ದೇವರು, ಧರ್ಮದ ಪರಿಧಿಯ ಹೊರಗೂ ಉಪವಾಸಕ್ಕೆ ತನ್ನದೇ ಆದ ಅರ್ಥ ಮತ್ತು ಮೌಲ್ಯವಿದೆ

Source: sonews | By Staff Correspondent | Published on 7th June 2017, 8:14 PM | Coastal News | State News | Special Report | Islam | Don't Miss |

 -ಪ್ರೊ. ಆರ್. ಎಸ್. ನಾಯಕ, ಭಟ್ಕಳ
ಪವಿತ್ರ ಕುರಾನ್ ಅವತೀರ್ಣಗೊಂಡ ತಿಂಗಳು ರಮ್ಜಾನ್ ತಿಂಗಳು. ಅದೀಗ ಆರಂಭವಾಗಿದೆ. ಇದನ್ನು ಉಪವಾಸದ ತಿಂಗಳು ಎಂದೂ ಕರೆಯುತ್ತಾರೆ. ಮುಸಲ್ಮಾನ್ ಸಹೋದರ ಸಹೋದರಿಯರು ಈ ತಿಂಗಳ ಪೂರ್ತಿ ಉಪವಾಸವೃತವನ್ನು ಆಚರಿಸುತ್ತಾರೆ. ಉಪವಾಸವೆಂದರೆ ಕೇವಲ ಅನ್ನ ಪಾನೀಯಗಳಿಂದ ದೂರವಿರುವುದಲ್ಲ; ಕೆಡುಕಿನಿಂದಲೂ ದೂರವಿರುವುದು. ಉಳಿದ ಧರ್ಮದವರು ತಿಂಗಳಾನುಗಟ್ಟಲೆ ಅಲ್ಲದಿದ್ದರೂ ವಾರಕ್ಕೊಮ್ಮೆಯೋ ಎರಡು ಸಲವೋ ಅಥವಾ ಶಿವರಾತ್ರಿ, ಸಂಕಷ್ಠಿ ಮೊದಲಾದ ದಿನಗಳಲ್ಲಿ ಉಪವಾಸವೃತ ಆಚರಿಸುವುದಿದೆ.
‘ಉಪ’ ಮತ್ತು ‘ವಾಸ’ ಸೇರಿ ಉಪವಾಸ ಆಗಿದೆ. ಅಂದರೆ ಹತ್ತಿರ ವಾಸಿಸುವುದು, ದೇವರ ಹತ್ತಿರ ಇರುವುದು ಎಂಬುದು ಇದರ ಅರ್ಥ. ‘ಉಪವಾಸ’ ಎಂಬ ಶಬ್ದವನ್ನು ದೈವಭಕ್ತರು ವ್ಯಾಖ್ಯಾನಿಸುವ ರೀತಿ ಇದು.
ದೇವರು, ಧರ್ಮದ ಪರಿಧಿಯ ಹೊರಗೂ ಉಪವಾಸಕ್ಕೆ ತನ್ನದೇ ಆದ ಅರ್ಥ ಮತ್ತು ಮೌಲ್ಯವಿದೆ. ಅದು ಎಷ್ಟರ ಮಟ್ಟಿಗೆ ಧಾರ್ಮಿಕವೋ ಅದಕ್ಕಿಂತ ಹೆಚ್ಚಾಗಿ ಸಾಮಾಜಿಕವೂ ಮಾನವೀಯವೂ ಆದ ಪರಿಕಲ್ಪನೆಯನ್ನು ಹೊಂದಿದೆ; ಅಥವಾ ಅದನ್ನು ಆ ರೀತಿಯ ಪರಿಕಲ್ಪನೆಯಾಗಿ ಪರಿವರ್ತಿಸಬೇಕಾಗಿದೆ.
ಬುದ್ಧ, ಬಸವ, ಗಾಂಧೀ ಮೊದಲಾದ ಮಾನವತಾವಾದಿಗಳು ದೀನರಲ್ಲೇ ದೇವರನ್ನು ಕಂಡವರು. ‘ದರಿದ್ರನಾರಾಯಣ’ ಎಂಬ ಪದ ಬಳಿಸಿದವರು. ದರಿದ್ರ ಅಥವಾ ದೀನರಿಗೆ ಹತ್ತಿರವಾಗುವುದೆಂದರೆ ದೇವರಿಗೆ ಹತ್ತಿರವಾಗುವುದು ಎಂದು ಪ್ರತಿಪಾದಿಸಿದವರು. ಉಣ್ಣದಿರುವ ಲಿಂಗಕ್ಕೆ ಹಾಲೆರೆಯುವುದಕ್ಕಿಂತ ಉಣ್ಣುವ ಜಂಗಮನಿಗೆ ತುತ್ತು ಅನ್ನ ನೀಡುವುದು ಅರ್ಥಪೂರ್ಣವೆಂದು ಸಾರಿದವರು. 
ಧರ್ಮಾಧರ್ಮ, ಪಾಪ-ಪುಣ್ಯದ ವಿಚಾರವನ್ನು ಹೊರಗಿಟ್ಟು ‘ಉಪವಾಸ’ದ ಬಗ್ಗೆ ಯೋಚಿಸಬೇಕಾಗಿದೆ. ಉಪವಾಸದಿಂದ ವ್ಯಕ್ತಿ ಮತ್ತು ಸಮಷ್ಟಿಗಳೆರಡಕ್ಕೂ ಅನುಕೂಲವಿದೆ. ವೈಜ್ಞಾನಿಕವಾಗಿ, ಸಾಮಾಜಿಕವಾಗಿ ಯೋಚಿಸಿದಾಗ ಈ ಮಾತಿನ ಸತ್ಯ ಅರಿವಿಗೆ ಬರುತ್ತದೆ. 
ಪಶು-ಪಕ್ಷಿಗಳಿರಲಿ, ಮನುಷ್ಯನಿರಲಿ ಪ್ರತಿಯೊಂದು ಜೀವಕ್ಕೂ ದುಡಿಮೆ, ಬಿಡುವುಗಳೆರಡೂ ಮುಖ್ಯ. ಅಷ್ಟೇ ಅಲ್ಲ ಯಂತ್ರಗಳಿಗೂ ಸಹ ಬಿಡುವು ಬೇಕಾಗುತ್ತದೆ. ನಿರಂತರವಾಗಿ ಕಾರ್ಯನಿರ್ವಹಿಸಿ ಕಾದು ಬಿಸಿಯಾಗುವ ಯಂತ್ರಕ್ಕೂ ಕಾಲಕಾಲಕ್ಕೆ ಬಿಡುವು ನೀಡಿ ಬಳಸಿದರೆ ಬಾಳಿಕೆ ಬರುತ್ತದೆ. ಮನುಷ್ಯನ ಒಡಲು ಸಹ ಒಂದು ಯಂತ್ರವೇ. ತಿಂದ ಆಹಾರವನ್ನು ಅರೆದು ಕರಗಿಸುವ ಜಠರವೂ ಅಂತಹ ಒಂದು ಯಂತ್ರ. ಸದಾ ಕಾಲ ತಿನ್ನುತ್ತಲೇ ಇದ್ದರೆ ಅದಕ್ಕೆ ಬಿಡುವು ಸಿಗುವುದಾದರೂ ಹೇಗೆ? ಅದಕ್ಕೆ ಬಿಡುವು ನೀಡಬೇಕೆಂದರೆ ಕೆಲ ಸಮಯವಾದರೂ ಹೊಟ್ಟೆಯನ್ನು ಖಾಲಿ ಬಿಡಬೇಕು. ಪಚನಕ್ರಿಯೆಯ ಅವಯವಗಳಿಗೆ ಬಿಡುವು ಸಿಕ್ಕಿ ಅವು ಇನ್ನೂ ಹೆಚ್ಚು ಉತ್ತಮವಾಗಿ ಕಾರ್ಯ ನಿರ್ವಹಿಸಲು ಅನುಕೂಲವಾಗುತ್ತದೆ. ಉಪವಾಸದಿಂದ ಇದು ಸಾಧ್ಯವಾಗುತ್ತದೆ. ಇದರಿಂದ ವ್ಯಕ್ತಿಯ ಶಾರೀರಿಕ ಆರೋಗ್ಯ ವೃದ್ಧಿಸುತ್ತದೆ. ದೈಹಿಕವಾಗಿ ಮನುಷ್ಯ ಶಕ್ತಿಶಾಲಿಯಾಗುವುದರೊಟ್ಟಿಗೆ ಮಾನಸಿಕವಾಗಿ, ಬೌದ್ಧಿಕವಾಗಿಯೂ ಶಕ್ತಿಶಾಲಿಯಾಗುತ್ತಾನೆ. ನಮ್ಮ ಹಿರಿಯರು, ಅವರು ಯಾವುದೇ ಧರ್ಮದವರಾದರೂ ಉಪವಾಸ ಎಂಬುದನ್ನು ಒಂದು ಸಂಪ್ರದಾಯವೆಂಬಂತೆ ಪಾಲಿಸಿಕೊಂಡು ಬರುತ್ತಿದ್ದರು. ಇದರಲ್ಲಿ ಮೇಲ್ನೋಟಕ್ಕೆ ಧರ್ಮ, ದೇವರು, ಸಂಪ್ರದಾಯ, ಆಚರಣೆಗಳು ಮಾತ್ರ ಕಂಡಬಂದರೂ ಇಲ್ಲಿ ವಿಜ್ಞಾನವೂ ಇದೆ ಎಂದುದನ್ನು ತಿಳಿಯಬೇಕು. 
ಉಪವಾಸದಿಂದಾಗುವ ಇನ್ನೊಂದ ಪ್ರಮುಖವಾದ ಅನುಭವ ನಮ್ಮನ್ನು ಹೆಚ್ಚು ಸಾಮಾಜಿಕರನ್ನಾಗಿಸುತ್ತದೆ. ಜೊತೆಗೆ ಮಾನವೀಯ ತುಡಿತ ಮಿಡಿತಗಳಿಗೂ ಕಾರಣವಾಗುತ್ತದೆ. ಹೊಟ್ಟೆ ತುಂಬಿದವರಿಗೆ ಹಸಿದವರ ಸಂಕಟ ಅರ್ಥವಾಗುವುದಿಲ್ಲ. ನೊಂದವರಿಗೆ ಮಾತ್ರವೇ ನೋವಿನ ಅನುಭವವಿರುತ್ತದೆ; ಅನ್ನದ ಮಹತ್ವ ಗೊತ್ತಾಗುತ್ತದೆ. ನೊಂದವರ, ದೀನ ದಲಿತರ, ಹಸಿವಿನಿಂದ ಒದ್ದಾಡುವವರ ಸಂಕಟವೇನೆಂಬುದನ್ನು ಉಪವಾಸ ನಮಗೆ ತಿಳಿಸಿಕೊಡುತ್ತದೆ. ಇದು ಸಾಮಾಜಿಕ ಸ್ಪಂದನೆಗೆ ದಾರಿಯಾಗುತ್ತದೆ. ಆ ಅರಿವು ಹಸಿದವರಿಗೆ ತುತ್ತು ಅನ್ನ ನೀಡಲು ಕಲಿಸಿಕೊಡುತ್ತದೆ. ರಮ್ಜಾನ್ ತಿಂಗಳ ಆರಂಭದ ದಿನಗಳಿಗಿಂತ ಕೊನೆಯ ದಿನಗಳಲ್ಲಿ ಹೆಚ್ಚು ಹೆಚ್ಚು ದಾನ ಮಾಡಲು ಹಸಿವಿನ ಅನುಭವದ ಪ್ರೇರಣೆಯೇ ಕಾರಣವೆಂದರೆ ತಪ್ಪಾಗದು. ಉಪವಾಸವು ನೋವಿನ ಸಂಕಟವನ್ನು ಗ್ರಹಿಸುವ ಅನುಭವ ನೀಡುವುದರ ಜೊತೆಗೆ, ಹಸಿದ ಹೊಟ್ಟೆಯನ್ನು ತಣಿಸಬೇಕೆಂಬ ಅರಿವನ್ನೂ ನೀಡುತ್ತದೆ.
ಎಲ್ಲವೂ ಸರಿ. ಆದರೆ ಉಪವಾಸವು ತೋರಿಕೆಯ ವಸ್ತುವಾದಾಗ ಅದು ಕೇವಲ ಒಂದು ಶಬ್ದವಾಗಿರುತ್ತದೆ. ಅದು ಮನುಷ್ಯ ಮತ್ತು ಸಮಾಜದ ಸವಾಂಗೀಣ ಉನ್ನತಿಗೆ ಬಳಸಲ್ಪಟ್ಟಾಗ ಅದೊಂದು ಪರಿಕಲ್ಪನೆ ಅಥವಾ ಕಾನ್ಸೆಪ್ಟ್ ಆಗುತ್ತದೆ. ಸತ್ಯ + ಆಗ್ರಹ = ಸತ್ಯಾಗ್ರಹ. ಇದೊಂದು ಶಬ್ದ. ಇಲ್ಲಿರುವುದು ಸವರ್ಣದೀರ್ಘಸಂಧಿ. ಆದರೆ ಗಾಂಧೀಜಿಯ ಕೈಯಲ್ಲಿ ಸತ್ಯಾಗ್ರಹ ಎನ್ನುವುದು ಕೇವಲ ಇಷ್ಟೇ ಆಗಿ ಉಳಿಯಲಿಲ್ಲ; ಅದೊಂದು ಕಾನ್ಸೆಪ್ಟ್ ಆಯಿತು. ಹಾಗೆಯೇ ಉಪವಾಸವೂ ಒಂದು ಶಬ್ದ ಮಾತ್ರವಾಗಿರದೆ ಅದು ಪರಿಕಲ್ಪನೆಯಾಗಬೇಕು. ಅದಕ್ಕೆ ಹೊರಗಿನ ಬದಲಾವಣೆಗಳಿಗಿಂತ ಆಂತರ್ಯದಿಂದಲೇ ಆಗುವ ಪರಿವರ್ತನೆ ಮುಖ್ಯವಾಗಿರುತ್ತದೆ. 

Read These Next

ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗುತ್ತಿರುವ ಸತೀಶ್ ಆಚಾರ್ಯ ಅವರ “ಏಕ್ ಹೈ ತೊ ಸೈಫ್ ಹೈ”  ಅದ್ಭುತ ಕಾರ್ಟೂನ್

ಭಟ್ಕಳ: ಹಿಂದೂ ಮತಗಳನ್ನು ಕ್ರೂಢಿಕರಿಸಲು ಉತ್ತರಪ್ರದೇಶದ ಸಿ.ಎಂ. ಯೋಗಿ ಆಧಿತ್ಯನಾತ್ ನೀಡಿದ ಏಕ್ ಹೈ ತೋ ಸೇಫ್ ಹೈ” ರಾಜಕೀಯ ...

ಸಿ.ಎ.ಖಲೀಲ್ ಸಾಹೇಬರ ನಿಧನಕ್ಕೆ ಭಟ್ಕಳದ ಐದು ಕೇಂದ್ರಿಯ ಸಂಘಟನೆಗಳಿಂದ ಜಂಟಿ ಸಂತಾಪ ಸಭೆ

ಭಟ್ಕಳ: ಇಫ್ತಿಖಾರ್-ಇ-ಖೌಮ್ ಬಿರುದಾಂಕಿತ, ಪ್ರಸಿದ್ಧ ಉದ್ಯಮಿ ಮತ್ತು ಸಮಾಜ ಸೇವಕ ಸೈಯ್ಯದ್ ಖಲೀಲರ‍್ರಹ್ಮಾನ್ (ಸಿ.ಎ. ಖಲೀಲ್) ಅವರ ...

ಮೂರು ಕ್ಷೇತ್ರಗಳಲ್ಲಿ ಜಯಭೇರಿ: ಭಟ್ಕಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಭಟ್ಕಳ: ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮೂರು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದು, ಭಟ್ಕಳದಲ್ಲಿ ...

ರಾಜ್ಯದ ಮೂರೂ ಕ್ಷೇತ್ರಗಳು ಕೈವಶ; ಉಪಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ ಎನ್‌ಡಿಎ

ರಾಜ್ಯದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆಗೆ ಕಾರಣವಾಗಿದ್ದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ...

ನ.21 ರಿಂದ ಮುರ್ಡೇಶ್ವರದಲ್ಲಿ ಮತ್ಸ ಮೇಳ; ಪ್ರಥಮ ಬಾರಿಗೆ ಉತ್ತರಕನ್ನಡದಲ್ಲಿ ಆಯೋಜನೆ; ಮೂರು ದಿನಗಳ ಕಾಲ ಮೀನು ಖಾದ್ಯ ಪ್ರಿಯರಿಗೆ ಹಬ್ಬ

ಉತ್ತರಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿಶ್ವ ಮೀನುಗಾರಿಕಾ ದಿನಾಚರಣೆಯ ಅಂಗವಾಗಿ ನ.21ರಿಂದ ನ.23ರವರೆಗೆ ...

ಶಿಗ್ಗಾಂವಿ: ಬ್ಯಾಲೆಟ್ ಬಾಕ್ಸ್‌ ಗಳು ಚರಂಡಿಯಲ್ಲಿ ಪತ್ತೆ; ಉಪಚುನಾವಣೆ ಮುಗಿದ ಮರುದಿನವೇ ನಡೆದ ಘಟನೆ

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಜಿಲ್ಲೆಯ ಯತ್ತಿನಹಳ್ಳಿ ಗ್ರಾಮದ ಬಳಿಯ ...

ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗುತ್ತಿರುವ ಸತೀಶ್ ಆಚಾರ್ಯ ಅವರ “ಏಕ್ ಹೈ ತೊ ಸೈಫ್ ಹೈ”  ಅದ್ಭುತ ಕಾರ್ಟೂನ್

ಭಟ್ಕಳ: ಹಿಂದೂ ಮತಗಳನ್ನು ಕ್ರೂಢಿಕರಿಸಲು ಉತ್ತರಪ್ರದೇಶದ ಸಿ.ಎಂ. ಯೋಗಿ ಆಧಿತ್ಯನಾತ್ ನೀಡಿದ ಏಕ್ ಹೈ ತೋ ಸೇಫ್ ಹೈ” ರಾಜಕೀಯ ...

ನೈತಿಕ ಮೌಲ್ಯಗಳು ಮತ್ತು ಸಚ್ಚಾರಿತ್ರ್ಯ: ಪ್ರವಾದಿ ಮುಹಮ್ಮದ್ (ಸ) ಅವರ ಬದುಕಿನ ದಾರ್ಶನಿಕತೆ

ಇಂದು ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬ ವ್ಯಕ್ತಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ ನೈತಿಕ ಮೌಲ್ಯಗಳ ಅಧಪತನ ಮತ್ತು ...

ಕಾರವಾರ: ಶಕ್ತಿ ಯೋಜನೆಗೆ ತುಂಬಿತು ವರ್ಷ: ಜಿಲ್ಲೆಯಲ್ಲಿ 6.19 ಕೋಟಿ ಮಹಿಳೆಯರಿಗೆ ಉಚಿತ ಪ್ರಯಾಣದ ಹರ್ಷ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ರಾಜ್ಯಾದ್ಯಂತ ಸಂಚರಿಸುವ ಉಚಿತ ...

ನೈತಿಕ ಮೌಲ್ಯಗಳು ಮತ್ತು ಸಚ್ಚಾರಿತ್ರ್ಯ: ಪ್ರವಾದಿ ಮುಹಮ್ಮದ್ (ಸ) ಅವರ ಬದುಕಿನ ದಾರ್ಶನಿಕತೆ

ಇಂದು ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬ ವ್ಯಕ್ತಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ ನೈತಿಕ ಮೌಲ್ಯಗಳ ಅಧಪತನ ಮತ್ತು ...

ಈದ್-ಉಲ್-ಫಿತರ್ ಪ್ರತಿನಿಧಿಸುವ ಮೌಲ್ಯಗಳು; ಮನುಷ್ಯ ಪ್ರೇಮ, ಕರುಣೆ, ಅನುಕಂಪ  ಮತ್ತು ಸಹಾನುಭೂತಿ

ಕೋಮು ಧ್ರುವೀಕರಣ ಮತ್ತು ಧಾರ್ಮಿಕ ಅಸಹಿಷ್ಣುತೆಯ ಹಿನ್ನೆಲೆಯಲ್ಲಿ, ಈದ್-ಉಲ್-ಫಿತರ್‌ನ ಮಹತ್ವವು ಹೆಚ್ಚಿನ ಪ್ರಾಮುಖ್ಯತೆಯನ್ನು ...

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ಉಚಿತ ವೈದ್ಯಕೀಯ ಶಿಬಿರ

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ...