡೆದಿಲ್ಲ: ರಾಷ್ಟ್ರ ಧ್ವಜಕ್ಕೆ ನೂರಾರು ವರ್ಷದ ಇತಿಹಾಸವಿದೆ. ಅದರಲ್ಲಿ ಕೇಸರಿ ಇದೆ. ಕಾಂಗ್ರೆಸ್ ಧ್ವಜದಲ್ಲಿ ಕೇಸರಿ ಇದೆ. ಕೇಸರಿ ಬಣ್ಣ  ಬಿಜೆಪಿಗರು ಗುತ್ತಿಗೆ ಪಡೆದಿಲ್ಲ. ಅದು ನಮ್ಮ ಪೂರ್ವಜನರ ಬಲಿದಾನದ ಸಂಕೇತ. ಸ್ವಾತಂತ್ರ್ಯ ಹೋರಾಟಕ್ಕಾಗಿ ರಕ್ತ ತರ್ಪಣದ ಸಂಕೇತವಾಗಿ ರಾಷ್ಟ್ರ‌ಧ್ವಜದಲ್ಲಿ ಕೇಸರಿ ಇದೆ. ಕಾಂಗ್ರೆಸ್ ಧ್ವಜದಲ್ಲೂ ಇದೆ. ಯಾರೂ  ಇತಿಹಾಸ ಮರೆಯಬಾರದು ಎಂದು ಅಂಜಲಿ ನಿಂಬಾಳ್ಕರ್ ಎಚ್ಚರಿಸಿದರು. 

ಖಾನಾಪುರ ಕೂಡ ಅರಣ್ಯ ಪ್ರದೇಶ. ಅಭಿವೃದ್ಧಿಯ ಜೊತೆ ಪರಿಸರ ಹಾನಿಯಾಗಬಾರದು. ಕಾನೂನಾತ್ಮಕವಾಗಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡುತ್ತೇವೆ. ಪರಿಸರ ಹಾನಿಗೆ ಮಾಡಿ ಯೋಜನೆಗೆ  ಬೆಂಬಲ ಕೊಡಲ್ಲ. ಅತಿಕ್ರಮಣದಾರರ ಸಮಸ್ಯೆ , ಮಲ್ಟಿ‌ಸ್ಪೆಶಾಲಿಟಿ ಆಸ್ಪತ್ರೆ ಬಗ್ಗೆ ದೆಹಲಿಯಲ್ಲಿ ಧ್ವನಿ ಎತ್ತುವೆ ಎಂದರು. 

ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಶಾಸಕರಾದ ಸತೀಶ್ ಸೈಲ್, ಭೀಮಣ್ಣ ನಾಯ್ಕ, ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉಪಸ್ಥಿತರಿದ್ದರು.

 

Read These Next

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸತೀಶ್ ಸೈಲ್, ಇತರ ಆರೋಪಿಗಳಿಗೆ ಹೈಕೋರ್ಟ್ ಬಿಗ್ ರಿಲೀಫ್

ಬೇಲೇಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣದಲ್ಲಿ ಸತೀಶ್ ಸೈಲ್ ಹಾಗೂ ಇತರೆ ಆರೋಪಿಗಳಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.

ಭಟ್ಕಳದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ: ಮರಳು ಸಮಸ್ಯೆ ಶಾಶ್ವತ ಪರಿಹಾರವನ್ನು ಕೊಡಲು ಕಾರ್ಮಿಕರ ಒಕ್ಕೂಟದ ಆಗ್ರಹ

ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಮರಳು ಮೂಲ ವಸ್ತುವಾಗಿ ಅತೀ ಮುಖ್ಯ ಪಾತ್ರವಹಿಸಿದೆ. ಆದರೆ, ಸರಕಾರ ಮತ್ತು ಸ್ಥಳೀಯಾಡಳಿತದ ಅವೈಜ್ಞಾನಿಕ ...

ಕಾರವಾರ: ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಗೆ ನೊಂದಣಿ ಕೇಂದ್ರ ತೆರೆಯಿರಿ : ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ

ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲ ಯೋಜನೆಯಲ್ಲಿ ಜಿಲ್ಲೆಯ ರೈತರಿಂದ ಭತ್ತ ಖರೀದಿ ಮಾಡುವ ಕುರಿತಂತೆ, ನೊಂದಣಿ ...

ಕಾರವಾರ: ಹಾಸ್ಟೆಲ್ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಾಳಜಿ ವಹಿಸಿ : ಎಸ್.ಕೆ. ವಂಟಿಗೋಡಿ

ವಿದ್ಯಾಭ್ಯಾಸಕ್ಕಾಗಿ ತಮ್ಮ ಪೋಷಕರನ್ನು ಬಿಟ್ಟು ಬಂದು ಹಾಸ್ಟೆಲ್ ಗಳಲ್ಲಿ ನೆಲೆಸಿ, ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ...