ಭಟ್ಕಳ,: ಇಸ್ಲಾಮ್ ಕುರಿತ ಅಜ್ಞಾನದಿಂದಾಗಿ ಕೆಲ ಅವಿವೇಕಿಗಳು ಮುಸ್ಲಿಮ್ ಪರ್ಸನಲ್ ಲಾ ವನ್ನು ಕೋರ್ಟಿನಲ್ಲಿ ಪ್ರಶ್ನಿಸಿದ್ದು ಇದಕ್ಕಾಗಿ ಸರ್ಕಾರ ಏಕರೂಪ ನಾಗರೀಕ ಸಂಹಿತೆ ಹೇರಲು ಮುಂದಾಗಿರುವುದರ ವಿರುದ್ಧ ದೇಶದ ಮುಸ್ಲಿಮರು ಸಾಂವಿಧಾನಿಕ ರೀತಿಯಲ್ಲಿ ಹೋರಾಟಕ್ಕೆ ಸಜ್ಜಾಗುವಂತೆ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಅಧ್ಯಕ್ಷ ಮೌಲಾನ ಸೈಯ್ಯದ್ ಮುಹಮ್ಮದ್ ರಾಬೆಅ ಹಸನಿ ನದ್ವಿ ಹೇಳಿದರು.
ಅವರು ಭಟ್ಕಳದ ಜಾಮಿಯಾ ಇಸ್ಲಾಮಿಯಾ ಕಾಲೇಜ್ ಆವರಣದಲ್ಲಿ ಇಲ್ಲಿನ ಮುಸ್ಲಿಮ್ ಸಾಮಾಜಿಕ, ರಾಜಕೀಯ ಐಕ್ಯವೇದಿಕೆಯಾಗಿರುವ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಆಯೋಜಿಸಿದ್ದ ಬೃಹತ್ ಶರಿಯತ್ ಸಂರಕ್ಷಣಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಇಸ್ಲಾಮ್ ಧರ್ಮ ಸಾರ್ವತ್ರಿಕವಾಗಿದ್ದು ಇದು ಮನುಷ್ಯ ಮನುಷ್ಯರಲ್ಲಿ ಎಂದಿಗೂ ಬೇಧವನ್ನುಂಟು ಮಾಡುವುದಿಲ್ಲ. ಮಾನವರ ಮಾರ್ಗದರ್ಶನಕ್ಕಾಗಿ, ಜನರಿಗೆ ಬದುಕಲು ಕಲಿಸುವ ಧರ್ಮವಾಗಿದ್ದು ಇದರಲ್ಲಿ ಯಾವದೇ ರೀತಿಯ ಹಸ್ತಕ್ಷೇಪವನ್ನು ಮುಸ್ಲಿಮ ಸಮುದಾಯ ಎಂದಿಗೂ ಸಹಿಸದು. ಯಾವಾಗೆಲ್ಲ ಮುಸ್ಲಿಮ್ ಪರ್ಸನಲ್ ಲಾ ಗೆ ಧಕ್ಕೆಯನ್ನುಂಟು ತರುವ ಪ್ರಯತ್ನ ನಡೆದಿದೆಯೋ ಆಗ ಇಡೀ ದೇಶದ ಮುಸ್ಲಿಮರು ಒಕ್ಕೂರಲಿನಿಂದ ಖಂಡಿಸಿದ್ದಾರೆ. ಈಗ ಮತ್ತೇ ಮುಸ್ಲಿಮರ ವೈಯಕ್ತಿಕ ಕಾನೂನಿನಲ್ಲಿ ಮೂಗು ತೂರಿಸುವ ಕೆಲಸಕ್ಕೆ ಕೆಲವರು ಕೈಹಾಕುತ್ತಿದ್ದಾರೆ ಇದನ್ನು ನಾವು ಸಹಿಸುವುದಿಲ್ಲ. ಈ ಕುರಿತು ಕಾನೂನು ಹೋರಾಟ ಮುನ್ನೆಡಯುತ್ತಿದೆ ಎಂದರು. ಸಂವಿಧಾನ ನಮಗೆ ನಮ್ಮ ಧರ್ಮದ ಮೇಲೆ ನೆಲೆನಿಲ್ಲುವ ಅದನ್ನು ಆಚರಿಸುವ ಮತ್ತು ಅದರಂತೆ ಜೀವಿಸುವ ಹಕ್ಕು ನೀಡಿದೆ. ಇಸ್ಲಾಮ್ ನಲ್ಲಿ ಯಾವುದೇ ಬದಲಾವಣೆ ತರುವುದು ಸಲ್ಲ. ನಮಗೆ ನಮ್ಮ ಜೀವಕ್ಕಿಂತ ನಮ್ಮ ಧರ್ಮ ದೊಡ್ಡದು. ಆದ್ದರಿಂದ ನಾವು ಪ್ರಾಣ ನೀಡಬಲ್ಲೇವು ಆದರೆ ಧರ್ಮದಲ್ಲಿ ಹಸ್ತಕ್ಷೇಪವನ್ನು ಸಹಿಸೇವು ಎಂದ ಮೌಲಾನ ರಾಬೇ ಧರ್ಮದ ಕುರಿತಂತೆ ಅನೇಕಾರು ತಪ್ಪುಕಲ್ಪನೆಗಳಿದ್ದು ಅದನ್ನು ದೂರಮಾಡುವ ಅಗತ್ಯವಿದೆ. ನಿಕಾ, ತಲಾಖ್ ಇದೂ ಕೂಡ ಧರ್ಮದ ಭಾಗವೇ ಆಗಿದ್ದು ಇದನ್ನು ಧಾರ್ಮಿಕ ರೀತಿಯಲ್ಲೇ ಆಚರಿಸಲಾಗುವುದು. ಯಾರಾದರೂ ಇದರಲ್ಲಿ ಬದಲಾವಣೆ ಬಯಸಿದರೆ ಅದು ಅವರ ಶುದ್ಧ ಮೂರ್ಖತನವಾದೀತು. ಬಲಪ್ರದರ್ಶನದ ಮೂಲಕ ಮನಷ್ಯನ ಹೊರರೂಪವನ್ನು ಬದಲಾಯಿಸಬಹುದು. ಆದರೆ ಆತನ ಮನಸ್ಸನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಈ ಸಂದರ್ಭಧಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಸೈಯ್ಯದ್ ಸಾದತುಲ್ಲಾ ಹುಸೇನಿ, ಮೌಲಾನ ವಾಝ್ಹೆ ರಷೀದ್ ನದ್ವಿ, ಡಾ.ವಲಿ ರಹ್ಮಾನಿ, ಡಾ.ತೌಖಿರ್ ರಝಾ, ಮುಹಮ್ಮದ್ ಖಾಲಿದ್ ಘಾಜಿಪುರಿ, ಮೌಲಾನ ಖಾಲಿದ್ ಸೈಫುಲ್ಲಾ ಸೇರಿದಂತೆ ವಿವಿಧ ವಿದ್ವಾಂಸರು ಉಪಸ್ಥಿತಿದ್ದರು.
ತಂಝೀಮ್ ಅಧ್ಯಕ್ಷ ಮುಝಮ್ಮಿಲ್ ಖಾಝಿಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಖರೂರಿ ಪ್ರಸ್ತಾವಿಕವಾಗಿ ಮಾತನಾಡಿದರು. ಮೌಲಾನ ಖ್ವಾಜಾ ಅಕ್ರಮಿ ಮದನಿ ಕಾರ್ಯಕ್ರಮ ನಿರೂಪಿಸಿದರು.