ಮಂಗಳೂರು: ತಮಿಳುನಾಡು ಮತ್ತು ಪುದುಚೇರಿಯಲ್ಲಿ ಕಾಣಿಸಿಕೊಂಡಿರುವ ಫೆಂಗಲ್ ಚಂಡಮಾರುತದ ಪರಿಣಾಮ ದ.ಕ.ಜಿಲ್ಲೆಯ ಮೇಲಾಗಿದೆ. ಸೋಮವಾರ ದ.ಕ.ಜಿಲ್ಲಾದ್ಯಂತ ಭಾರೀ ಮಳೆ ಸುರಿದಿದೆ.
ಹವಾಮಾನ ಇಲಾಖೆಯು ಹೊರಡಿಸಿದ ಪ್ರಕಟನೆಯಂತೆ ಸೋಮವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಮೋಡಕವಿದ ವಾತಾವರಣವಿತ್ತು. ಸಂಜೆ 4ರ ಬಳಿಕ ಮಳೆಯು ತನ್ನ ಅಬ್ಬರ ತೋರಿಸಿತು.
ಮಂಗಳೂರು, ಉಳ್ಳಾಲ, ಬಂಟ್ವಾಳ, ಕಡಬ, ಸುಳ್ಯ, ಪುತ್ತೂರು, ಬೆಳ್ತಂಗಡಿ, ಸುಬ್ರಹ್ಮಣ್ಯ, ಮುಲ್ಕಿ, ಗುರುಪುರ, ಧರ್ಮಸ್ಥಳ, ಚಾರ್ಮಡಿ ಸಹಿತ ಹಲವು ಕಡೆಗಳಲ್ಲಿ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗಿದೆ. ಸಂಜೆ 5ರ ಬಳಿಕ ನಗರ ಸಹಿತ ಹೊರವಲಯದಲ್ಲಿ ಭಾಗಶಃ ಕತ್ತಲು ಆವರಿಸಿತ್ತು. ವಸ್ತುಶಃ ಮಳೆಗಾಲದ ಅನುಭವ ವ್ಯಕ್ತವಾಯಿತು. ನಗರದಲ್ಲಂತೂ ಅರೆಬರೆ ಕಾಮಗಾರಿಯಿಂದಾಗಿ ಮಳೆನೀರು ಸರಾಗವಾಗಿ ಹರಿದು ಹೋಗಲಾಗದೆ ರಸ್ತೆಯಲ್ಲೇ ಹರಿಯಿತು. ಹೊರವಲಯದ ಉಪನಗರಗಳಲ್ಲಿ ಕೂಡ ಮಳೆನೀರು ರಸ್ತೆಯಲ್ಲೇ ಹರಿದ ಪರಿಣಾಮ ವಾಹನಿಗರು ಸಮಸ್ಯೆ ಎದುರಿಸಿದರು. ಜನಸಾಮಾನ್ಯರು ಪರದಾಡುವುದು ಕಂಡು ಬಂತು.
ಸಭಾಂಗಣಕ್ಕೆ ನುಗ್ಗಿದ ನೀರು:
ಸೋಮವಾರ ಉಪ ಲೋಕಾಯುಕ್ತರು ದ.ಕ. ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸುವ ವೇಳೆ ಮಳೆ ನೀರು ಸಭಾಂಗಣದೊಳಗೆ ನುಗ್ಗಿವೆ.
ಕಾರ್ಯಕ್ರಮ ರದ್ದು:
ವಿಕಲಚೇತನರ ದಿನಾಚರಣೆ ಅಂಗವಾಗಿ ನಡೆಯುವ ಜಾಥಾ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದ್ದು, ಉಳಿದಂತೆ ಎಲ್ಲಾ ಕಾರ್ಯಕ್ರಮಗಳು ಯಥಾ ಸ್ಥಿತಿಯಲ್ಲಿ ನಡೆಯಲಿವೆ.
ಆರೆಂಜ್ ಅಲರ್ಟ್:
ಹವಾಮಾನ ಇಲಾಖೆಯು ದ.ಕ.ಜಿಲ್ಲೆಯಲ್ಲಿ ಮಂಗಳವಾರ ಆರೆಂಜ್ ಅಲರ್ಟ್ ಘೋಷಿಸಿದೆ. ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲೆಯಲ್ಲೂ ತೀವ್ರ ಮಳೆಯಾಗುವ ಸಾಧ್ಯತೆ ಇರುವುದರಿಂದ ಎಲ್ಲಾ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸಾರ್ವಜನಿಕರ ಹಾಗೂ ಎಲ್ಲಾ ಜಾನುವಾರುಗಳ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ದ.ಕ.ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಮುನ್ನೆಚ್ಚರಿಕೆ ವಹಿಸಲು ಸೂಚನೆ: ಮಳೆಗಾಲದಲ್ಲಿ ಅನುಸರಿಸುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಷ್ಠಾನಕ್ಕೆ ತರಲು ಗ್ರಾಪಂ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ತಕ್ಷಣದಿಂದಲೇ ಸಿದ್ದರಾಗಬೇಕು. ಆಯಾ ತಹಶೀಲ್ದಾರರು ಈ ಬಗ್ಗೆ ಮೇಲ್ವಿಚಾರಣೆ ವಹಿಸಬೇಕು. ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ತಕ್ಷಣ ವರದಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಸಮುದ್ರಕ್ಕೆ ತೆರಳದಂತೆ ಮೀನುಗಾರರಿಗೆ ಸೂಚನೆ:
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಡಿ.6ರವರೆಗೆ ಅರಬಿ ಸಮುದ್ರವು ಪ್ರಕ್ಷುಬ್ಧವಾಗಿರುವ ಕಾರಣ ಅನಾಹುತ ತಡೆಯುವ ಸಲುವಾಗಿ ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ಸೂಚಿಸಿದ್ದಾರೆ.
ಶಾಲೆ, ಪಿಯು ಕಾಲೇಜುಗಳಿಗೆ ರಜೆ:
ಫೆಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ಡಿ.3ರಂದು ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ ಮತ್ತು ಅನುದಾನಿತ ಹಾಗೂ ಖಾಸಗಿ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್ ಎಂ.ಪಿ., ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಮತ್ತು ಕಾಸರಗೋಡು ಜಿಲ್ಲಾಧಿಕಾರಿ ಕೆ.ಇನ್ಯಾಶೇಖರ್ ಆದೇಶ ಹೊರಡಿಸಿದ್ದಾರೆ.
ಕಾಸರಗೋಡಿನ ಮದ್ರಸಗಳಿಗೂ ರಜೆ ಅನ್ವಯವಾಗಲಿದೆ ಎಂದು ಇನ್ಸಾಶೇಖರ್ ತಿಳಿಸಿದ್ದಾರೆ. ಉಡುಪಿಯ ಸಾರ್ವಜನಿಕರು ತುರ್ತುಸೇವೆ ಅಗತ್ಯವಿದ್ದಲ್ಲಿ ಶುಲ್ಕರಹಿತ ನಂಬರ್: 1077, ದೂ. ಸಂ.: 0820-2574802 ಅನ್ನು ಸಂಪರ್ಕ ಸಬಹುದು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.