ಎಫ್‌ಐಆರ್ ದಾಖಲು: ನಿರ್ಮಲಾ ಸೀತಾರಾಮನ್ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ
ಹೊಸದಿಲ್ಲಿ: ಈಗ ರದ್ದುಪಡಿಸಲಾಗಿರುವ ಚುನಾವಣಾ ಬಾಂಡ್ ಯೋಜನೆಗೆ ಸಂಬಂಧಿಸಿದ ದೂರಿನ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಾದ ಬಳಿಕ ಕಾಂಗ್ರೆಸ್ ರವಿವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ ಹಾಗೂ ಪ್ರಜಾಪ್ರಭುತ್ವವನ್ನು ಕಡೆಗಣಿಸಿರುವುದಕ್ಕೆ ನಿರ್ಮಲಾ ಸೀತಾರಾಮನ್ ಅವರು ರಾಜೀನಾಮೆ ನೀಡುವಂತೆ ಆಗ್ರಹಿಸಿದೆ.
ಸಂಪೂರ್ಣ ಚುನಾವಣಾ ಬಾಂಡ್ ಯೋಜನೆಯ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಮೂಲಕ ತನಿಖೆ ನಡೆಸಬೇಕು ಎಂಬ ತನ್ನ ಆಗ್ರಹವನ್ನು ಕಾಂಗ್ರೆಸ್ ಪುನರುಚ್ಚರಿಸಿದೆ.
ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಫ್ಟಿ ಅವರೊಂದಿಗೆ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ (ಸಂವಹನ ಉಸ್ತುವಾರಿ) ಜೈರಾಮ್ ರಮೇಶ್, ಚುನಾವಣಾ ಬಾಂಡ್‌ಗಳ ಪಿತೂರಿ ಮೂಲಕ ಹಣ ಸುಲಿಗೆ ಮಾಡಲು ನಾಲ್ಕು ದಾರಿಗಳನ್ನು ಬಳಸಲಾಗಿದೆ. ಪ್ರೀಪೇಯ್ಡ್ ಲಂಚ, ಪೋಸ್ಟ್ ಪೇಯ್ಡ್ ಲಂಚ, ದಾಳಿಯ ಆನಂತರದ ಲಂಚ ಹಾಗೂ ಬೇನಾಮಿ ಕಂಪೆನಿಗಳ ಮೂಲಕ ಲಂಚ ಎಂದು ಹೇಳಿದರು.