ಶಾರ್ಜಾ: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 10 ವಿಕೆಟ್ ಗಳ ಭರ್ಜರಿ ಜಯಗಳಿಸಿದ್ದು, ಮೂರನೇ ಸ್ಥಾನದೊಂದಿಗೆ ಪ್ಲೇಆಫ್ ಪ್ರವೇಶಿಸಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತ ಮುಂಬೈ ಮೊದಲು ಬ್ಯಾಟಿಂಗ್ ಮಾಡಿತು. ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿದ ಮುಂಬೈ, ಸುಲಭ ಗುರಿಯನ್ನು ಹೈದರಾಬಾದ್ ಗೆ ನೀಡಿತು.
ಪೊಲಾರ್ಡ್ 41, ಸೂರ್ಯಕುಮಾರ್ ಯಾದವ್ 36, ಇಶಾನ್ ಕಿಶಾನ್ 33, ಡಿಕಾಕ್ 25 ರನ್ ಬಾರಿಸಿದರು. ಹೈದರಾಬಾದ್ ಪರ ಸಂದೀಪ್ ಶರ್ಮಾ 3, ಹೋಲ್ಡರ್ ಹಾಗೂ ನದೀಮ್ ತಲಾ 2 ವಿಕೆಟ್ ಕಬಳಿಸಿದರು.
150 ರನ್ ಗಳ ಗುರಿ ಬೆನ್ನತ್ತಿದ ಹೈದರಾಬಾದ್ ಕೇವಲ 17.1 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ ಗೆಲುವಿನ ದಡ ತಲುಪಿತು. ಆರಂಭಿಕ ಆಟಗಾರರಾದ ವಾರ್ನರ್ ಹಾಗೂ ಸಾಹಾ ಮೊದಲ ವಿಕೆಟ್ ಗೆ ಭರ್ಜರಿ ಜೊತೆಯಾಟ ನಡೆಸಿದರು. ವಾರ್ನರ್ 81( 57 ಎಸೆತ) ಸಾಹಾ 58 ( 44 ಎಸೆತ) ಗಳಿಸಿದರು.
ಈ ಗೆಲುವಿನೊಂದಿಗೆ ಹೈದರಾಬಾದ್ ಪ್ಲೇಆಫ್ ಪ್ರವೇಶಿಸಿದ್ದು, ನಾಲ್ಕನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆ ಎಲಿಮನೇಟರ್ ನಲ್ಲಿ ಆಡಲಿದೆ. ಹೈದರಾಬಾದ್ ಸೋಲನ್ನು ಕಾದುಕುಳಿತಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ನೆಟ್ ರನ್ ರೇಟ್ ಆಧಾರದ ಮೇಲೆ ಟೂರ್ನಿಯಿಂದ ಹೊರನಡೆಯಿತು.
ಮುಂಬೈ ಈಗಾಗಲೇ ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗಿದ್ದು, ಕ್ವಾಲಿಫೈರ್1 ರಲ್ಲಿ ಡೆಲ್ಲಿಯನ್ನು ಎದುರಿಸಲಿದೆ.