ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ಉಚಿತ ವೈದ್ಯಕೀಯ ಶಿಬಿರ
ಭಟ್ಕಳ:ತಾಲ್ಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕ್ರಿಯಾಶೀಲ ಗೆಳೆಯರ ಬಳಗ ನೇತೃತ್ವದಲ್ಲಿ ಸರಕಾರಿ ಆಸ್ಪತ್ರೆಯ ಸಹಯೋಗದಲ್ಲಿ ನವೆಂಬರ್ 24 ರಂದು ಭಾನುವಾರ ಬೆಳಿಗ್ಗೆ 9ಗಂಟೆಯಿಂದ 12 ಗಂಟೆಯ ವರೆಗೆ ಸರಕಾರಿ ಆಸ್ಪತ್ರೆಯಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ ನಡೆಯಲಿದೆ.
ಈ ಕುರಿತು ಬುಧವಾರ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಕೆ ಎಸ್ ಹೆಗ್ಡೆ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ವ್ಯವಸ್ಥಾಪಕ ಜೈಸನ್ ಅವರು, ಶಿಬಿರದಲ್ಲಿ ಕೆ ಎಸ್ ಹೆಗ್ಡೆ ಆಸ್ಪತ್ರೆಯ ಖ್ಯಾತ ಎಲುಬು ಮತ್ತು ಕೀಲು ತಜ್ಞ ಡಾ. ವಿಕ್ರಮ್ ಶೆಟ್ಟಿ, ಜನರಲ್ ಸರ್ಜನ್ ಡಾ. ಅಭಿಜಿತ್ ಎಸ್ ಶೆಟ್ಟಿ, ಎಲುಬು ಮತ್ತು ಕೀಲು ತಜ್ಞ ಡಾ. ಪ್ರಥ್ವಿ ಕೆ ಪಿ, ಪ್ಲಾಸ್ಟಿಕ್ ಸರ್ಜನ್ ಡಾ. ಭರತ್ ಜೆ ನಾಯ್ಕ ಮುಂತಾದ ವೈದ್ಯರ ತಂಡ ಪಾಲ್ಗೊಂಡು ವೈದ್ಯಕೀಯ ತಪಾಸಣೆ, ಅಗತ್ಯ ಸಲಹೆ ನೀಡಲಿದ್ದಾರೆ. ಕೆ ಎಸ್ ಹೆಗ್ಡೆ ಆಸ್ಪತ್ರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿ ಜನತೆಗೆ ಅನುಕೂಲ ಮಾಡಿಕೊಟ್ಟಿದೆ ಎಂದ ಅವರು ತಪಾಸಣೆಗೆ ಆಗಮಿಸುವವರು ಈ ಹಿಂದೆ ಯಾವುದೇ ಆಸ್ಪತ್ರೆ, ವೈದ್ಯರಲ್ಲಿ ಚಿಕಿತ್ಸೆ ಪಡೆದವರಾದಲ್ಲಿ ಹಿಂದಿನ ವೈದ್ಯಕೀಯ ದಾಖಲೆ ತರಬೇಕಿದೆ. ಕೆ ಎಸ್ ಹೆಗ್ಡೆ ಆಸ್ಪತ್ರೆಯಿಂದ ಕ್ಷೇಮ ಹೆಲ್ತ ಕಾರ್ಡ ಎನ್ನುವ ವಿಮಾ ಯೋಜನೆಯೂ ಲಭ್ಯವಿದ್ದು, ಶಿಬಿರದಲ್ಲಿ ಆಸಕ್ತರು ವೈಯಕ್ತಿಕ ಮತ್ತು ಕುಟುಂಬ ಸದಸ್ಯರ ಆರೋಗ್ಯ ವಿಮಾ ಕೂಡ ಮಾಡಿಸಬಹುದಾಗಿದೆ. ವಿಮಾ ಯೋಜನೆಗೆ ಆಧಾರ ಮತ್ತು ರೇಶನ್ ಕಾರ್ಡ ಝೆರಾಕ್ಸ ಪ್ರತಿ ಖಡ್ಡಾಯವಾಗಿದೆ ಎಂದರು. ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಮಾತನಾಡಿ,
ಈ ಹಿಂದೆ ಖಾಸಗಿ ಆಸ್ಪತ್ರೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳು ಪ್ರತ್ಯೇಕವಾಗಿ ತಪಾಸಣೆ ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದವು.ಆದರೆ ಇದೀಗ ಸರ್ಕಾರದ ಯೋಜನೆಗಳಾದ ಆಯುಷ್ಮಾನ ಭಾರತ, ಯಶಸ್ವಿನಿ ಕಾರ್ಡ್ ಮುಂತಾದ ಆರೋಗ್ಯಕ್ಕೆ ಸಂಬಂಧಿಸಿದ ವಿಮೆ ಪಾಲಿಸಿಗಳನ್ನು ಹೊಂದಿರುವದರಿಂದ ಎರಡು ಆಸ್ಪತ್ರೆಗಳು ಒಂದಕ್ಕೊಂದು ಸಂಯೋಜನಾತ್ಮಕವಾಗಿ ಕೆಲಸ ಮಾಡುವಂತಾಗಿದೆ. ತಾಲೂಕಾ ಆಸ್ಪತ್ರೆಯ, ಜಿಲ್ಲಾ ಆಸ್ಪತ್ರೆಯ ಮಟ್ಟಕ್ಕೆ ನಡೆಯುವ ವೈಧ್ಯಕೀಯ ಚಿಕಿತ್ಸೆಗಳು ಆಯಾ ಆಸ್ಪತ್ರೆಯಲ್ಲಿಯೇ ನಡೆಸಬೇಕಾಗುತ್ತದೆ. ಅದರ ಹೊರತಾಗಿ ಈ ಎರಡು ಆಸ್ಪತ್ರೆಯಲ್ಲಿ ಲಭ್ಯವಿರದ ಚಿಕಿತ್ಸೆಗಾಗಿ ಸರ್ಕಾರದ ಸೌಲಭ್ಯದೊಂದಿಗೆ ಖಾಸಗಿ ಆಸ್ಪತ್ರೆಗೆ ಸೂಚಿಸಲಾಗುವುದು ಶಿಬಿರದಲ್ಲಿ ಕೆ ಎಸ್ ಹೆಗ್ಡೆ ಆಸ್ಪತ್ರೆಯ ತಜ್ಞ ವೈದ್ಯರು ಆಗಮಿಸುವುದರಿಂದ ವೈದ್ಯಕೀಯ ಶಿಬಿರದ ಸದುಪಯೋಗವನ್ನು ಜನರು ಪಡೆಯಬೇಕು ಎಂದರು. ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ್ ಅವರು, ಜನತೆಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ಶಿಬಿರ ಏರ್ಪಡಿಸಲಾಗಿದೆ. ಇದರ ಸದುಪಯೋಗವನ್ನು ಪಡೆಯಬೇಕೆಂದು ಮನವಿ ಮಾಡಿದರು. ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಮನಮೋಹನ ನಾಯ್ಕ, ಕ್ರಿಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ದೀಪಕ ನಾಯ್ಕ, ಪ್ರಧಾನ ಕಾರ್ಯದರ್ಶಿ ಪಾಂಡುರಂಗ ನಾಯ್ಕ ಮುಂತಾದವರಿದ್ದರು