ಉದ್ಯಮಿ, ಶಿಕ್ಷಣ ಪ್ರೇಮಿ ಡಾ.ಪಿ.ಎ.ಇಬ್ರಾಹೀಂ ಹಾಜಿ ನಿಧನ
ಮೆಂಗಳುರು: ಕೊಣಾಜೆ ಸಮೀಪದ ನಡುಪದವಿನಲ್ಲಿರುವ ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ, ಉದ್ಯಮಿ, ಶಿಕ್ಷಣ ಪ್ರೇಮಿ ಹಾಗೂ ಕೊಡುಗೈ ದಾನಿ ಡಾ.ಪಿ.ಎ.ಇಬ್ರಾಹೀಂ ಹಾಜಿ (78) ಮಂಗಳವಾರ ಬೆಳಗ್ಗೆ ಕೇರಳದ ಕ್ಯಾಲಿಕೆಟ್ ಯಲ್ಲಿ ನಿಧನರಾಗಿದ್ದಾರೆ.
ದುಬೈಯಲ್ಲಿದ್ದ ಅವರು ಡಿ.11ರಂದು ತೀವ್ರ ಅನಾರೋಗ್ಯಕೊಳಗಾಗಿದ್ದರು. ತಕ್ಷಣ ಅವರನ್ನು ದುಬೈ ಹೆಲ್ತ್ ಕೇರ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾದ ಕಾರಣ ಏರ್ ಆ್ಯಂಬ್ಯುಲೆನ್ಸ್ ಮೂಲಕ ಸೋಮವಾರ ಕ್ಯಾಲಿಕೆಟ್ ಆಸ್ಪತ್ರೆಗೆ ಕರೆತರಲಾಗಿತ್ತು. ತೀವ್ರ ಅಸೌಖ್ಯದಿಂದ ಮಂಗಳವಾರ ಬೆಳಗ್ಗೆ ಅವರು ಕೊನೆ ಯುಸಿರೆಳೆದರು.
ಮೂಲತಃ ಕಾಸರಗೋಡಿನ ಪಳ್ಳಿಕೆರೆಯ ನಿವಾಸಿ ಅಬ್ದುಲ್ಲಾ ಇಬ್ರಾಹೀಂ ಹಾಜಿ-ಆಯಿಷಾ ದಂಪತಿಯ ಪುತ್ರನಾಗಿ 1943ರ ಸೆ.6ರಂದು ಜನಿಸಿದ್ದರು.
ಡಾ.ಪಿ.ಎ.ಇಬ್ರಾಹೀಂ ಹಾಜಿ ಕಾಸರಗೋಡಿನ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ, ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಕಾಲೇಜು ಶಿಕ್ಷಣವನ್ನು ಪೂರೈಸಿ, ಬಳಿಕ ಮದ್ರಾಸಿನಲ್ಲಿ ಡಿಪ್ಲೊಮಾ ಇನ್ ಆಟೋಮೊಬೈಲ್ ಇಂಜಿನಿಯರಿಂಗ್ ಆ್ಯಂಡ್ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಶಿಕ್ಷಣ ಪಡೆದಿದ್ದರು.
1966ರಲ್ಲಿ ದುಬೈಯ ಕಂಪೆನಿಯೊಂದರಲ್ಲಿ ಸೇಲ್ಸ್ ಮ್ಯಾನ್ ಉದ್ಯೋಗ ಆರಂಭಿಸಿದ್ದ ಅವರು ಬಳಿಕ ಟೆಕ್ಸ್‌ಟೈಲ್, ಗಾರ್ಮೆಂಟ್, ಚಿನ್ನಾಭರಣ ಉದ್ಯಮ ಕಂಪೆನಿಯನ್ನು ಆರಂಭಿಸಿ ಹಂತ ಹಂತವಾಗಿ ಉನ್ನತಿಗೇರಿದರು. ಹಾಗೇ ದುಬೈಯಲ್ಲಿ ಸ್ವಂತ ಉದ್ಯಮವನ್ನೂ ಆರಂಭಿಸಿ ಯಶಸ್ವಿ ಯಾದರಲ್ಲದೆ ಖ್ಯಾತ ಉದ್ಯಮಿಯಾಗಿ, ಶಿಕ್ಷಣ ತಜ್ಞನಾಗಿ, ಕೊಡುಗೈ ದಾನಿಯಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದರು. ನೂರಾರು ಮಸೀದಿ ಮತ್ತು ಮದ್ರಸಗಳ ಪೋಷಕರಾಗಿದ್ದರು.
ಉಪಾಧ್ಯಕ್ಷರಾಗಿ, ಚಂದ್ರಿಕಾ ಪತ್ರಿಕೆಯ ನಿರ್ದೇಶಕರಾಗಿ, ಇಂಡಸ್ ಮೋಟಾರ್ ಕೋ.ಲಿ.ನ ಉಪಾಧ್ಯಕ್ಷರಾಗಿ, ಕೇರಳ ಫೈನಾನ್ಸಿಯಲ್ ಸರ್ವಿಸ್ ಲಿ.ನ ಅಧ್ಯಕ್ಷರಾಗಿ, ಅಲ್ ಶಮಾಲಿ ಗ್ರೂಪ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದ ಅವರು ಹಲವು ಸಾಮಾಜಿಕ ಸಂಸ್ಥೆಗಳಲ್ಲಿಯೂ ಪದಾಧಿಕಾರಿ ಯಾಗಿ ಸೇವೆ ಸಲ್ಲಿಸಿದ್ದರು.
1999ರಲ್ಲಿ ಶಿಕ್ಷಣ ರಂಗಕ್ಕೆ ಪದಾರ್ಪಣೆಗೈದ ಅವರು ಪಿಎಸಿಇ ಗ್ರೂಪ್ ಸ್ಥಾಪಿಸಿ ಅದರ ಅಧ್ಯಕ್ಷರಾದರು. ಹಾಗೇ ಪಿ.ಎ.ಎಜುಕೇಶನಲ್ ಟ್ರಸ್ಟ್ ಮೂಲಕ ಕೊಣಾಜೆ ಸಮೀಪದ ನಡುಪದವಿನಲ್ಲಿ ಪಿ.ಎ.ಇಂಜಿನಿಯರಿಂಗ್ ಕಾಲೇಜು, ಪಿವಿ ಕಾಲೇಜು ಆಫ್ ಫಾರ್ಮಸಿ, ಪಿಎ ಇನ್ ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ, ಪಿಎ ಪಾಲಿಟೆಕ್ನಿಕ್, ಪಿಎ ಪ್ರಥಮ ದರ್ಜೆ ಕಾಲೇಜನ್ನು ಸ್ಥಾಪಿಸಿದ್ದರು.
ದುಬೈಯ ಅಜ್ಮಾನ್ ನಲ್ಲಿ ದಿಲ್ಲಿ ಪ್ರೈವೇಟ್ ಸ್ಕೂಲ್ ಸಹಿತ ಹಲವು ಕಡೆಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿ ಶಿಕ್ಷಣ ಪ್ರೇಮಿಯಾಗಿಯೂ ಖ್ಯಾತಿ ಹೊಂದಿದ್ದರು. ಇವರು ಭಾರತ ದೇಶವಲ್ಲದೆ ಮಧ್ಯ ಪ್ರಾಚ್ಯ ರಾಷ್ಟ್ರಗಳಾದ ಯುಎಇ, ಕುವೈತ್ ನಲ್ಲೂ ಸ್ಥಾಪಿಸಿದ ವಿದ್ಯಾ ಸಂಸ್ಥೆಗಳಲ್ಲಿ 25 ರಾಷ್ಟ್ರಗಳ ಸುಮಾರು 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಭಾರತ ದೇಶವಲ್ಲದೆ ಮಧ್ಯ ಪ್ರಾಚ್ಯ ರಾಷ್ಟ್ರಗಳಾದ ಯುಎಇ, ಕುವೈತ್‌ನಲ್ಲೂ ತನ್ನ ಉದ್ಯಮ, ಸೇವೆಯನ್ನು ವಿಸ್ತರಿಸಿದ್ದರು. ಕೇರಳದ ಕಣ್ಣೂರಿನಲ್ಲಿ ಆರ್‌ಐಎಂಎಸ್ ಇಂಟರ್‌ನ್ಯಾಷನಲ್ ಸ್ಕೂಲ್ ಆರಂಭಿಸಿದ್ದರು. ಪಿಎಸಿಇ ರೆಸಿಡೆನ್ಸಿಯಲ್ ಸ್ಕೂಲ್, ಶ್ಲೋಸಂ ಪಬ್ಲಿಕ್ ಸ್ಕೂಲ್ ಸ್ಥಾಪಿಸಿದ್ದರು.
ಡಾ.ಪಿ.ಎ.ಇಬ್ರಾಹೀಂ ಹಾಜಿಯ ಸೇವೆಯನ್ನು ಪರಿಗಣಿಸಿ ವಿವಿಧ ಸಂಘಟನೆಗಳು ಪ್ರವಾಸಿ ರತ್ನ, ಸಿ.ಎಚ್.ಅವಾರ್ಡ್ ಮತ್ತಿತರ ಪ್ರಮುಖ ಪ್ರಶಸ್ತಿಗಳನ್ನು ಪ್ರದಾನಿಸಿ ಸನ್ಮಾನಿಸಿತ್ತು.
ಸಂತಾಪ: ಡಾ.ಪಿ.ಎ.ಇಬ್ರಾಹೀಂ ಹಾಜಿ ನಿಧನಕ್ಕೆ ಬ್ಯಾರೀಸ್ ಶಿಕ್ಷಣ ಸಮೂಹದ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಸ್ಥಾಪಕ ಸಂತಾಪ ಸೂಚಿಸಿದ್ದಾರೆ.