ವರ್ಷ ಕಳೆದರೂ ದುರಸ್ಥಿ ಕಾಣದ ಕುಸಿದು ಬಿದ್ದ ತೆಂಗಿನಗುಂಡಿ ಬಂದರ್ ಜಟ್ಟಿ
ಮಿನುಗಾರಿಕ ಸಚಿವರೇ ಸ್ಪಲ್ಪ ಇತ್ತಕಡೆ ಗಮನ ಹರಿಸುವಿರಾ?
ಭಟ್ಕಳ: ತಾಲೂಕಿನ ಹೆಬಳೆ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ತೆಂಗಿನಗುಂಡಿ ಬಂದರ್ ನಲ್ಲಿರುವ ಧಕ್ಕೆ (ಜೆಟ್ಟಿ) ಕುಸಿದು ಬಿದ್ದು ವರ್ಷ ಕಳೆಯುತ್ತಿದ್ದರೂ ಅದನ್ನು ದುರಸ್ತಿಗೊಳಿಸದ ಬಂದರ್ ಇಲಾಖೆಗೆ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದು ಸ್ಥಳೀಯ ಶಾಸಕರಾಗಿರುವ ಮಾಂಕಾಳ್ ವೈದ್ಯ ಮಿನುಗಾರಿಕೆ ಮತ್ತು ಬಂದರ್ ಸಚಿವರಾಗಿದ್ದು ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳತ್ತಾರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಆಕರ್ಷಕ ಪ್ರವಾಸಿ ತಾಣವಾಗಿ ಮಾರ್ಪಟ್ಟಿರುವ ತೆಂಗಂಗೊಂಡಿ ಬಂದರು ಶಿಥಿಲಾವಸ್ಥೆಯಲ್ಲಿದ್ದು, ತಕ್ಷಣ ಗಮನಹರಿಸಬೇಕು ಎಂಬ ಕೂಗು ಬಂದಿದೆ. ಸ್ಥಳೀಯರಿಂದ ಧಕ್ಕೆ ಎಂದೂ ಕರೆಯಲಾಗುವ ಜೆಟ್ಟಿ ಕಳೆದ ವರ್ಷ ಹಠಾತ್ ಕಸಿದು ಬಿದ್ದಿತ್ತು.ಇದರ ಪರಿಣಾಮವಾಗಿ ಕಲ್ಲುಗಳನ್ನು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಅದರೊಳಗೆ ಸಿಲುಕಿಕೊಂಡಿತ್ತು. ಇಡೀ ವರ್ಷ ಕಳೆದರೂ, ಜೆಟ್ಟಿಯ ಹಾನಿಗೊಳಗಾದ ಭಾಗವು ದುರಸ್ತಿಯಾಗದೆ ಉಳಿದಿದೆ, ಇದು ಪ್ರವಾಸಿಗರ ಸುರಕ್ಷತೆಗೆ ಅಪಾಯವನ್ನೊಡ್ಡಿದೆ.
ಸಂಜೆಯಾದೊಡನೆ ಭಟ್ಕಳದಿಂದ ಅನೇಕಾರು ಮಂದಿ ತಮ್ಮ ಮಕ್ಕಳೊಂದಿಗೆ ತೆಂಗಿನಗುಂಡಿ ಬಂದರ್ ಪ್ರದೇಶಕ್ಕೆ ವಾಯುವಿಹಾರಕ್ಕೆಂದು ಬರುತ್ತಾರೆ. ಚಿಕ್ಕ ಚಿಕ್ಕ ಮಕ್ಕಳು ಜೊತೆಯಲ್ಲಿರುವುದರಿಂದಾಗಿ ಇದು ಅತ್ಯಂತ ಅಪಾಯಕಾರಿಯಾಗಿದೆ ಎಂದು ಸ್ಥಳಿಯರು ಹೇಳುತ್ತಾರೆ. ಜೆಟ್ಟಿಯ ಸ್ಥಿತಿ ಹದಗೆಟ್ಟಿದ್ದು, ಕೆಳಭಾಗದಲ್ಲಿ ಆಸರೆಯಿಲ್ಲದ ಕಾರಣ ಅದರ ಮೇಲೆ ನಡೆದಾಡುವುದು ಕೂಡ ಅಪಾಯಕಾರಿಯಾಗಿದೆ.
ಕಳೆದ ವರ್ಷದ ಮಳೆಗೆ ಕುಸಿದು ಬಿದ್ದ ಜಟ್ಟಿಯನ್ನು ಅಂದಿನ ಮೀನುಗಾರಿಕಾ ಸಚಿವ ಎಸ್.ಅಂಗಾರ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದು, ತ್ವರಿತವಾಗಿ ದುರಸ್ತಿ ಮಾಡುವುದಾಗಿ ಸ್ಥಳೀಯ ಮೀನುಗಾರರಿಗೆ ಭರವಸೆ ನೀಡಿದ್ದರು. ಆದರೆ ಆ ಭರವಸೆ ಇದುವರೆಗೂ ಈಡೇರಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ.
ಸಧ್ಯ ಮೀನುಗಾರಿಕೆ ಖಾತೆಯನ್ನು ಹೊಂದಿರುವ ಭಟ್ಕಳ ಶಾಸಕ ಮಾಂಕಾಳ್ ವೈದ್ಯರ ಮೇಲೆ ಮೀನುಗಾರರ ದೃಷ್ಟಿ ನೆಟ್ಟಿದ್ದು ಕನಿಷ್ಠ ಪಕ್ಷ ಮೀನುಗಾರ ಸಮುದಾಯಕ್ಕೆ ಸೇರಿದ ಮಂಕಾಳ್ ವೈದ್ಯರು ತಮ್ಮದೆ ಸಮುದಾಯದ ಸಮಸ್ಯೆಗಳ ಗಮನ ಹರಿಸುತ್ತಾರೆಯೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ನೂತನ ಸಚಿವರು ಈ ಸಮಸ್ಯೆಗೆ ಆದ್ಯತೆ ನೀಡಿ ಜೆಟ್ಟಿಯ ಹಾನಿಗೊಳಗಾದ ಭಾಗವನ್ನು ಸರಿಪಡಿಸಲು ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.