ಮಾನ್ಯರೇ,
ಕಾರವಾರದ ಪೊಲೀಸ್ ಹೆಡ್‍ಕ್ವಾಟ್ರ್ರಸ್‍ನಲ್ಲಿ ಅನುಮತಿ ಇಲ್ಲದೇ ಅಕ್ರಮವಾಗಿ ನಿರ್ಮಿಸಲಾದ ಪ್ರಾರ್ಥನಾಗೃಹವನ್ನು ಉದ್ಘಾಟಿಸುವ ಸಿದ್ಧತೆ ನಡೆದಿದ್ದು ಅದನ್ನು ತಕ್ಷಣ ನಿಲ್ಲಿಸುವಂತೆ ಉತ್ತರ ಕನ್ನಡ ಬಿಜೆಪಿ ಆಗ್ರಹಿಸಿದೆ.
ಕಾರವಾರ ನಗರಸಭೆ ಹಾಗೂ ಕೆಡಿಎದ ಅನುಮತಿ ಇಲ್ಲದೇ ರಸ್ತೆಗೆ ತಾಗಿಯೇ ಈ ಪ್ರಾರ್ಥನಾ ಗೃಹವನ್ನು ನಿರ್ಮಿಸಲಾಗಿದ್ದು ಅದು ಸುಪ್ರೀಂಕೋರ್ಟಿನ ಆದೇಶದ ಉಲ್ಲಂಘನೆಯಾಗಿದೆ. ಕೇವಲ 15 ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಸಹ ಇಂತಹದೇ ಆದೇಶ ಹೊರಡಿಸಿ ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಎಲ್ಲ ಧರ್ಮಗಳ ಪ್ರಾರ್ಥನಾ ಗೃಹಗಳನ್ನು ತೆರವುಗೊಳಿಸುವುದಾಗಿ ತಿಳಿಸಿದ್ದರು. ಈಗ ಜಿಲ್ಲಾ ಕೇಂದ್ರದಲ್ಲಿಯೇ ಪೊಲೀಸ್ ಹೆಡ್‍ಕ್ವಾಟ್ರ್ರಸ್‍ನಲ್ಲಿ ಪೊಲೀಸ್ ಇಲಾಖೆಯ ಜಮೀನಿನ ಮೇಲೆ ನಿರ್ಮಿಸಿದ ಈ ಪ್ರಾರ್ಥನಾ ಗೃಹವನ್ನು ಯಾಕೆ ತೆರವುಗೊಳಿಸುತ್ತಿಲ್ಲ ಎಂಬುದನ್ನು ಇಲಾಖೆ ಹೇಳಬೇಕು.
ಈ ಬಗ್ಗೆ ನಾನು ಪೊಲೀಸ್ ಇಲಾಖೆಗೆ ದಾಖಲೆಗಳನ್ನು ಕೇಳಿದಾಗ ನÀನಗೆ ಯಾವುದೇ ದಾಖಲೆಯನ್ನು ಒದಗಿಸಿಲ್ಲ. ಅಲ್ಲದೇ ದಾಖಲೆಗಳು 100 ವರ್ಷ ಹಳೆದಾಗಿದ್ದು ಅವನ್ನು ನೀವೇ ಬಂದು ಪರಿಶೀಲಿಸಿ ಎಂದು ಉತ್ತರಿಸಿದ್ದಾರೆ. ತಾನು ಸರಕಾರಕ್ಕೆ ನೀಡಿದ್ದ ದೂರನ್ನು ಸರಕಾರ ಲೋಕಾಯುಕ್ತಕ್ಕೆ ವರ್ಗಾಯಿಸಿತ್ತು. ಅಲ್ಲಿ ಕೇವಲ ಡಿಎಆರ್ ಸಿಬ್ಬಂದಿಗಳಿಂದ ಹೇಳಿಕೆ ಪಡೆದು ಅಲ್ಲಿ ಮೊದಲೇ ಚರ್ಚ್ ಇತ್ತು ಹಾಗೂ ಈ ಹಳೆಯ ಕಟ್ಟಡ ತೆರವುಗೊಳಿಸಿ ಅದರ ಬದಲು ರಸ್ತೆಗೆ ಹೊಂದಿಕೊಂಡು ಇನ್ನೊಂದು ಚರ್ಚ್ ನಿರ್ಮಿಸಲಾಗಿದೆ ಎಂದು ಬರೆಯಲಾಗಿದೆ. ಅಲ್ಲದೇ 1992 ರ ನಂತರ ಅಲ್ಲಿ ಚರ್ಚ್ ಇತ್ತು ಎಂಬುದಕ್ಕೆ ಯಾವ ದಾಖಲೆಯೂ ಇಲ್ಲ ಎಂದು ಬರೆಯಲಾಗಿದೆ. ಈ ವರದಿಯನ್ನು ಓರ್ವ ಪೊಲೀಸ್ ಅಧಿಕಾರಿಯೇ ಲೋಕಾಯುಕ್ತಕ್ಕೆ ನೀಡಿದ್ದು ಇದರ ಬಗ್ಗೆ ಸಂಶಯ ಪಡುವಂತಾಗಿದೆ. 1992 ರ ನಂತರ ಸರಕಾರಿ ಜಮೀನಿನಲ್ಲಿ ಅನುಮತಿ ಇಲ್ಲದೇ ನಿರ್ಮಿಸಿದ ಪೂಜಾ ಸ್ಥಳಗಳನ್ನು ತೆರವುಗೊಳಿಸಬೇಕು ಎಂದು ಹೇಳಿರುವ ಹಿನ್ನೆಲೆಯಲ್ಲಿ ಅನಂತರದ ದಾಖಲೆ ಲಭ್ಯವಿಲ್ಲ ಎಂದು ಲೋಕಾಯುಕ್ತಕ್ಕೆ ಈ ಅಧಿಕಾರಿ ವರದಿ ಮಾಡಿ ಎರಡೂ ಕಡೆ ಬ್ಯಾಲೆನ್ಸ್ ಮಾಡಿದ್ದಾರೆ. ಇದು ಖಂಡನೀಯವಾಗಿದ್ದು 1992 ರ ನಂತರ ದಾಖಲೆ ಇಲ್ಲದಿದ್ದರೆ ಅದರ ಬದಲು ಇನ್ನೊಂದು ದೊಡ್ಡ ಪ್ರಾರ್ಥನಾ ಮಂದಿರ ಯಾಕೆ ನಿರ್ಮಿಸಿದರು ಎಂಬುದನ್ನು ಪೊಲೀಸ್ ಇಲಾಖೆ ವಿವರಿಸಬೇಕು.
ಈ ಪ್ರಾರ್ಥನಾ ಮಂದಿರವನ್ನು ನಿರ್ಮಿಸಲು ಸಿಬ್ಬಂದಿಯೇ ಹಣ ಸಂಗ್ರಹಿಸಿದ್ದಾರೆ ಎಂದು ಹೇಳಿದ್ದರೂ ಅದನ್ನು ಸಂಗ್ರಹಿಸಿದ ಅಧಿಕಾರಿಯ ಹೆಸರು ಏನು? ಅದಕ್ಕೆ ಇಲಾಖೆಯ ಸಕ್ಷಮ ಅಧಿಕಾರಿಯ ಹೆಸರು, ಪ್ರಾರ್ಥನಾ ಗೃಹವನ್ನು ಸ್ಥಳಾಂತರಿಸಲು ಡಿಎಆರ್‍ನ ಅಧಿಕಾರಿಗಳಿಗೆ ಅನುಮತಿ ನೀಡಿದ ಅಧಿಕಾರಿಗಳ ಹೆಸರು ಹೀಗೆ ಯಾವ ವಿವರಗಳೂ ಈ ಲೋಕಾಯುಕ್ತ ವರದಿಯಲ್ಲಿ ಇಲ್ಲ. ಅಲ್ಲದೇ ಪ್ರಶಾಂತ ನಾಯ್ಕ ಎಂಬ ಗುತ್ತಿಗೆದಾರ ಈ ಪ್ರಾರ್ಥನಾ ಮಂದಿರವನ್ನು ನಿರ್ಮಿಸಿದ್ದಾಗಿ ಈ ಲೋಕಾಯುಕ್ತ ವರದಿಯಲ್ಲಿ ಹೇಳಿದ್ದು ಅದಕ್ಕೆ ನಗರಸಭೆ ಅಥವಾ ಕೆಡಿಎ ಅನುಮತಿ ನೀಡಿಲ್ಲ. ಈ ಹಿಂದೆ ಕೆಪಿಟಿಸಿಎಲ್‍ನಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಈ ಪ್ರಾರ್ಥನಾ ಮಂದಿರಕ್ಕೆ ಕಲ್ಪಿಸಿದ್ದು, ಬಿಜೆಪಿ ದೂರು ನೀಡಿದ ನಂತರ ಕಡಿತಗೊಳಿಸಲಾಗಿತ್ತು.
ಕಳೆದ ಜನವರಿ 26 ರಂದು ಈ ಪ್ರಾರ್ಥನಾ ಮಂದಿರದ ಉದ್ಘಾಟನೆಯನ್ನು ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರು ಮಾಡಬೇಕಿತ್ತು. ಆದರೆ ಇದು ಅಕ್ರಮವಾಗಿ ಕಟ್ಟಿದ ಪ್ರಾರ್ಥನಾ ಮಂದಿರ ಎಂದು ಗಮನಕ್ಕೆ ಬಂದು ಅವರು ಅದನ್ನು ಉದ್ಘಾಟಿಸಲು ನಿರಾಕರಿಸಿದ್ದರು. ಈಗ ಒಂದು ವರ್ಷದ ನಂತರ ಮತ್ತೆ ಈ ಕಟ್ಟಡವನ್ನು ಉದ್ಘಾಟಿಸಲು ಪ್ರಯತ್ನಗಳು ಆರಂಭವಾಗಿದೆ. ಇದನ್ನು ಭಾರತೀಯ ಜನತಾ ಪಾರ್ಟಿ ವಿರೋಧಿಸುತ್ತದೆ. ಒಂದು ವೇಳೆ ಈ ಅಕ್ರಮ ಕಟ್ಟಡದ ಉದ್ಘಾಟನೆಯನ್ನು ಸರಕಾರಿ ಅಧಿಕಾರಿಗಳು ನಡೆಸಿದರೆ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸುವುದು ಖಚಿತ. ಈ ಅಕ್ರಮ ಕಟ್ಟಡವನ್ನು ತಕ್ಷಣ ತೆರವುಗೊಳಿಸಬೇಕು ಎಂದು ಆಗ್ರಹಿಸುತ್ತೇವೆ.
ರಾಜೇಶ ನಾಯಕ
ಜಿಲ್ಲಾವಕ್ತಾರರು, ಬಿಜೆಪಿ
ಉತ್ತರ ಕನ್ನಡ