ನಾಡಿನ ಜನತೆಯಲ್ಲಿ ನಮ್ಮೆಲ್ಲರ ಒಕ್ಕೊರಲ ಮನವಿ:
ಇದು, ನಾವು ಹೆಚ್ಚು ಮನುಷ್ಯರಾಗುವ ಕಾಲ. ಪ್ರೀತಿ, ಶಾಂತಿ, ಸರ್ವರ ಕ್ಷೇಮವೇ ನಮ್ಮೆಲ್ಲರ ಆದ್ಯತೆಯಾಗಲಿ. ಎಲ್ಲರೂ ಒಟ್ಟಿಗೆ ಬಾಳೋಣ! ಸುರಕ್ಷಿತವಾಗಿರೋಣ!
ಒಂದು ಕೋಮನ್ನು ಗುರಿ ಮಾಡುವವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂಬ ಮುಖ್ಯಮಂತ್ರಿಗಳ ಘೋಷಣೆಯನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ. ಎಚ್ಚರಿಕೆ ಮಾತ್ರ ಸಾಲದು. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ.
ಮಾನ್ಯರೇ,
ಕೋವಿಡ್-19 ಮಹಾಮಾರಿ ತಂದಿಟ್ಟಿರುವ ಬಿಕ್ಕಟ್ಟು, ಸಂಕಟಮಯ ಪರಿಸ್ಥಿತಿ: ಸಾವು-ಬದುಕುಗಳ ಹೋರಾಟಗಳ ಕಾಲದಲ್ಲಿಯೂ ಹಳ್ಳಿಹಳ್ಳಿಯ ಮೂಲೆಮೂಲೆಯ ಮನೆಗಳಿಗೂ ಕೊರೋನಗಿಂತ ವೇಗವಾಗಿ ಹಬ್ಬುತ್ತಿರುವ ಮುಸ್ಲಿಂ ದ್ವೇಷವನ್ನು ನೋಡಿ ಅತ್ಯಂತ ನೋವಾಗುತ್ತಿದೆ. ಇಂತಹ ಸಂಕಟದ ಪರಿಸ್ಥಿತಿಯಲ್ಲೂ ಕೋಮು ದ್ವೇಷವೇ?, ‘ವಸುದೈವಕುಟುಂಬಕಂ’ ಎಂದು ಸಾರಿದ ಮಹೋಪನಿಷತ್, ಭ್ರಾತೃತ್ವವನ್ನು ತನ್ನೆದೆಯಲ್ಲಿ ಸೃವಿಸಿದ ನಮ್ಮ ಸಂವಿಧಾನ ಇವುಗಳು ಈ ನೆಲದ ಹಿರಿಮೆಯೆಂದು ಇನ್ನು ಮುಂದೆಯೂ ಹೇಳಬಲ್ಲೆವೇ?
ದೇಶಕ್ಕೆ ಆಪತ್ತು ಎದುರಾಗಿದೆ, ದೇಹಕ್ಕೆ ಬಾಣ ಬಂದು ನೆಟ್ಟಿದೆ. ಬಾಣವನ್ನು ತೆಗೆದು ಗಾಯವನ್ನು ಗುಣಮಾಡುವುದು ಮುಖ್ಯವೇ ಹೊರತು, ಇದು ಯಾವ ಬಣ್ಣದ ಬಾಣ, ಯಾವ ಬಣದ ಬಾಣ, ಯಾವ ಪ್ರದೇಶದ ಬಾಣ ಎಂದು ಪರಸ್ಪರ ದೂಷಿಸುತ್ತ ಕೂಡುವುದಲ್ಲ. ರೋಗ-ರೋಗಾಣುವಿನ ಕಾರಣವಾಗಿ ಯಾರನ್ನೇ ಆದರೂ ಅವಮಾನಿಸುವುದು, ಅನುಮಾನಿಸುವುದು, ದ್ವೇಷಿಸುವುದು ಮಾನವೀಯತೆಯಲ್ಲ. ವೈರಸ್ ಅಳಿದ ಮೇಲೂ ನಾವು ಉಳಿದಿರುತ್ತೇವೆ, ಅಲ್ಲವೇ. ಎಂದೇ, ನಮ್ಮ ನೆಲದ ಸುಂದರ ಬಾಳುವೆಯ ನೇಯ್ಗೆ ಹಾಳುಗೆಡವದಂತೆ ನಮ್ಮೆಲ್ಲರ ನಡೆನುಡಿಗಳು ಪ್ರೇಮಮಯವಾಗಿರಬೇಕಲ್ಲವೆ?
ಕೊರೋನಾ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಎಲ್ಲಾ ಧರ್ಮೀಯರೂ ಸಹಕರಿಸುತ್ತಿದ್ದಾರೆ. ಎಲ್ಲಾ ಕೋಮಿನ ಸ್ವಯಂ ಸೇವಕರು ತಮ್ಮ ಹಿತವನ್ನು ಬದಿಗಿಟ್ಟು ಸಂಕಷ್ಟದಲ್ಲಿರುವ ಜನರ ನೆರವಿಗಾಗಿ ಪರದಾಡುತ್ತಿದ್ದಾರೆ. ಹಲವರು ಶಕ್ತಿ ಮೀರಿ ದಾನ-ಧರ್ಮ ಮಾಡುತ್ತಿದ್ದಾರೆ. ಇದರಲ್ಲಿ ಮುಸ್ಲಿಮರೂ ಇದ್ದಾರೆ ಎಂಬುದನ್ನು ನಾವು ಮರೆಯುವಂತಿಲ್ಲ. ಅಝೀಂ ಪ್ರೇಮ್ ಜಿ ಪರಿಹಾರ ನಿಧಿಗೆ 1125 ಕೋಟಿ ರೂ. ನೀಡಿದ್ದನ್ನು, ಸಿಪ್ಲಾ ಕಂಪನಿಯ ಯೂಸುಫ್ ಹಮೀದ್ ಅತಿಕಡಿಮೆ ಬೆಲೆಯಲ್ಲಿ ಅತ್ಯುನ್ನತ ಉಪಕರಣಗಳನ್ನು ತಯಾರಿಸಿ ಕೊಟ್ಟಿರುವುದನ್ನು ನಾವು ಸ್ಮರಿಸದಿರೋಣವೇ. ಕೋಲಾರದ ತಜ್ಮುಲ್ ಪಾಷ ಮತ್ತು ಸೋದರ ಮುಜಾಮಿಲ್ ಪಾಷ ತಮ್ಮ ನಿವೇಷನವನ್ನೇ ಮಾರಿ, ಆ ಹಣದಲ್ಲಿ ಹಸಿದವರಿಗೆಲ್ಲಾ ನಿತ್ಯ ಆಹಾರ ಸೇವೆ ಮಾಡುತ್ತಿರುವುದನ್ನು, ಕರೆ ಮಾಡಿದವರ ಬಾಗಿಲಿಗೆ ಕಾಳುಕಡಿ ತಲುಪಿಸುತ್ತಿರುವುದನ್ನು ಮರೆಯಲಾದರೂ ಸಾಧ್ಯವೆ?
ಅದೇ ಹೊತ್ತಲ್ಲಿ ಕೊರೋನಾವನ್ನು ಉಪೇಕ್ಷಿಸುವ, ಅದನ್ನು ದುರುದ್ದೇಶಕ್ಕೆ ಬಳಸುವ ವ್ಯಕ್ತಿಗಳು, ಶಕ್ತಿಗಳು ಎಲ್ಲಾ ಕೋಮಿನಲ್ಲೂ ಇದ್ದಾರೆ. ‘ಉಗುಳಿ, ಸೀನಿ’ ಎಂದು ಅಸಂಬದ್ಧವಾಗಿ ಕರೆಕೊಟ್ಟ ಒಬ್ಬ ತಲೆಕೆಟ್ಟ ಸಾಫ್ಟ್‌ವೇರ್ ಉದ್ಯೋಗಿ ಮುಸ್ಲಿಮನಾಗಿರಬಹುದು. ಲಾಕ್ ಡೌನ್ ಇದ್ದಾಗಲೂ 12 ಜನರು ಮಸೀದಿಗೆ ಹೋಗಿದ್ದು ತಪ್ಪು. ತಬ್ಲೀಗ್ ಸಭೆಗೆ ಹೋಗಿದ್ದೂ ಕೆಲವರು ತಿಳಿಸದೇ ಇದ್ದದ್ದು ಖಂಡಿತವಾಗಿ ದೊಡ್ಡ ತಪ್ಪು. ಇಂಥ ತಪ್ಪನ್ನು ಇತರೆ ಧರ್ಮದ ವ್ಯಕ್ತಿಗಳೂ ಮಾಡಿದ್ದಾರೆ. ಕೆಲವರು ಮಾಡಿದ ಮೂರ್ಖತನ, ಅವಿವೇಕತನಗಳು ಮನುಷ್ಯ ಸಹಜವಾದರೂ ಕೆಲವು ಘಟನೆಗಳನ್ನು ಮುಂದೆಮಾಡಿಕೊಂಡು ಇಡೀ ಮುಸ್ಲಿಂ ಸಮುದಾಯವನ್ನು ದ್ವೇಷದಿಂದ ನೋಡುವಂತೆ ಸಮಾಜವನ್ನು ಪ್ರಚೋದಿಸಲಾಗುತ್ತಿದೆ.
ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಎಲ್ಲರೂ ಸರಕಾರದೊಂದಿಗೆ ಸಹಕರಿಸಬೇಕು, ಕೋವಿಡ್ ಕಾಯಿಲೆಗೆ ಸಂಬಂಧಿಸಿದ ಎಲ್ಲಾ ವೈದ್ಯಕೀಯ ಸಲಹೆಗಳನ್ನು ಪಾಲಸಬೇಕು. ಹಾಗೂ ನೆರೆಹೊರೆಯಲ್ಲಿ ಯಾರಾದರೂ ಅದನ್ನು ಉಲ್ಲಂಘಿಸಿದಲ್ಲಿ ಸಾಧ್ಯವಾದರೆ ತಿಳಿಹೇಳಬೇಕು, ಇಲ್ಲವಾದರೆ ಅಧಿಕಾರಿಗಳ ಗಮನಕ್ಕೆ ತರಬೇಕು. ಆದರೆ ಜಾತಿ/ಧರ್ಮ/ಪಂಗಡದ ಹೆಸರಿನಲ್ಲಿ ದ್ವೇಷ ಬಿತ್ತುವ ಪ್ರಚಾರಕ್ಕೆ ಕೈ ಜೋಡಿಸಬಾರದೆಂದು ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತಿದ್ದೇವೆ. ಈ ದೇಶದ ಭವಿಷ್ಯವೇ ಆಗಿರುವ ಯುವ ಮಿತ್ರರ ಮೇಲೆ ಈ ಸಮಯದಲ್ಲಿ ದೊಡ್ಡ ಹೊಣೆಗಾರಿಕೆಇದೆ. ಪ್ರೀತಿಯಲ್ಲಿ ವಿಶ್ವಾಸವಿಟ್ಟಿರುವ ಯುವ ಪೀಳಿಗೆ ದ್ವೇಷವನ್ನು ಹುಟ್ಟುಹಾಕುವ, ಸಮಾಜವನ್ನು ಒಡೆಯುವ ರಾಜಕೀಯವನ್ನು ಒಪ್ಪಬಾರದೆಂದು ಅಭಿಮಾನದೊಂದಿಗೆ ಒತ್ತಾಯಿಸುತ್ತಿದ್ದೇವೆ.
ಕೊರೋನ ಪಿಡುಗು, ವಲಸೆ ಕಾರ್ಮಿಕರ ಸಂಕಷ್ಟಗಳು, ನಾಳಿನ ಅನಿಶ್ಚಿತತೆಗಿಂತ ಕೋಮು ದ್ವೇಷವೇ ಹೆಚ್ಚು ನೋವು ಬರಿಸುವ ಸಂಗತಿಯಾಗಿದೆ. ಕೊರೋನ ಸೋಂಕಿನ ಈ ಬಿಕ್ಕಟ್ಟಿನ ಸಮಯದಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಮಾಡಿ ನಡೆಸುತ್ತಿರುವ ಸುಳ್ಳು ಪ್ರಚಾರ ನಿಲ್ಲಬೇಕು. ಆ ರೀತಿ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆಂಬ ಮುಖ್ಯಮಂತ್ರಿಯವರ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ. ರಾಜ್ಯ ಸರಕಾರವು ಅದನ್ನು ಕಟ್ಟುನಿಟ್ಟಾಗಿ ಮಾಡಬೇಕೆಂದು ಆಗ್ರಹಿಸುವುದರ ಜೊತೆಗೆ ನಮ್ಮೀ ಸಮಾಜದಲ್ಲಿ ಎಲ್ಲರೂ ಮನುಷ್ಯ ಧರ್ಮವನ್ನು ಪಾಲಿಸೋಣ ಎಂದು ಸಮಾಜದ ಎಲ್ಲರನ್ನೂಆಗ್ರಹಿಸುತ್ತೇವೆ. ಪ್ರೀತಿ, ಶಾಂತಿ, ಸರ್ವರ ಕ್ಷೇಮವೇ ನಮ್ಮೆಲ್ಲರ ಆದ್ಯತೆಯಾಗಲಿ. ಎಲ್ಲರೂ ಒಟ್ಟಿಗೆ ಬಾಳೋಣ! ಸುರಕ್ಷಿತವಾಗಿರೋಣ!
ಒಮ್ಮತದ ಸಹಿ:
ದೇವನೂರು ಮಹಾದೇವ, ಗಣೇಶದೇವಿ, ಹೆಚ್. ಎಸ್. ದೊರೆಸ್ವಾಮಿ, ಜಿ. ರಾಮಕೃಷ್ಣ, ಎಸ್.ಜಿ.ಸಿದ್ದರಾಮಯ್ಯ, ಎಸ್. ಆರ್. ಹಿರೇಮಠ, ಪ್ರಸನ್ನ, ಇಂದಿರಾ ಕೃಷ್ಣಪ್ಪ, ತೋಂಟದ ಸಿದ್ದರಾಮ ಸ್ವಾಮೀಜಿ ಗದಗ, ನಾಗೇಶ ಹೆಗಡೆ, ದಿನೇಶ್ ಅಮೀನ್ ಮಟ್ಟು, ಶಿವಸುಂದರ್, ಮುಜಫರ್ ಅಸ್ಸಾದಿ, ಮಾಲತಿ ಪಟ್ಟಣಶೆಟ್ಟಿ, ಡಾ. ಸಬೀಹಾ ಭೂಮಿಗೌಡ, ನಟರಾಜ್ ಬೂದಾಳ, ಜಿ.ರಾಜಶೇಖರ, ಫಣಿರಾಜ, ವಿಜಯಮ್ಮ, ರವಿ ಕೋಟಿ, ಇಂದೂಧರ ಹೊನ್ನಾಪುರ, ಡಾ. ವಿ.ಎನ್.ಲಕ್ಷ್ಮಿನಾರಾಯಣ, ಪಿಚ್ಚಳ್ಳಿ ಶ್ರೀನಿವಾಸ್, ಮುಜೀಬ್, ಡಾ.ಎಚ್.ಎಸ್.ಅನುಪಮ, ತಾಹೀರ್ ಹುಸೇನ್, ಅಬ್ದುಸ್ಸಲಾಂ ಪುತ್ತಿಗೆ, ಬಿ. ಸುರೇಶ್, ನಗರಗೆರೆ ರಮೇಶ್, ರೂಪ ಹಾಸನ, ವಿ.ಎಸ್.ಶ್ರೀಧರ್, ನಗರಿ ಬಾಬಯ್ಯ, ರಾಘವೇಂದ್ರ ಕುಷ್ಟಗಿ, ಡಾ.ಎಚ್.ವಿ.ವಾಸು, ಡಾ. ಗೋಪಾಲ ದಾಬಡೆ, ಶಿವಾಜಿ ಕಾಗಣೀಕರ, ಬಸವರಾಜ ಸೂಳಿಬಾವಿ, ಶ್ರೀಪಾದ ಭಟ್, ಕ್ಲಿಫ್ಟನ್ ರೊಝಾರಿಯೋ, ವಿನಯ್, ಇರ್ಷದ್ ಅಹ್ಮದ್ ದೇಸಾಯಿ, ಸಂತೋಷ ಕೌಲಗಿ ಮೇಲುಕೋಟೆ, ಯೂಸುಫ್ ಕುನ್ನಿ, ಹರ್ಷ ಕುಮಾರ್ ಕುಗ್ವೆ, ದೇವಾನಂದ ಜಗಾಪುರ, ಕೆ.ಎಲ್.ಅಶೋಕ್, ತಾಜುದ್ದೀನ್, ರಾಘವೇಂದ್ರ (ಸಾಗರ), ಎ.ಎಸ್. ಪ್ರಭಾಕರ್, ಮೊಹಮ್ಮದ್ ಕಿಕ್ಕಿಂಜೆ, ಮೀನಾಕ್ಷಿ ಬಾಳಿ, ಡಾ. ಭೂಮಿಗೌಡ, ಡಾ.ಷಕೀರಾ ಖಾನುಮ್, ಕೆ.ನೀಲಾ, ಜಿ.ಎನ್.ನಾಗರಾಜ್, ಬಿ.ಎ.ಕೆಂಜರೆಡ್ದಿ, ಬಿ.ಶ್ರೀನಿವಾಸ್, ಪ್ರಹ್ಲಾದ ಕಟ್ಟಿಮನಿ, ಕೇಸರಿ ಹರವೂ, ಡಾ. ಹೇಮಾ ಪಟ್ಟಣಶೆಟ್ಟಿ, ಡಾ. ಸಬಿತಾ ಬನ್ನಾಡಿ, ವಾಣಿ ಪೆರಿಯೋಡಿ, ಡಾ. ಶಿವಾನಂದ ಶೆಟ್ಟರ, ಜ.ನಾ. ತೇಜಶ್ರೀ, ಸಿ.ಎಚ್.ಭಾಗ್ಯ, ಡಾ.ಡಿ.ಬಿ.ಗವಾನಿ, ಸ್ವರ್ಣ ಭಟ್, ಮುತ್ತು ಬಿಳಿಯಲಿ, ರೇಣುಕಾ ನಿಡಗುಂದಿ ದೆಹಲಿ, ಯೋಗೇಶ್ ಮಾಸ್ಟರ್, ಶರೀಫ್ ಬಿಳಿಯಲಿ, ಕೆ.ಪಿ.ಸುರೇಶ, ಮೂಡ್ನಾಕೂಡು ಚಿನ್ನಸ್ವಾಮಿ, ಫಾದರ್ ವಿನೋದ ಪಾಲ, ಹಸನ್ ನಯೀಂ ಸುರಕೋಡ, ಸುನಂದಾ ಕಡಮೆ, ಶಾರದಾ ಗೋಪಾಲ, ಲಿನೆಟ್ ಡಿಸೋಜ, ವಸುಂಧರಾ ಭೂಪತಿ, ಚಂದ್ರಕಾಂತ ವಡ್ಡು, ಕೆ.ವೆಂಕಟರಾಜು, ಡಾ. ಬಸವರಾಜ ಸಾದರ, ಡಾ.ಧರಣೇಂದ್ರ ಕುರಕುರಿ, ನಾ. ದಿವಾಕರ ಮೈಸೂರು, ರವೀಂದ್ರ ಹಳಿಂಗಳಿ, ಸಿ.ಎಂ.ಅಂಗಡಿ ದೆಹಲಿ, ರಮಜಾನ್‌ದರ್ಗಾ, ಡಾ.ಪುರುಷೋತ್ತಮ ಬಿಳಿಮಲೆ, ಬಿ.ಸುಜ್ಞಾನ ಮೂರ್ತಿ ಹಂಪಿ, ಡಾ.ಶಶಿಕಾಂತ ಲಿಂಗಸುಗೂರ,ಡಾ.ವಾಸವಿ ಚಾಮರಾಜನಗರ, ದೇವು ಪತ್ತಾರ, ಬಿ.ಟಿ.ಜಾಹ್ನವಿ, ಕಲೀಂ ಪಾಷಾ ಹರಿಹರ, ಡಾ. ಸಂಜೀವಕುಲಕರ್ಣಿ, ಸರೋಜಾ ಪ್ರಕಾಶ, ವಿಶಾಲಾಕ್ಷಿ ಶರ್ಮ, ಎಚ್.ಪಟ್ಟಾಭಿರಾಮ ಸೋಮಯಾಜಿ, ರಘುನಂದನ, ಚಂದ್ರಕಲಾ ಬಾಗಲಕೋಟೆ, ಟಿ.ಎನ್.ಚಂದ್ರಕಾಂತ, ಎಚ್.ಎನ್.ಆರತಿ, ಎಸ್. ತುಕಾರಾಂ, ಡಾ. ಸಿದ್ದನಗೌಡ ಪಾಟೀಲ, ಎನ್.ವೆಂಕಟೇಶ್, ದೊರೈರಾಜ್, ಕಾಳೇಗೌಡ ನಾಗವಾರ, ಮೋಹನ ಕುಮಾರ್, ನೂರ್ ಮನ್ಸೂರ್, ಮಾವಳ್ಳಿ ಶಂಕರ್, ಶೇಖಣ್ಣ ಕವಳಿಕಾಯಿ, ಮಲ್ಲಿಕಾರ್ಜುನ ಕಲಮರ ಹಳ್ಳಿ, ಸತ್ಯಾ, ಎಂ.ಎಸ್.ಮುರಳಿಕೃಷ್ಣ, ಕೋರ್ಣೇಶ್ವರ ಸ್ವಾಮೀಜಿ, ಶಂಕರಗೌಡ ಸಾತ್ಮಾರ, ಕೆ.ನಾಗಭೂಷಣರಾವ್ ಬಳ್ಳಾರಿ, ಗಂಗಾಧರ ಹಿರೇಗುತ್ತಿ ಕಾರವಾರ, ಶಂಕರಡಿ. ಸುರಳ್, ಡಾ.ಮಹಾದೇವಿ ಕಣವಿ ಹಾವೇರಿ, ವರದರಾಜು, ತಾಜುದ್ದೀನ್ ಶರೀಫ್, ಆರ್.ಮಾನಸಯ್ಯ, ಯು.ಎಚ್. ಉಮರ್, ಎಚ್.ಬಿ.ರಾಘವೇಂದ್ರ, ಇಲಿಯಾಸ್ ತುಂಬೆ, ಟಿ.ಅಝಗರ್, ಅಶ್ರಫ್ ಅಲಿ ಹುಬ್ಬಳ್ಳಿ, ಎಸ್.ಎ. ಲಂಡೂರ್, ಡಾ, ಇಷ್ಟಿಜ್ ಅರಸ್, ಎಂ.ವಿ. ಮಾಗನೂರ, ಡಿ. ಉಮಾಪತಿ, ನೂರ್ ಶ್ರೀಧರ್, ಎಂ. ಎಲ್. ಮುಕುಂದರಾಜ್, ಎಚ್ ಮಾರುತಿ, ಹೇಮಲತಾ ವಸ್ತ್ರದ, ಗುಂಡಣ್ಣ ಚಿಕ್ಕಮಗಳೂರು, ನಂದಕುಮಾರ್ ಕೆ. ಎನ್., ಬೇಲೂರು ರಘನಂದನ,ಅನುಪಮಾ ಪ್ರಸಾದ, ಜಿ. ಪಿ. ಬಸವರಾಜು, ಮಲ್ಲಿಕಾರ್ಜುನ ಕಡಕೋಳ, ಡಾ. ಕೆ. ಎ. ಓಬಲೇಶ, ನಾಗರಾಜ್ ಹರಪನಹಳ್ಳಿ, ರಜನಿ ಗರುಡ, ಪಂಪಾರಡ್ಡಿ ಅರಳಹಳ್ಳಿ, ರಮೇಶ ಗಬ್ಬೂರ ಪ್ರಮೋದ್ ತುರ್ವಿಹಾಳ,ಸುಮಾ ಎಂಬಾರ,ಅಶ್ವಾಕ್ ಶಾಹ್, ವನಮಾಲ ಕಟ್ಟೆಗೌಡರ, ಮಹೇಶ ಪತ್ತಾರ, ಸಂಧ್ಯಾದೇವಿ, ಚಂದ್ರಶೇಖರ ಎನ್, ಮಹಾಂತೇಶ ಕರಿಯಪ್ಪ, ಅಶೋಕ್ ಲೋಣಿ, ಹನುಮಂತ ಹಾಲೀಗೇರಿ, ಎಂ.ಡಿ.ಒಕ್ಕುಂದ, ವಿನಯಾ, ನಭಾ,ಆರ್ ಕೆ ಹುಡಗಿ, ಡಾ.ಪ್ರಭು ಖಾನಾಪುರೆ,ಲವಿತ್ರ ವಸ್ತ್ರದ್, ಮೆಹರಾಜ್ ಪಟೇಲ್, ಅಲ್ತಾಫ್ ಇನಾಮದಾರ್, ಶ್ರೀಮಂತ ಬಿರಾದಾರ, ಯೂಸುಫ್ ಹುಸೇನ್, ರಮೇಶ್ ಶಿವಮೊಗ್ಗ, ಚುಕ್ಕಿ ನಂಜುಂಡಸ್ವಾಮಿ, ರಹಮತ್ ತರೀಕೆರೆ, ಪೀರ್ ಬಾಷ, ಕುಸುಮ ಶಾನಭಾಗ್, ವಿಜು ಪೂಣಚ್ಚ, ಹೇಮಲತಾ ಶೆಣೈ, ಸಿರಿಮನೆ ನಾಗರಾಜ್, ಶೃಂಗೇಶ್, ಗೌರಿ ಬೆಂಗಳೂರು, ಕುಮಾರ್ ಸಮತಳ, ಮಲ್ಲಿಗೆ ಸಿರಿಮನೆ, ಅಫ್ಸರ್ ಕೊಡ್ಲಿಪೇಟೆ, ಶಶಿಕಾಂತ ಯಡಹಳ್ಳಿ, ಸಿರಿಮನೆ ಲಕ್ಷ್ಮೀನಾರಾಯಣ, ಅಲಿಬಾಬಾ, ರವಿಚಂದ್ರ, ಸಮೀರ್ ಅಸದ್, ಬಿ.ಗಂಗಾಧರ ಮೂರ್ತಿ, ಎ.ರವೀಂದ್ರ ನಾಯ್ಕ್, ಎ.ವಿ.ಕೃಷಿಕ್, ಕಲ್ಕುಳಿ ವಿಠಲ್ ಹೆಗ್ಗಡೆ, ರಮೇಶ್ ಅಂಕೋಲಾ, ಅನಂತ ಮಚ್ಚಟ್ಟು, ಹಯವದನ ಮೂಡುಸಗ್ರಿ, ಸಿದಗೌಡ ಮೋದಗಿ, ಸಿದ್ದಪ್ಪಾ ಮೂಲಗೆ, ಕರಿಯಪ್ಪ ಗುಡಿಮನಿ, ಬಡಗಲಪುರ ನಾಗೇಂದ್ರ, ನಂದಿನಿ ಜಯರಾಂ, ಚಾಮರಸಮಾಲಿ ಪಾಟೀಲ್, ಕುರಬೂರು ಶಾಂತಕುಮಾರ್, ಕೋಡಿಹಳ್ಳಿ ಚಂದ್ರಶೇಖರ್, ಪ್ರಸಾದ್ ರಕ್ಷಿದಿ, ರವಿಕೃಷ್ಣಾ ರೆಡ್ಡಿ, ಅನುಸೂಯಮ್ಮ,... ಇನ್ನು ಅನೇಕ ಸಹ ಮನಸ್ಕರು.