ಬೆಂಗಳೂರು: ರಾಜ್ಯದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆಗೆ ಕಾರಣವಾಗಿದ್ದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಎಲ್ಲ ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಭರ್ಜರಿ ಜಯ ದಾಖಲಿಸಿದ್ದರೆ, ಮೂರೂ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸದಲ್ಲಿದ್ದ ಎನ್‌ಡಿಎ ಮೈತ್ರಿಕೂಟ ತೀವ್ರ ಮುಖಭಂಗ ಅನುಭವಿಸಿದೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ 25,413 ಮತಗಳ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರು ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ವಿರುದ್ದ 13,448 ಮತಗಳ ಅಂತರದಿಂದ ಅಚ್ಚರಿಯ ಗೆಲುವು ಸಾಧಿಸಿದ್ದಾರೆ.
ಅತ್ತ ಸಂಡೂರು ಕ್ಷೇತ್ರದಲ್ಲಿಯೂ ಕಾಂಗ್ರೆಸ್‌ನ ಅನ್ನಪೂರ್ಣ ತುಕಾರಾಂ ಅವರು ಬಿಜೆಪಿಯ ಬಂಗಾರು ಹನುಮಂತು ವಿರುದ್ಧ 9,649 ಮತಗಳ ಅಂತರದಿಂದ ಗೆಲುವಿನ ನಗೆಬೀರಿದ್ದಾರೆ.
ಮಾಜಿ ಸಿಎಂಗಳ ಮಕ್ಕಳಿಗೆ ಹೀನಾಯ ಸೋಲು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಾವು ಪ್ರತಿನಿಧಿಸುತ್ತಿದ್ದ ಚನ್ನಪಟ್ಟಣ ಹಾಗೂ ಶಿಗ್ಗಾಂವಿಯಲ್ಲಿ ತಮ್ಮ ಪುತ್ರರನ್ನು ಕಣಕ್ಕಿಳಿಸಿಯೂ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ.
ಚನ್ನಪಟ್ಟಣ ಕ್ಷೇತ್ರವನ್ನು ಕುಮಾರಸ್ವಾಮಿ ಪ್ರತಿಷ್ಠೆಯಾಗಿ ಸ್ವೀಕರಿಸಿ ತಮ್ಮ ಮಗ ನಿಖಿಲ್ ಕುಮಾರಸ್ವಾಮಿಯನ್ನು ಜೆಡಿಎಸ್ -ಬಿಜೆಪಿ ಮೈತ್ರಿಕೂಟ (ಎನ್‌ಡಿಎ)ದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು.
ಮತ್ತೊಂದೆಡೆ ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ತಮ್ಮ ಪುತ್ರ ಭರತ್ ಬೊಮ್ಮಾಯಿಯನ್ನು ಚುನಾವಣಾ ಅಖಾಡಕ್ಕೆ ಇಳಿಸಿದ್ದರು. ಆದರೂ ಮತದಾರರು ಇವರ ಕೈ ಹಿಡಿಯಲಿಲ್ಲ.
ಚನ್ನಪಟ್ಟಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ, ಮಾಜಿ ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಅಬ್ಬರದ ಪ್ರಚಾರ ನಡೆಸಿದರೂ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಎದುರು ಗೆಲುವು ದಾಖಲಿಸಲು ಸಾಧ್ಯವಾಗಿಲ್ಲ.
ಶಿಗ್ಗಾಂವಿಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ರಾಜ್ಯದ ಬಿಜೆಪಿ ನಾಯಕರು ರೋಡ್ ಶೋ, ಬಹಿರಂಗ ಸಭೆಗಳನ್ನು ನಡೆಸಿ ಮತದಾರರ ಮನ ಗೆಲ್ಲಲು ಸಾಧ್ಯವಾಗಿಲ್ಲ.
ತಮ್ಮ ಮೊದಲ ಚುನಾವಣೆಯಲ್ಲೇ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಹಾಯಿ, ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಎದುರು ಪರಾಭವಗೊಂಡರು. ತುಕಾರಾಂ-ಸಂತೋಷ್ ಲಾಡ್ ಸಂಘಟಿತ ಪ್ರಯತ್ನ: ಸಂಡೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಬಳ್ಳಾರಿ ಸಂಸದ ತುಕಾರಾಂ, ಈ ಉಪ ಚುನಾವಣೆಯಲ್ಲಿ ತಮ್ಮ ಪತ್ನಿಯನ್ನೇ ಅಭ್ಯರ್ಥಿಯನ್ನಾಗಿಸಿ ಕಣಕ್ಕಿಳಿಸಿ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತುಕಾರಾಂ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ನಡೆಸಿದ ಸಂಘಟಿತ ಪ್ರಯತ್ನದಿಂದಾಗಿ ಕಾಂಗ್ರೆಸ್ ತನ್ನ ಸ್ಥಾನವನ್ನು ಉಳಿಸಿಕೊಂಡಿತು.
ಜನಾರ್ದನ ರೆಡ್ಡಿಗೆ ಮುಖಭಂಗ: ದಶಕದ ಬಳಿಕ ಬಳ್ಳಾರಿ ಜಿಲ್ಲೆಗೆ ಪ್ರವೇಶ ಮಾಡಿದ್ದ ಗಣಿಧಣಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ತಮ್ಮ ಆಪ್ತ ಬಂಗಾರು ಹನುಮಂತುಗೆ ಬಿಜೆಪಿ ಟಿಕೆಟ್ ಕೊಡಿಸಿ, ಚುನಾವಣೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಆದರೂ, ಮತದಾರರು ಮಾತ್ರ ತುಕಾರಾಂ ಅವರ ಪತ್ನಿ ಅನ್ನಪೂರ್ಣಗೆ ಆಶೀರ್ವಾದ ಮಾಡುವ ಮೂಲಕ ಜನಾರ್ದನ ರೆಡ್ಡಿಗೆ ಮುಖಭಂಗ ಮಾಡಿದರು.
ಕೈ ಹಿಡಿದ ಗ್ಯಾರಂಟಿ ಯೋಜನೆಗಳು: ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ರಾಜಕೀಯ ಕಾರಣಗಳು ಹೊರತುಪಡಿಸಿದರೆ, ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಸೇರಿದಂತೆ ಐದು ಗ್ಯಾರಂಟಿಗಳು ಮತದಾರರ ಮೇಲೆ ಪ್ರಭಾವ ಬೀರಿದಂತೆ ಕಾಣುತ್ತಿದೆ. ಚುನಾವಣೆ ಸಂದರ್ಭದಲ್ಲೇ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗಳಿಗೆ ಹಣ ಜಮೆಯಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಗಳಿಗೆ ವರವಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ. ಸಕಾಲಕ್ಕೆ ಅಭ್ಯರ್ಥಿಗಳ ಆಯ್ಕೆ ಹಾಗೂ ಬಂಡಾಯ ಶಮನ ಮಾಡುವಲ್ಲಿ ಯಶಸ್ವಿಯಾಗಿದ್ದು ಹಾಗೂ ಪ್ರಮುಖವಾಗಿ ಚನ್ನಪಟ್ಟಣ ಮತ್ತು ಶಿಗ್ಗಾಂವಿಯಲ್ಲಿ ಅಲ್ಪ ಸಂಖ್ಯಾತ ಮುಸ್ಲಿಮ್ ಸಮುದಾಯ, ಎಸ್‌ಸಿ-ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ಮತಗಳು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಚಲಾವಣೆಯಾದದ್ದು ಗೆಲುವಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೇರೆ ಬೇರೆ ತಂಡಗಳನ್ನು ರಚಿಸಿಕೊಂಡು ನಿರಂತರವಾಗಿ ಮೂರು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದು, ಗ್ಯಾರಂಟಿ ಯೋಜನೆಗಳು ಮತದಾರರಿಗೆ ತಲುಪುವಂತೆ ಮಾಡಿದ್ದು, ಟೀಕೆ ಟಿಪ್ಪಣಿಗಳಿಗೆ ಆದ್ಯತೆ ನೀಡದೆ ಹೆಚ್ಚಾಗಿ ಅಭಿವೃದ್ಧಿ ವಿಚಾರಗಳು ಪ್ರಧಾನವಾಗಿಟ್ಟುಕೊಂಡು ಕಾಂಗ್ರೆಸ್ ನಾಯಕರು ಪ್ರಚಾರ ಮಾಡಿದ್ದು ಮತದಾರರ ಮನ ಗೆಲ್ಲಲು ಪ್ರಮುಖ್ ಕಾರಣವಾಗಿದೆ.
ಶಿಗ್ಗಾಂವಿಯಲ್ಲಿ 'ಕೈ' ಬಾವುಟ ಹಾರಿಸಿದ ಪಠಾಣ್: ಶಿಗ್ಗಾಂವಿಯಲ್ಲಿ 30 ವರ್ಷಗಳ ಬಳಿಕ ಕಾಂಗ್ರೆಸ್ ಬಾವುಟವನ್ನು ಯಾಸೀರ್ ಅಹ್ಮದ್ ಖಾನ್ ಪಠಾಣ್ ಹಾರಿಸಿದ್ದಾರೆ. 1994ರಲ್ಲಿ ಮಂಜುನಾಥ್ ಕುನ್ನೂರು ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಆನಂತರ, ಕಾಂಗ್ರೆಸ್ ಒಮ್ಮೆಯೂ ಈ ಕ್ಷೇತ್ರದಲ್ಲಿ ಜಯ ದಾಖಲಿಸಲಿಲ್ಲ. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾದ ನಂತರ ಸತತ ನಾಲ್ಕು ಬಾರಿ ಬಸವರಾಜ ಬೊಮ್ಮಾಯಿ ಈ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಅವರ ರಾಜೀನಾಮೆಯಿಂದ ತೆರವಾದ ಈ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಜಯ ಸಾಧಿಸಿದ್ದಾರೆ.