ಭಯೋತ್ಪಾದಕ ಆರೋಪದಡಿ ಬಂಧಿತ ಭಟ್ಕಳದ ಸಿದ್ದಿಬಾಪ ನಿರಪರಾಧಿ; ಬಿಡುಗಡೆಗೆ ಆದೇಶಿಸಿದ ನ್ಯಾಯಾಲಯ
ಭಟ್ಕಳ: ನಿಷೇಧಿತ ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಸದಸ್ಯನಾಗಿದ್ದು, ೨೦೦೭ರಿಂದ ದೇಶದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ಭಟ್ಕಳದ ಅಬ್ದುಲ್ ವಾಹಿದ್ ಸಿದ್ದಿಬಾಪ ಅವರನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿ ಬಿಡುಗಡೆಯ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ.
ಅಬ್ದುಲ್ ವಾಹಿದ್ ಅವರ ವಕೀಲ ಎಂಎಸ್ ಖಾನ್, ಈ ಕುರಿತಂತೆ ಸಾಹಿಲ್ ಆನ್‌ಲೈನ್ ಕ್ಕೆ ಮಾಹಿತಿ ನೀಡಿದ್ದು, ನ್ಯಾಯಾಲಯವು ಆರೋಪಿ ಅಬ್ದುಲ್ ವಾಹಿದ್ ಸಿದ್ದಿಬಾಪರನ್ನು ಎಲ್ಲಾ ಆರೋಪಗಳಿಂದ ಬಿಡುಗಡೆ ಮಾಡಿದೆ ಎಂದು ಹೇಳಿದ್ದಾರೆ.
Delhi court acquitts Bhatkal youth after seven years
ವಿಚಾರಣಾಧೀನ ಕೈದಿಗಳಿಗೆ ಕಾನೂನು ನೆರವು ನೀಡುವ ಸಂಘಟನೆಯಾದ ಜಮಿಯತ್ ಉಲಮಾ ಹಿಂದ್ ಕಾನೂನು ನೆರವು ಸಮಿತಿಯ ಮುಖ್ಯಸ್ಥ ಗುಲ್ಜಾರ್ ಅಜ್ಮಿ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡುತ್ತಾ, ಏಳು ವರ್ಷಗಳ ಹಿಂದೆ ಆರೋಪಿಯನ್ನು ಭುಯೋತ್ಪಾದಕ ಚಟುವಟಿಕೆ ಆರೋಪದ ಮೇಲೆ ಬಂಧಿಸಲಾಗಿತ್ತು, ಈಗ ನ್ಯಾಯಾಲಯ ಅವರನ್ನು ಆರೋಪಮುಕ್ತಗೊಳಿಸಿ ಬಿಡುಗಡೆಗೊಳೀಸಿದೆ ಎಂದು ಮಾಹಿತಿ ನೀಡಿದ್ದಾರೆ.
ಅಬ್ದುಲ್ ವಾಹಿದ್ ಸಿದ್ದಿಬಾಪಾ ಅವರನ್ನು ಮೇ ೨೦, ೨೦೧೬ ರಂದು ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್.ಐ.ಎ ಬಂಧಿಸಿತ್ತು. ಇಂಡಿಯನ್ ಮುಜಾಹಿದ್ದೀನ್ ಮುಖ್ಯಸ್ಥ ಯಾಸೀನ್ ಭಟ್ಕಳ್ ಅವರ ಸಂಬಂಧಿ ಎಂದು ಆರೋಪಿಸಲಾಗಿತ್ತು. ದುಬೈನಲ್ಲಿ ನೆಲೆಸಿರುವಾಗ ಅಬ್ದುಲ್ ವಾಹಿದ್ ಅವರು ನಿಷೇಧಿತ ಸಂಘಟನೆಗೆ ಸೇರುವಂತೆ ಜನರ ಮನವೊಲಿಸುತ್ತಿದ್ದರು ಎಂಬ ಆರೋಪವನ್ನೂ ಹೊರಿಸಲಾಗಿತ್ತು. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ದುಬೈನಲ್ಲಿ ಹಣ ಸಂಗ್ರಹಿಸಿದ್ದ ಆರೋಪವೂ ಅವರ ಮೇಲಿತ್ತು. ಆದರೆ ಪಟಿಯಾಲ ಹೌಸ್ ಸೆಷನ್ ಕೋರ್ಟ್ ಅವರ ವಿರುದ್ಧ ಹೊರಿಸಲಾದ ಎಲ್ಲಾ ಆರೋಪಗಳಿಂದ ಅವರನ್ನು ಖುಲಾಸೆಗೊಳಿಸಿದೆ ಮತ್ತು ಅವರನ್ನು ಬಿಡುಗಡೆ ಮಾಡಲು ಆದೇಶಿಸಿದೆ.
ಅಬ್ದುಲ್ ವಾಹಿದ್ ಬಂಧನದ ಮೊದಲ ದಿನದಿಂದ ಪ್ರಕರಣವನ್ನು ನಿರ್ವಹಿಸುತ್ತಿದ್ದ ಜಮೀಯತುಲ್ ಉಲಮಾದ ವಕೀಲ ಎಂ.ಎಸ್.ಖಾನ್, ತನ್ನ ಕಕ್ಷಿದಾರನು ಸಂಪೂರ್ಣವಾಗಿ ನಿರಪರಾಧಿ ಮತ್ತು ಸುಳ್ಳು ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದಾನೆ ಎಂಬುದು ತಿಳಿದಿತ್ತು. ಈಗ ಆತ ನಿರಪರಾಧಿ ಎಂದು ಸಾಬೀತಾಗಿರುವುದು ಸಂತೋಷವಾಗಿದೆ ಎಂದು ಹೇಳಿದರು. ನ್ಯಾಯಾಲಯವು ಅಬ್ದುಲ್ ವಾಹಿದ್ ಬಿಡುಗಡೆಗೆ ಆದೇಶಿಸಿದ್ದು, ಸೋಮವಾರ ಜೈಲಿನಿಂದ ಹೊರಬರಲಿದ್ದಾರೆ ಎಂದು ನ್ಯಾಯಾವಾದಿ ಎಂ.ಎಸ್.ಖಾನ್ ಹೇಳಿದ್ದಾರೆ.