ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆಗೆ ಮುಂದುವರಿದ ಆಕ್ರೋಶ; 17 ದೇಶಗಳ ಖಂಡನೆ; ಗಲ್ಫ್ ಸಹಕಾರ ಮಂಡಳಿಯಿಂದಲೂ ಆಕ್ಷೇಪ

Source: Vb | By I.G. Bhatkali | Published on 9th June 2022, 3:01 AM | National News | Gulf News |

ಹೊಸದಿಲ್ಲಿ: ತಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಒತ್ತಿ ಹೇಳುವ ಮೂಲಕ ವಿವಿಧ ದೇಶಗಳಲ್ಲಿ ಭುಗಿಲೆದ್ದಿರುವ ಕ್ರೋಧದ ಅಲೆಯನ್ನು ಶಮನಗೊಳಿಸಲು ಭಾರತವು ಮುಂದಾಗಿದ್ದರೂ ಪ್ರವಾದಿ ಮುಹಮ್ಮದರ ಕುರಿತು ಬಿಜೆಪಿ ನಾಯಕರಾದ ನೂಪುರ್ ಶರ್ಮಾ ಮತ್ತು ನವೀನ್‌ ಕುಮಾರ್ ಜಿಂದಾಲ್ ಅವರ ವಿವಾದಾತ್ಮಕ ಹೇಳಿಕೆಗಳ ಕುರಿತು ಜಗತ್ತಿನ ವಿವಿಧೆಡೆ ರಾಜತಾಂತ್ರಿಕ ಆಕ್ರೋಶವು ಮುಂದುವರಿದಿದೆ.

ಇರಾಕ್, ಇರಾನ್, ಕುವೈತ್, ಖತರ್, ಸೌದಿ ಅರೇಬಿಯ, ಒಮಾನ್‌, ಯುಎಇ, ಜೋರ್ಡಾನ್, ಅಫ್ಘಾನಿಸ್ತಾನ, ಪಾಕಿಸ್ತಾನ, ಬಹರೈನ್, ಮಾಲ್ಲೀವ್, ಲಿಬಿಯಾ, ಟರ್ಕಿ ಮತ್ತು ಇಂಡೋನೇಶ್ಯಾ ದೇಶಗಳು ಸೇರಿದಂತೆ 17 ದೇಶಗಳು ವಿವಾದಾತ್ಮಕ ಹೇಳಿಕೆಗಳ ಕುರಿತು ಭಾರತದ ವಿರುದ್ಧ ಅಧಿಕೃತ ಪ್ರತಿಭಟನೆಗಳನ್ನು ದಾಖಲಿಸಿವೆ. ಈ ದೇಶಗಳು ಪ್ರವಾದಿಯವರಿಗೆ ಅವಮಾನಗಳನ್ನು ತಿರಸ್ಕರಿಸಿವೆ ಮತ್ತು ಭಾರತ ಸರಕಾರದಿಂದ ಕ್ಷಮಾಯಾಚನೆಯನ್ನು ಆಗ್ರಹಿಸಿವೆ.

ಈಜಿಪ್ಟ್ನ ಅತ್ಯುನ್ನತ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಪೀಠವಾದ ಅಲ್ ಅಝರ್ ಅಲ್ ಶರೀಫ್, ಇಸ್ಲಾಮಿಕ್‌ ಸಹಕಾರ ಸಂಘಟನೆ(ಒಐಸಿ) ಹಾಗೂ ಗಲ್ಸ್ ಸಹಕಾರ ಮಂಡಳಿ (ಜಿಸಿಸಿ) ಖಂಡನೆ ವ್ಯಕ್ತಪಡಿಸಿವೆ. ಇತ್ತ ಇಬ್ಬರು ಬಿಜೆಪಿ ನಾಯಕರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಡವನ್ನು ಹೆಚ್ಚಿಸಿರುವ ಪ್ರತಿಪಕ್ಷಗಳು, ಬಿಜೆಪಿಯು ಅಂತರ್‌ ರಾಷ್ಟ್ರೀಯ ಮಟ್ಟದಲ್ಲಿ ದೇಶದ ವರ್ಚಸ್ಸನ್ನು ಕೆಡಿಸುತ್ತಿದೆ ಎಂದು ಆರೋಪಿಸಿವೆ. ಈಜಿಪ್ಟಿನ ಪ್ರಧಾನ ಮುಷ್ಠಿಯವರು ಕೂಡಾ ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್‌ ಪ್ರವಾದಿ ಕುರಿತ ವಿವಾದಾತ್ಮಕ ಟೀಕೆಗಳಿಗೆ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಪ್ರವಾದಿ ಮುಹಮ್ಮದ್‌ ಕುರಿತು ವಿವಾದಾತ್ಮಕ ಹೇಳಿಕೆಗಳು ವಿರುದ್ಧ ಅರಬ್ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಆಸಮಾಧಾನದ ಅಲೆಯನ್ನು ಸೃಷ್ಟಿಸಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ಹ್ಯಾಷ್ ಟ್ಯಾಗ್ ಗಳೊಂದಿಗೆ ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಲಾಗುತ್ತಿದೆ. ಆ ಬಳಿಕ ಎಚ್ಚೆತ್ತುಕೊಂಡಿದ್ದ ಬಿಜೆಪಿಯು ರವಿವಾರ ಪಕ್ಷದ ರಾಷ್ಟ್ರೀಯ ವಕ್ತಾರರಾಗಿದ್ದ ನೂಪುರ್ ಶರ್ಮಾರನ್ನು ಅಮಾನತುಗೊಳಿಸಿತ್ತು ಮತ್ತು ಪಕ್ಷದ ದಿಲ್ಲಿ ಘಟಕದ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದ ನವೀನ್ ಕುಮಾರ್ ಜಿಂದಾಲ್ ಅವರನ್ನು ಉಚ್ಚಾಟಿಸಿತ್ತು. ಯಾವುದೇ ಪಂಥ ಅಥವಾ ಧರ್ಮವನ್ನು ಅವಮಾನಿಸುವ ಯಾವುದೇ ಸಿದ್ಧಾಂತವನ್ನು ತಾನು ಬಲವಾಗಿ ವಿರೋಧಿಸುತ್ತೇನೆ ಮತ್ತು ಇಂತಹ ಜನರನ್ನು ಹಾಗೂ ಸಿದ್ದಾಂತಗಳನ್ನು ತಾನು ಉತ್ತೇಜಿಸುವುದಿಲ್ಲ ಎಂದು ಬಿಜೆಪಿ ಹೇಳಿಕೆಯಲ್ಲಿ ತಿಳಿಸಿತ್ತು.

ಪ್ರವಾದಿಯವರ ಕುರಿತು ಹೇಳಿಕೆಗಳನ್ನು ಖಂಡಿಸಿರುವ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ)ಯು ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿಶ್ವಸಂಸ್ಥೆಯನ್ನು ಆಗ್ರಹಿಸಿದೆ.

ಖತರ್, ಇರಾನ್ ಮತ್ತು ಕುವೈತ್ ರವಿವಾರ ಭಾರತೀಯ ರಾಯಭಾರಿಗಳನ್ನು ಕರೆಸಿಕೊಂಡು ಹೇಳಿಕೆಗಳಿಗೆ ತಮ್ಮ ತೀವ್ರ ಪ್ರತಿಭಟನೆ ಮತ್ತು ಖಂಡನೆಗಳನ್ನು ವ್ಯಕ್ತಪಡಿಸಿದ್ದವು. ವಿವಾದಾತ್ಮಕ ಹೇಳಿಕೆಗಳು ವಿವಿಧ ದೇಶಗಳಲ್ಲಿ ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್‌ಗಳಿಗೂ ಕಾರಣವಾಗಿವೆ.

ದೇಶಾದ್ಯಂತ ಸರಣಿ ಕೋಮು ಘಟನೆಗಳ ಹಿನ್ನೆಲೆಯಲ್ಲಿ ಕಳೆದ ವಾರ ಸುದ್ದಿವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಶರ್ಮಾ ಪ್ರವಾದಿಯವರ ಕುರಿತು ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದರು. ಜಿಂದಾಲ್ ಅವರು ಪ್ರವಾದಿಯವರ ಕುರಿತು ಟ್ವಿಟ್‌ನ್ನು ಪೋಸ್ಟ್ ಮಾಡಿ ನಂತರ ಅದನ್ನು ಅಳಿಸಿದ್ದರು. ತನಗೆ ಜೀವ ಬೆದರಿಕೆಗಳು ಬರುತ್ತಿವೆ ಎಂದು ನೂಪುರ್ ಶರ್ಮಾ ನೀಡಿದ ದೂರಿನ ಆಧಾರದಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವ ದಿಲ್ಲಿ ಪೊಲೀಸರು ಅವರಿಗೆ ಮತ್ತು ಅವರ ಕುಟುಂಬಕ್ಕೆ ಭದ್ರತೆಯನ್ನು ಒದಗಿ ಸಿದ್ದಾರೆ. ಪಕ್ಷದ ಹುದ್ದೆಯಿಂದ ಅಮಾನತುಗೊಂಡ ಬಳಿಕ ಶರ್ಮಾ ಟ್ವಿಟರ್‌ನಲ್ಲಿ ಕ್ಷಮೆಯಾಚನೆಯನ್ನು ಪೋಸ್ಟ್ ಮಾಡಿ, ಯಾರದ್ದೇ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುವುದು ತನ್ನ ಉದ್ದೇಶವಾಗಿ ರಲಿಲ್ಲ ಎಂದು ಹೇಳಿದ್ದರು.

ಬಿಜೆಪಿ ನಾಯಕರ ವಿವಾದಾತ್ಮಕ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿರುವ ಮುಸ್ಲಿಮ್ ರಾಷ್ಟ್ರಗಳೊಂದಿಗೆ ಸೋಮವಾರ ಧ್ವನಿಗೂಡಿಸಿರುವ ಸಂಯುಕ್ತ ಅರಬ್ ಗಣರಾಜ್ಯ (ಯುಎಎಇ)ವು, ಈ ಹೇಳಿಕೆಗಳು ನೈತಿಕ ಮತ್ತು ಮಾನವೀಯ ಮೌಲ್ಯಗಳು ಹಾಗೂ ತತ್ವಗಳಿಗೆ ವಿರುದ್ಧವಾಗಿವೆ ಎಂದು ಹೇಳಿದೆ. ಧಾರ್ಮಿಕ ಸಂಕೇತಗಳನ್ನು ಗೌರವಿಸುವ ಮತ್ತು ದ್ವೇಷಭಾಷಣಗಳಿಗೆ ಕಡಿವಾಣ ಹಾಕುವ ಅಗತ್ಯವನ್ನು ಅದು ಒತ್ತಿ ಹೇಳಿದೆ.

ಇಸ್ಲಾಮ್‌ ಪ್ರಮುಖ ಸಂಸ್ಥೆಗಳಲ್ಲೊಂದಾಗಿ ರುವ ಕೈರೋದ ಅಲ್ ಅಝರ್ ವಿವಿಯು, ಈ ಹೇಳಿಕೆಗಳು ನಿಜವಾದ ಭೀತಿವಾದವಾಗಿವೆ ಹಾಗೂ ಇಡೀ ಜಗತ್ತನ್ನು ಮಾರಣಾಂತಿಕ ಬಿಕ್ಕಟ್ಟು ಮತ್ತು ಯುದ್ಧಗಳ ಸಂಕಷ್ಟಕ್ಕೆ ತಳ್ಳಬಹುದು ಎಂದು ಸೋಮವಾರ ಹೇಳಿದೆ. ಸೌದಿ ಅರೇಬಿಯದ ಮುಸ್ಲಿಮ್ ವರ್ಲ್ಡ್ ಲೀಗ್, ಈ ಹೇಳಿಕೆಗಳು ದ್ವೇಷವನ್ನು ಪ್ರಚೋದಿಸುತ್ತವೆ ಎಂದು ಹೇಳಿದರೆ ಸೌದಿಯ ಗ್ರಾಂಡ್ ಮಸೀದಿ ಮತ್ತು ಪ್ರವಾದಿಯವರ ಮಸೀದಿಯ ವ್ಯವಹಾರಗಳ ಜನರಲ್ ಪ್ರೆಸಿಡೆನ್ಸಿಯು, ಹೇಳಿಕೆಗಳನ್ನು 'ಹೇಯ ಕೃತ್ಯ 'ಎಂದು ಬಣ್ಣಿಸಿದೆ.

ಶರ್ಮಾರ ಹೇಳಿಕೆಗಳನ್ನು ಆರು ಕೊಲ್ಲಿ ರಾಷ್ಟ್ರಗಳ ಗುಂಪಾಗಿರುವ ಗಲ್ಫ್ ಸಹಕಾರ ಮಂಡಳಿ (ಜಿಸಿಸಿ)ಯು ಖಂಡಿಸಿದೆ ಮತ್ತು ತಿರಸ್ಕರಿಸಿದೆ.

ಬಹರೈನ್, ಕುವೈತ್, ಒಮಾನ್, ಖತರ್, ಯುಎಇ ಮತ್ತು ಸೌದಿ ಅರೇಬಿಯಗಳನ್ನು ಒಳಗೊಂಡಿರುವ ಜಿಸಿಸಿ ಜೊತೆ 2020-21ರಲ್ಲಿ ಭಾರತವು 90 ಶತಕೋಟಿ ಡಾ.ಗಳ ವ್ಯಾಪಾರವನ್ನು ನಡೆಸಿತ್ತು.

Read These Next

ಟೇಕ್‌ಆಫ್‌ಗೆ ಅನುಮತಿ ನೀಡದ ಎಟಿಸಿ; ರಾಹುಲ್ ಗಾಂಧಿ ಹೆಲಿಕಾಪ್ಟರ್ ಹಾರಾಟ ತಾತ್ಕಾಲಿಕ ಸ್ಥಗಿತ

ವಾಯು ಸಂಚಾರ ನಿಯಂತ್ರಣ(ಎಟಿಸಿ) ಟೇಕ್ ಆಫ್;ಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ...

ವಕ್ಫ್ ಜೆಪಿಸಿಯ ಸಭೆಗಳಿಗೆ ಪ್ರತಿಪಕ್ಷ ಸದಸ್ಯರಿಂದ ಬಹಿಷ್ಕಾರ; ಸಂಸದ ಕಲ್ಯಾಣ್ ಬ್ಯಾನರ್ಜಿ ಘೋಷಣೆ

ವಕ್ಫ್ ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಮುಂದಿನ ಸುತ್ತಿನ ಸಭೆಗಳನ್ನು ಪ್ರತಿಪಕ್ಷಗಳ ಸದಸ್ಯರು ಬಹಿಷ್ಕರಿಸುತ್ತಾರೆ ...