ಕಾರವಾರ: ಕಬ್ಬು ಖರೀದಿ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರಲಿ; ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ

Source: S O News | By I.G. Bhatkali | Published on 31st October 2024, 12:37 AM | Coastal News |

ಕಾರವಾರ: ಸರ್ಕಾರದ ಆದೇಶದಂತೆ 2024-25 ನೇ ಸಾಲಿನ ಕಬ್ಬು ಅರೆಯುವ ಹಂಗಾಮು ನವೆಂಬರ್ 15 ರಿಂದ ಆರಂಭವಾಗಲಿದ್ದು, ಜಿಲ್ಲೆಯ ಕಬ್ಬು ಬೆಳಗಾರರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ, ಜಿಲ್ಲೆಯಲ್ಲಿ ಸಂಪೂರ್ಣ ಪಾರದರ್ಶಕ ರೀತಿಯಲ್ಲಿ ಕಬ್ಬು ಖರೀದಿ ಪ್ರಕ್ರಿಯೆಯನ್ನು ನಡೆಸುವಂತೆ ಹಳಿಯಾಳದ ಇಐಡಿ ಪ್ಯಾರಿ ಕಂಪೆನಿಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ಸೂಚನೆ ನೀಡಿದರು.

ಅವರು ಬುಧವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಜಿಲ್ಲೆಯ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು ಮತ್ತು ಕಬ್ಬು ಬೆಳೆಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 13,559.50 ಹೆಕ್ಟೇರ್ ನಲ್ಲಿ ಕಬ್ಬು ಬೆಳೆಯಲಾಗಿದ್ದು, ಕಬ್ಬು ಬೆಳಗಾರರಿಗೆ ಪ್ರತೀ ಮೆ. ಟನ್‌ಗೆ ಗರಿಷ್ಠ ದರ ನೀಡಿ ಕಬ್ಬು ಖರೀದಿಸುವಂತೆ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳಿಗೆ ತಿಳಿಸಿದ ಜಿಲ್ಲಾಧಿಕಾರಿಗಳು, ಕಬ್ಬು ಕಟಾವು, ಸಾಗಾಣಿಕೆ, ಖರೀದಿ, ತೂಕ ಸೇರಿದಂತೆ ಯಾವುದೇ ಪ್ರಕ್ರಿಯೆಗಳಲ್ಲಿ ಜಿಲ್ಲೆಯ ಕಬ್ಬು ಬೆಳಗಾರರಿಗೆ ವಂಚನೆಯಾಗದAತೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಸಕ್ಕರೆ ಕಾರ್ಖಾನೆಯು ಕಬ್ಬಿನ ಉಪ ಉತ್ಪನ್ನಗಳಿಂದ ಪಡೆಯುವ ಲಾಭವನ್ನು ರೈತರಿಗೆ ಹಂಚಬೇಕು, ಕಬ್ಬು ಕಟಾವುಗೆ ನಿಗಧಿಪಡಿಸಿರುವ ಪ್ರದೇಶದ ವ್ಯಾಪ್ತಿಯ ಬಗ್ಗೆ ಪರಿಶೀಲಿಸಿ, ರೈತರಿಗೆ ಅನುಕೂಲವಾಗುವಂತೆ ವ್ಯಾಪ್ತಿ ಮಿತಿಯಲ್ಲಿ ಅಗತ್ಯ ಬದಲಾವಣೆ ಮಾಡಬೇಕು, ಕಬ್ಬು ಕಟಾವು ಮತ್ತು ಸಾಗಾಣಿಕಾ ವೆಚ್ಚವನ್ನು ಸರ್ಕಾರದ ಸುತ್ತೊಲೆ ಪ್ರಕಾರ ವಸೂಲಿ ಮಾಡಬೇಕು ಎಂದರು.

 ಕಬ್ಬು ಕಟಾವು ಸಂದರ್ಭದಲ್ಲಿ ಆದ್ಯತಾ ಪಟ್ಟಿಯನ್ನು ಸಿದ್ದಪಡಿಸಿ, ಈ ಕುರಿತು ಪಟ್ಟಯನ್ನು ಎಲ್ಲಾ ಗ್ರಾಮಗಳಲ್ಲಿನ ರೈತರಿಗೆ ನೀಡಬೇಕು. ನಿಗಧಿತ ಪಟ್ಟಿಯ ಪ್ರಕಾರವೇ ರೈತರ ಜಮಿನುಗಳಲ್ಲಿ ಕಬ್ಬು ಕಟಾವು ಮಾಡಬೇಕು. ಇದನ್ನು ಉಲ್ಲಂಘಿಸಿದ್ದಲ್ಲಿ ಸಂಬಂಧಪಟ್ಟವರ ವಿರುದ್ದ ಪೊಲೀಸ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿಗಳು, ಕಬ್ಬು ತೂಕ ಮಾಡುವ ಯಂತ್ರವನ್ನು ಕಾರ್ಖಾನೆ ಮುಂದೆ ಅಳಡಿಸುವಂತೆ ಮತ್ತು ತೂಕದ ವಿವರಗಳನ್ನು ರೈತರಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸುವುದುರ ಜೊತೆಗೆ ಅನಾವಶ್ಯಕವಾಗಿ ಖರೀದಿಯಲ್ಲಿ ವಿಳಂಬ ಮಾಡಿ, ಕಬ್ಬು ಒಣಗಿ ಇಳುವರಿ ಕಡಿಮೆ ಮಾಡದಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಕಬ್ಬು ಕಾರ್ಖಾನೆ ತಲುಪಿದ ನಂತರ ತಕ್ಷಣ ತೂಕ ಮಾಡಿ ರೈತರಿಗೆ ಎಸ್.ಎಂ.ಎಸ್ ಮೂಲಕ ತಲುಪಿಸುವಂತೆ ಹಾಗೂ ಖರೀದಿ ಕುರಿತ ಬಿಲ್‌ನ್ನು ನೀಡುವಂತೆ ಸೂಚನೆ ನೀಡಿದ ಅವರು, ಕಾರ್ಖಾನೆ ಆರಂಭಿಸುವ ಮೊದಲು ಜಿಲ್ಲಾಡಳಿತ ಮತ್ತು ರೈತರಿಗೆ ಮಾಹಿತಿ ನೀಡಬೇಕು. ಕಬ್ಬು ಕಡಿಯುವ ಗ್ಯಾಂಗ್‌ಗಳು ರೈತರಿಂದ ಯಾವುದೇ ಶುಲ್ಕ ವಸೂಲಿ ಮಾಡಬಾರದು ಎಂದರು.

ಕಬ್ಬು ಬೆಳೆಗಾರರು, ಅಧಿಕಾರಿಗಳು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಈ ಸಮಿತಿಯ ಮೂಲಕ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅಗತ್ಯ ಪರಿಹಾರ ಕಂಡುಕೊಳ್ಳುವAತೆ ತಿಳಿಸಿದರು.

ಕಬ್ಬು ಅರೆಯುವ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆ ಮತ್ತು ಕಬ್ಬು ಬೆಳಗಾರರು ಕಾನೂನು ಸುವ್ಯವಸ್ಥೆಗೆ ಭಂಗವಾಗದಂತೆ  ಪರಸ್ಪರ ಸಮನ್ವಯದಿಂದ ವರ್ತಿಸುವಂತೆ ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್, ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗÀಳನ್ನು ಈಡೇರಿಸುವ ಬಗ್ಗೆ ಜಿಲ್ಲಾಡಳಿತ ಕಾರ್ಯೋನ್ಮುಖವಾಗಿದ್ದು, ಸಕ್ಕರೆ ಕಾರ್ಖಾನೆಯು ರೈತರ ಬೇಡಿಕೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದರು.

ಹಿಂದಿನ ವರ್ಷ ಕಬ್ಬು ಕಟಾವು ಸಾಗಾಣಿಕೆ ವೆಚ್ಚ ಹೆಚ್ಚುವರಿ ಕಡಿತದ ಮೊತ್ತ ರೈತರಿಗೆ ರೂ.120 ಹೆಚ್ಚುವರಿ ಹಣ ಪಾವತಿಸಬೇಕು, 2017-18 ರಿಂದ ಕಬ್ಬಿನ ಉಪ ಉತ್ಪನ್ನಗಳ ಲಾಭ ರೈತರಿಗೆ ಹಂಚಿಕೆ ಇದುವರೆಗೆ ಮಾಡದೇ ಇರುವುದರಿಂದ ಸದರಿ ಉಪ ಉತ್ಪನ್ನಗಳ ಆಡಿಟ್ ಮಾಡಿ ರೈತರಿಗೆ ಅದರ ಲಾಭ ಕಾನೂನಿ ಪ್ರಕಾರ ನೀಡಬೇಕು. 2022-23 ನೇ ಸಾಲಿನ ಸರ್ಕಾರದ ಆದೇಶ ಮಾಡಿರುವ ಕಬ್ಬಿನ ಹೆಚ್ಚುವರಿ ದರ ರೈತರಿಗೆ ನೀಡಬೇಕು, ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಸರ್ಕಾರ ಜಾರಿ ಮಾಡಿರುವ ದ್ವಿಪಕ್ಷೀಯ ಒಪ್ಪಂದ ಪತ್ರ ಕೂಡಲೇ ಜಾರಿ ಮಾಡಬೇಕು ಮತ್ತಿತರ ವಿಷಯಗಳ ಬಗ್ಗೆ ರೈತರು ಮನವಿ ಸಲ್ಲಿಸಿದರು. 

 ರೈತರ ಎಲ್ಲಾ ಮನವಿಗಳ ಬಗ್ಗೆ ರಾಜ್ಯ ಸಕ್ಕರೆ ಆಯುಕ್ತರ ಗಮನಕ್ಕೆ ತಂದು ಅಗತ್ಯ ಪರಿಹರ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಉಪ ವಿಭಾಗಾಧಿಕಾರಿ ಕನಿಷ್ಕ, ಅಪರ ಜಿಲ್ಲಾಧಿಕಾರಿ ಸಾಜಿದ್ ಅಹ್ಮದ್ ಮುಲ್ಲಾ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮಂಜುನಾಥ ರೇವಣ್‌ಕರ್, ವಿವಿಧ ಇಲಾಖೆಯ ಅಧಿಕಾರಿಗಳು, ಕಬ್ಬು ಬೆಳಗಾರರ ಸಂಘದ ಪದಾಧಿಕಾರಿಗಳು, ಇಐಡಿ ಪ್ಯಾರಿ ಕಂಪನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
 

Read These Next

ಕಾರವಾರ: ಮಾತೃ ವಂದನಾ ಮೊತ್ತವನ್ನು ಸಕಾಲದಲ್ಲಿ ಪಾವತಿಸಿ: ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ

ಜಿಲ್ಲೆಯಲ್ಲಿ ಮಾತೃವಂದನಾ ಯೋಜನೆಯಡಿ ನೊಂದಣಿಯಾಗಿರುವ ಗರ್ಭಿಣಿ ಮಹಿಳೆಯರಿಗೆ ನೀಡುವ ಸಹಾಯಧನದ ಮೊತ್ತವನ್ನು ನಿಗಧಿತ ಅವಧಿಯೊಳಗೆ ...