ವಕ್ಫ್ ಆಸ್ತಿ ತೆರವುಗೊಳಿಸಲು 216 ಪ್ರಕರಣಗಳಲ್ಲಿ 6 ನೋಟಿಸ್ ನೀಡಿದ್ದ ಬಿಜೆಪಿ; ಸಿದ್ದರಾಮಯ್ಯ ಪ್ರಶ್ನೆ: 'ಬೊಮ್ಮಾಯಿ ಯೂಟರ್ನ್ ಏಕೆ?
ಹುಬ್ಬಳ್ಳಿ: 'ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಒತ್ತುವರಿಯಾಗಿರುವ ವಕ್ಫ್ ಆಸ್ತಿಯನ್ನು ಕಾಪಾಡುವುದಾಗಿ ಹೇಳಿದ್ದರು. ಇದೀಗ ರಾಜಕೀಯ ಕಾರಣಕ್ಕಾಗಿ ' ವಿರುದ್ಧ ಮಾತನಾಡುತ್ತಾರೆ. ಅವರೇ ಹೇಳಿದ್ದ ಮಾತುಗಳಿಗೆ ಈಗ ರಾಜಕೀಯ ಕಾರಣಕ್ಕಾಗಿ ಉಲ್ಟಾ ಹೊಡೆದಿದ್ದಾರೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಕಾರಣಕ್ಕಾಗಿ ಈ ವಿಚಾರವನ್ನು ಇಟ್ಟುಕೊಂಡು ಬಿಜೆಪಿಯವರು ಹೋರಾಡುತ್ತಿದ್ದಾರೆ. ವಕ್ಫ್ ಆಸ್ತಿ ವಿಚಾರ ನಿನ್ನೆ ಮೊನ್ನೆಯದಲ್ಲ. ಬಿಜೆಪಿ ಸರಕಾರದ ಕಾಲದಲ್ಲೂ ನೋಟಿಸ್ ಕೊಟ್ಟಿದ್ದಾರೆ. ಎಲ್ಲ ನಿಲದಲ್ಲಿಯೂ ನೋಟಿಸ್ ನೀಡಲಾಗಿದೆ ಎಂದು ಜನರಿಗೆ ಗೊತ್ತಾಗಿದೆ ಎಂದರು.
ಈಗಾಗಲೇ ನಾನು ಸಚಿವರಾದ ಎಚ್. ಕೆ.ಪಾಟೀಲ್, ಕೃಷ್ಣ ಬೈರೇಗೌಡ ಅವರೊಂದಿಗೆ ಸಭೆ ನಡೆಸಿ ಯಾವುದೇ ನೋಟಿಸ್ ನೀಡಿದ್ದಲ್ಲಿ ಅದನ್ನು ವಾಪಸ್ ಪಡೆಯಬೇಕು ಅಥವಾ ವಿಚಾರಣೆ ಇಲ್ಲದೆಯೇ ಯಾವುದಾದರೂ ಪಹಣಿ ದಾಖಲೆ ಬದಲಾವಣೆಯಾಗಿದ್ದರೆ ಅದನ್ನು ರದ್ದು ಮಾಡಬೇಕು ಹಾಗೂ ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಬಾರದು ಎಂದು ಸ್ಪಷ್ಟ ನಿರ್ದೇಶನ ನೀಡಿದ್ದೇನೆ. ಮುಸ್ಲಿಮ್, ಹಿಂದೂ, ಕ್ರೈಸ್ತರೇ ಆಗಿರಲಿ, ಒಕ್ಕಲೆಬ್ಬಿಸಬಾರದು ಎಂದು ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.
ರಾಜ್ಯಕ್ಕೆ ಅನ್ಯಾಯವಾಗಿರುವ ಬಗ್ಗೆ ಪ್ರಶ್ನಿಸಬೇಕು: 'ತೆರಿಗೆ ವಿಚಾರದಲ್ಲಿ ಕೇಂದ್ರದಿಂದ ಅನ್ಯಾಯವಾಗಿದ್ದು, 16ನೇ ಹಣಕಾಸು ಆಯೋಗದವರು ಬೆಂಗಳೂರಿಗೆ ಭೇಟಿ ನೀಡಿದಾಗ 15ನೇ ಹಣಕಾಸು ಆಯೋಗದಿಂದ ಕರ್ನಾಟಕಕ್ಕೆ ಅನ್ಯಾಯವಾಗಿರುವ ಬಗ್ಗೆ ಗಮನ ಸೆಳೆದಿದ್ದೇವೆ. ಸುಮಾರು 4.50 ಲಕ್ಷ ಕೋಟಿ ರೂ. ಗಳಿಗೂ ಹೆಚ್ಚು ಮೊತ್ತವನ್ನು ತೆರಿಗೆ ನೀಡುತ್ತಿದ್ದೇವೆ. ಅದರಲ್ಲಿ ನಮಗೆ ವಾಪಸ್ ಬರುವುದು 55ರಿಂದ 60 ಸಾವಿರ ಕೋಟಿ ರೂ.ಗಳಷ್ಟು ಮಾತ್ರ. ಇದು ನ್ಯಾಯವೇ ಎಂದು ಪ್ರಶ್ನಿಸಿದರು.
ರಾಜಕಾರಣಕ್ಕಾಗಿ ಪ್ರತಿಭಟನೆ: 'ವಕ್ಫ್ ಆಸ್ತಿ ವಿಚಾರದಲ್ಲಿ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ. ಎಂದು ಹೇಳಿದ ಮೇಲೂ ಬಿಜೆಪಿ ಹೋರಾಟ ಮಾಡುತ್ತಿದೆ ಎಂದರೆ ರಾಜಕೀಯ ಅಲ್ಲವೇ? ಬಿಜೆಪಿಯವರು ಯಾವಾಗಲೂ ನೈಜ ವಿಷಯಗಳನ್ನು ಬಿಟ್ಟು ಸುಳ್ಳು ಆರೋಪಗಳನ್ನು ಮಾಡುತ್ತಾರೆ. ಇದೀಗ ರಾಜಕಾರಣಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ದೂರಿದರು.
ಗ್ಯಾರಂಟಿಗಳು ಅಭಿವೃದ್ಧಿಯಲ್ಲವೇ?: ಗ್ಯಾರಂಟಿ ಯೋಜನೆಗಳು ಅಭಿವೃದ್ಧಿಯಲ್ಲವೇ? ಹಿಂದೆ ಸಿಎಂ ಆಗಿದ್ದಾಗ 165 ಭರವಸೆ ಕೊಟ್ಟು 158 ಭರವಸೆಗಳನ್ನು ಈಡೇರಿಸಿದ್ದೆವು. ಅವು ಅಭಿವೃದ್ಧಿಯಲ್ಲವೇ? 3 ಲಕ್ಷದ 71 ಸಾವಿರ ಕೋಟಿ ರೂ.ಗಳಲ್ಲಿ 52 ಸಾವಿರ ಕೋಟಿ ರೂ. ಗ್ಯಾರಂಟಿಗಳಿಗೆ ವೆಚ್ಚ ಮಾಡುತ್ತಿದ್ದೇವೆ. ಸುಮಾರು 60 ಸಾವಿರ ಕೋಟಿ ರೂ. ಅಭಿವೃದ್ಧಿಗೆ ವೆಚ್ಚ ಮಾಡುತ್ತಿದ್ದೇವೆ. ನೀರಾವರಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ರಸ್ತೆ, ಸೇತುವೆ ನಿರ್ಮಾಣಕ್ಕಾಗಿ ವೆಚ್ಚವಾಗುತ್ತಿದೆ. ಇವೆಲ್ಲ ಅಭಿವೃದ್ಧಿಯಲ್ಲವೇ? ಎಂದು ಅವರು ಕೇಳಿದರು.