ವಿವೇಕಾನಂದರ ಹಿಂದೂ ಧರ್ಮಕ್ಕೂ, ಗೋಡ್ಸೆ ಹಿಂದೂ ಧರ್ಮಕ್ಕೂ ಅಜಗಜಾಂತರ ವ್ಯತ್ಯಾಸ -ಡಾ.ರಾಮ್ ಪುನಿಯಾನಿ

Source: S O News service | By Staff Correspondent | Published on 17th April 2017, 11:51 PM | Coastal News | State News | Interview | Don't Miss |

ವಸಂತ ದೇವಾಡಿಗ

ಭಾರತದ ಇತಿಹಾಸಕಾರರಲ್ಲಿ ಡಾ.ರಾಮ್ ಪುನಿಯಾನಿಗೆ ದೊಡ್ಡದೊಂದು ಹೆಸರಿದೆ. ಯಾವುದೇ ರಾಜಕೀಯ ಆಮಿಷ, ಭಾವನಾತ್ಮಕ ವಿಚಾರಗಳಿಗೂ ಜೋತು ಬೀಳದೇ ಕಣ್ಣೆದುರಿನ ಸತ್ಯವನ್ನು ತಾನು ಕಂಡಂತೆ ಹೇಳುವ ಛಾತಿ ಈ ರಾಮಪುನಿಯಾನಿವರಿಗಿದೆ. ಈಗಾಗಲೇ ನೂರಾರು ಪುಸ್ತಕಗಳನ್ನು ಬರೆದಿದ್ದಾರೆ. ವಿಶ್ವವಿದ್ಯಾಲಯ ಮಟ್ಟದ ಉಪನ್ಯಾಸಕರುಗಳು, ವಿದ್ಯಾರ್ಥಿಗಳು ಈಗಲೂ ರಾಮ್ ಪುನಿಯಾನಿಯವರನ್ನು ಓದಿ ಕೊಳ್ಳುತ್ತಿದ್ದಾರೆ.  ಅವರು ದಾಖಲೆ ಇಲ್ಲದೇ ಬಾಯಿ ಬೊಂಬಾಯಿ ಮಾಡಿಕೊಂಡವರಲ್ಲ. ಇತಿಹಾಸದ ಹೆಸರಿನಲ್ಲಿ ವರ್ತಮಾನದಲ್ಲಿ ನಡೆಯುತ್ತಿರುವ ಡೊಂಬರಾಟವನ್ನು ಜನರ ಮುಂದೆ ಬೆತ್ತಲೆಯಾಗಿ ನಿಲ್ಲಿಸುತ್ತಲೇ ಇರುವ ಇವರು, ದೇಶದ ಜ್ಯಾತ್ಯಾತೀಯ ಮೌಲ್ಯಗಳನ್ನು ಉಳಿಸಿಕೊಳ್ಳುವಲ್ಲಿ ಬೆವರು ಹರಿಸಿ ದುಡಿಯುತ್ತಿದ್ದಾರೆ. ಇಳಿ ವಯಸ್ಸಿನಲ್ಲಿಯೂ ಎಳೆಯ ಹುಡುಗನಂತೆ ದೇಶಾದ್ಯಂತ ಸುತ್ತುತ್ತಿದ್ದಾರೆ. ನನ್ನಂತಹ ಹುಡುಗರಿಗೆ ಓದಿನ ಹುಚ್ಚನ್ನು ಹಚ್ಚುತ್ತಿದ್ದಾರೆ. ಅವರ ಮಾತಿನ ಕೆಲ ತುಣುಕುಗಳನ್ನು ನಿಮ್ಮ ಮುಂದೆ ಇಡುವ ಪ್ರಯತ್ನವನ್ನು ನಾನಿಲ್ಲಿ ಮಾಡುತ್ತಿದ್ದೇನೆ. ಓದು, ತಲೆ ಬುಡ ಯಾವುದೂ ಇಲ್ಲದೇ ಅಂಗಡಿ ಮುಂಗಟ್ಟಿನಲ್ಲಿ ನಿಂತು ಇತರರನ್ನು ಹೀಯಾಳಿಸಿ ಸುಖ ಪಡುವ, ಕನಸುಗಳಲ್ಲಿಯೇ ತೇಲಾಡಿ ವಾಸ್ತವನ್ನು ಕಳೆದುಕೊಂಡಿರುವ, ರಾಜಕಾರಣಿಗಳ ತೆವಲಿಗೆ ಅರಿವಿಲ್ಲದೇ ಬಲಿಯಾಗುತ್ತ ವಿವೇಚನಾ ಶಕ್ತಿಯನ್ನು ಕಳೆದುಕೊಂಡ ದೇಶ, ರಾಜ್ಯ, ಜಿಲ್ಲೆ ಬಿಡಿ, ನಮ್ಮೂರಿನ ಒಂದಷ್ಟು ತಲೆಯ ಮೆದುಳುಗಳಲ್ಲಿಯಾದರೂ ಪುನಿಯಾನಿಯವರ ಮಾತು ಹೊಕ್ಕು ಒಂದಷ್ಟು ಕೆಲಸ ಮಾಡಲಿ ಎಂಬ ಆಶಯ ನನ್ನದಾಗಿದೆ.

 * ಭಾರತದಲ್ಲಿರುವ ದೇವಾಲಯಗಳ ಮೇಲೆ ಮುಸ್ಲೀಮ್ ಅರಸರು ದಾಳಿ ಮಾಡಿದ್ದು ಏಕೆ?
 ಭಾರತದಲ್ಲಿರುವ ದೇವಾಲಯಗಳ ಮೇಲೆ ಕೇವಲ ಮುಸ್ಲೀಮ್ ಅರಸರು ದಾಳಿ ಮಾಡಿಲ್ಲ. ಹಿಂದೂ ಅರಸರೂ ದಾಳಿ ಮಾಡಿದ್ದಾರೆ. ಈ ದೇಶದ ಇತಿಹಾಸದಲ್ಲಿ ನೂರಾರು ರಾಜರುಗಳು ಕಾದಾಡಿದ್ದಾರೆ. ಒಂದೆರಡು ರಾಜರುಗಳ ಹೆಸರನ್ನು ಹೇಳಿಕೊಂಡು ಈಗ ದೇಶದಲ್ಲಿ ಬೊಬ್ಬೆ ಹೊಡೆಯಲಾಗುತ್ತಿದೆ. ಅದಕ್ಕೆ ಕೆಟ್ಟ ರಾಜನೀತಿಯೇ ಕಾರಣ. ನಿಮಗೆ ಗೊತ್ತಿರಲಿ, ರಾಜರು ದೇವಾಲಯಗಳ ಮೇಲೆ ಏಕೆ ದಾಳಿ ಮಾಡುತ್ತಿದ್ದರು? ಇದನ್ನು ಮೊದಲು ಹುಡುಕಿಕೊಳ್ಳಬೇಕು. ಈ ಮೊಘಲರು ಅಥವಾ ಮುಸ್ಲೀಮರು ಭಾರತಕ್ಕೆ ಬರುವ ಮೊದಲು  ಹಿಂದೂ ರಾಜರೇ ತಮ್ಮ ತಮ್ಮೊಳಗೆ ಕಾದಾಡಿದ್ದಾರೆ. ದೇವಾಲಯಗಳನ್ನು ಉರುಳಿಸಿದ್ದಾರೆ. ಅದು ಏಕೆ ಗೊತ್ತೇ? ಗೆದ್ದ ರಾಜ ಸೋತ ರಾಜನನ್ನು ಅವಮಾನಿಸುವ ಸಲುವಾಗಿ ಆತನ ಕುಲದೇವರ ದೇವಾಲಯಗಳನ್ನು ಉರುಳಿಸಿ ತನ್ನ ಕುಲದೇವರುಗಳನ್ನು ಪ್ರತಿಷ್ಠಾಪಿಸುತ್ತಿದ್ದ. ಸೋತ ರಾಜನನ್ನು ಅವಮಾನಿಸುವ ಸಲುವಾಗಿಯೇ ಗೆದ್ದ ರಾಜರು ಹೀಗೆ ನಡೆದುಕೊಳ್ಳುತ್ತಿದ್ದರು. ನಂತರದ ಕಾಲದಲ್ಲಿಯೂ ದೇವಾಲಯಗಳ ಮೇಲೆ ದಾಳಿ ನಡೆದಿದೆ. ಅಂದಿನ ಕಾಲದಲ್ಲಿ ಸಂಪತ್ತು ಶೇಖರಣೆಯಾಗುತ್ತಿದ್ದುದು ದೇವಾಲಯಗಳಲ್ಲಿ. ಅದಕ್ಕಾಗಿಯೇ ವಿರೋಧಿ ರಾಜರುಗಳು ದೇವಾಲಯಗಳ ಮೇಲೆ ದಾಳಿ ಮಾಡುತ್ತಿದ್ದರು. ಈಗ ಹೇಳುತ್ತಿರುವಂತೆ ಹಿಂದೂ ಮುಸ್ಲೀಮ್ ಎಂಬ ಕಾರಣದಿಂದ ಅಲ್ಲ. 11ನೇ ಶತಮಾನದಲ್ಲಿ ರಾಜಾ ಹರ್ಷದೇವ ಕಾಶ್ಮೀರದ ದೇವಾಲಯದ ಮೇಲೆ ದಾಳಿ ಮಾಡುತ್ತಾನೆ. ಆತ ಹಿಂದೂ ಅಲ್ಲವೇ? ಈಗ ಶಿವಾಜಿ ಮಹಾರಾಜರನ್ನು ಹಿಂದೂ ಸಾಮ್ರಾಟ ಎಂದು ಬಿಂಬಿಸಲಾಗುತ್ತಿದೆಯಲ್ಲ, ಮರಾಠ ಯುದ್ಧ ಕಾಲದಲ್ಲಿ ಶ್ರೀರಂಗಪಟ್ಟಣದಲ್ಲಿ ದೇವಸ್ಥಾನವನ್ನು ಕೆಡುವಿ ಹಾಕಿದವರು ಯಾರು? ನಂತರ ಅದನ್ನು ಟಿಪ್ಪು ದುರಸ್ತಿ ಮಾಡಿದ. ಇಂತಹ ಉದಾಹರಣೆಗಳು ಸಾಕಷ್ಟು ಇವೆ. ಆದರೆ ಅದನ್ನು ಓದಲು, ಕೇಳಿಸಿಕೊಳ್ಳಲು ಯಾರಿಗೂ ತಾಳ್ಮೆ ಇಲ್ಲ. 

 * ಯುದ್ಧದಲ್ಲಿ ಧರ್ಮದ ಹಗೆತನ ಯಾವ ರೀತಿ ಇತ್ತು?
ಅದು ಶುದ್ಧ ಬೊಗಳೆ. ಅದು ಧರ್ಮ ಅಂತ ಈಗ ಕೂಗಿ ಕೊಳ್ಳಲಾಗುತ್ತಿದೆ. ಶಿವಾಜಿ ರಾಜನ ಸೇನಾನಿ ರುಸ್ತುಮೇ ಜಮಾಲ್. ಎದುರಾಳಿ ಅಫ್ಜಲ್ ಖಾನ್‍ನ ಸೇನಾನಿ ಕೃಷ್ಣಜಿ ಭಾಸ್ಕರ ಕುಲಕರ್ಣಿ. ಅದನ್ನು ಬಿಡಿ, ರಾಣಾಪ್ರತಾಪನ ಸೇನಾನಿ ಘಾಜಿಖಾನ್. ಅಕ್ಬರ್ ಪರ ನಿಂತು ಹೋರಾಡಿದವರು ಮಾನಸಿಂಗ್. ಎರಡೂ ಕಡೆಯವರು ಕಾದಾಡಿಕೊಂಡರಲ್ಲ, ಇದನ್ನು ಹಿಂದೂ ಮುಸ್ಲೀಮ್ ಯುದ್ಧ ಎನ್ನುತ್ತೀರಾ? ಎಷ್ಟು ಹಾಸ್ಯಾಸ್ಪದ ಎನ್ನಿಸುತ್ತದೆ ಅಲ್ಲವೇ? ರಾಜರ ಮಧ್ಯೆ ಯುದ್ಧ ನಡೆಯುತ್ತಿದ್ದುದು ಅಧಿಕಾರ, ಸಂಪತ್ತಿನ ಕಾರಣಕ್ಕೆ ಹೊರತೂ ಧರ್ಮದ ಕಾರಣಕ್ಕಲ್ಲ. ಆ ಅಲ್ಪ ಬುದ್ದಿ ಮೊದಲು ತಲೆಯಿಂದ ಹೋಗಬೇಕು. 

* ಅಯೋಧ್ಯಾದಲ್ಲಿ ರಾಮ ಮಂದಿರವನ್ನು ಕೆಡುಹಿ ಬಾಬರ ಮಸೀದಿ ನಿರ್ಮಿಸಿದ್ದನೇ?
 ಇನ್ನೊಬ್ಬರ ಆಸ್ತಿ, ಕಟ್ಟಡವನ್ನು ಕೆಡುಹಿ ಮಸೀದಿ ನಿರ್ಮಿಸಿದರೆ ಒಬ್ಬನೇ ಒಬ್ಬ ಮುಸ್ಲೀಮನ ಮಾನ್ಯತೆಯೂ ಸಿಗುವುದಿಲ್ಲ. ಅಂತಹ ನೆಲದ ಮೇಲೆ ಪ್ರಾರ್ಥನೆ ಸಲ್ಲಿಸಿದರೆ ಅದಕ್ಕೆ ಇಸ್ಲಾಮ್‍ನಲ್ಲಿ ಬೆಲೆ ಇಲ್ಲ. ಅದಿರಲಿ, ಅಯೋಧ್ಯಾದಲ್ಲಿ ರಾಮ ಮಂದಿರ ಕೆಡುಹಿ ಮಸೀದಿ ನಿರ್ಮಿಸಲಾಗಿದೆ ಎಂದು ಹೇಳಿದವರು ಯಾರು ಗೊತ್ತೇ? ಬ್ರೀಟಿಷರು. ಹಿಂದೂ, ಮುಸ್ಲೀಮರನ್ನು ಒಡೆದು ಆಳುವ ಪ್ರಯತ್ನ ಇದು. ನಿಮಗೆ ಗೊತ್ತಿರಲಿ ರಾಮ ಮಂದಿರವನ್ನು ಕೆಡುಹಿ ಮಸೀದಿ ನಿರ್ಮಿಸಲಾಗಿದೆ ಎಂಬುದಕ್ಕೆ ಎಲ್ಲಿಯೂ ದಾಖಲೆ ಇಲ್ಲ. ಬ್ರೀಟೀಷ್ ಲೇಖಕ ಎ.ಎಫ್.ಬಿವರೇಜ್ ತನ್ನ ಕೃತಿಯಲ್ಲಿ ಕೆಳಗಡೆ ಒಂದು ನೋಟ್ ಎಂದು ಬರೆದು ಅಯೋಧ್ಯಾದಲ್ಲಿ ಮಂದಿರವನ್ನು ಕೆಡುಹಿ ಮಸೀದಿ ನಿರ್ಮಿಸಿರಬಹುದು ಎಂದು ಊಹೆ ವ್ಯಕ್ತಪಡಿಸಿದ್ದಾನೆ. ಆತನ ಕುತಂತ್ರ ಅರ್ಥವಾಗಬಹುದು. ಅದನ್ನೇ ಹಿಡಿದುಕೊಂಡು ಇಂದಿನವರೆಗೂ ಜಗ್ಗಾಡಲಾಗುತ್ತಿದೆ. 

 * ಜಗತ್ತಿನಾದ್ಯಂತ ಇಸ್ಲಾಮ್ ಭಯೋತ್ಪಾದನೆ ಸುದ್ದಿಯಾಗುತ್ತಿದೆ?
ಅದು ಅಮೇರಿಕಾದ ಷಡ್ಯಂತ್ರ. ಪಶ್ಚಿಮ ಏಷ್ಯಾ ದೇಶಗಳಲ್ಲಿನ ತೈಲ ಸಂಪತ್ತಿನ ಮೇಲೆ ಕಣ್ಣಿಟ್ಟು ಅಮೇರಿಕಾ ಆಲ್‍ಕೈದಾವನ್ನು ಹುಟ್ಟು ಹಾಕಿತು. ಇಸ್ಲಾಮ್ ಭಯೋತ್ಪಾದನೆ ಎಂಬ ಪದ ತನ್ನಿಂದ ತಾನೆ ಹುಟ್ಟಿದ್ದಲ್ಲ. ಅದು ಕೃತಕ ಸೃಷ್ಟಿ. ಮುಸ್ಲೀಮ್‍ರು ಇರುವ ದೇಶಗಳಲ್ಲಿಯೇ ಭಯೋತ್ಪಾದನೆ ನಡೆದು ಮುಸ್ಲೀಮರೇ ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ. ಏಷ್ಯದ ಮದರಸಾಗಳಲ್ಲಿನ ಹುಡುಗರ ತಲೆಯಲ್ಲಿ ಕೆಟ್ಟ ವಿಷಯಗಳನ್ನು ತುಂಬಿ ಜಿಹಾದ್ ಹೆಸರಿನಲ್ಲಿ ಯುದ್ಧಕ್ಕೆ ಪ್ರಚೋದನೆ ನೀಡಲಾಗುತ್ತಿದೆ. ಇಸ್ಲಾಮ್‍ನಲ್ಲಿರುವ ಜಿಹಾದ್‍ಗೆ ಸ್ಪಷ್ಟ ಅರ್ಥವಿದೆ. ತನ್ನೊಳಗಿನ ಕೆಡುಕು ಹಾಗೂ ಲೋಕದ ಕೆಡುಕಿನ ವಿರುದ್ಧ ಹೋರಾಡುವುದು. ಮುನುಷ್ಯತ್ವದ ವಿರುದ್ಧ ಅಲ್ಲ. 

 * ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಪ್ರಯತ್ನದ ಬಗ್ಗೆ?
ಬಾಬರಿ ಮಸೀದಿ ಧ್ವಂಸದೊಂದಿಗೆ ಭಾರತ ಸಂವಿಧಾನವನ್ನು ನಾಶ ಮಾಡುವ ಪ್ರಯತ್ನ ಆರಂಭವಾಗಿದೆ. ಹಿಂದೂ ಧರ್ಮ ಪುರಾತನ ಧರ್ಮ ಎಂದು ಬಣ್ಣದ ಭಾಷಣ, ಉಪನ್ಯಾಸ ನಡೆಯುತ್ತಿದೆ. ಪುರಾತನ ಎಂದರೆ ಯಾವಾಗ ಎಂದು ಹೇಳಲಿ? ವೇದ ಕಾಲದಲ್ಲಿಯೂ ಹಿಂದೂ ಎನ್ನುವ ಪದ ಇಲ್ಲ. ಸಿಂಧೂ ನದಿಯ ದಂಡೆಯ ಮೇಲೆ ಇದ್ದವರನ್ನು ಪಶ್ಚಿಮ ಏಷ್ಯಾದ ಜನರು ಹಿಂದೂ ಎಂದು ಕರೆದರು. ಏಕೆಂದರೆ ಇರಾನ್ ಮತ್ತಿತರ ಪಶ್ಚಿಮ ಏಷ್ಯಾದ ಜನರು `ಸ' `ಶ' ಉಚ್ಛಾರ ಮಾಡೋದಿಲ್ಲ. ಅವರು `ಸ' ಬದಲಾಗಿ `ಹ' ಉಚ್ಛಾರ ಮಾಡುತ್ತಾರೆ. ಅದಕ್ಕಾಗಿ ಸಿಂಧೂ ಹಿಂದೂ ಆಯಿತು. ಅದನ್ನು ಬಿಡಿ, ಹಿಂದೂ ಸಂಸ್ಕøತಿ ಎಂದರೆ ಯಾವುದು ಎಂದು ಹೇಳಲಿ. ಮಹಾತ್ಮಾ ಗಾಂಧಿ, ಸ್ವಾಮಿ ವಿವೇಕಾನಂದರು ಹೇಳುವ ಹಿಂದೂ ಧರ್ಮಕ್ಕೂ, ನಾಥೋರಾಮ್ ಗೋಡ್ಸೆ ಹೇಳುವ ಹಿಂದೂ ಧರ್ಮಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಮಹ್ಮದ್ ಅಲಿ ಜಿನ್ನಾನಂತವರು ಮುಸ್ಲೀಮರಿಗಾಗಿ ಪಾಕಿಸ್ತಾನ ಎಂದ ಕೂಡಲೇ, ಇತ್ತ ಹಿಂದೂಗಾಗಿ ಭಾರತ ಎಂಬ ಯೋಚನೆ ಜಾಗೃತವಾಗಿ ಇಲ್ಲಿಯವರೆಗೆ ಬಂದಿದೆ. ವಿಚಾರ ಏನಪ್ಪಾ ಅಂದರೆ ಅವರು, ಇವರೂ ಎಲ್ಲರೂ ಬ್ರಿಟೀಷರ ಜೊತೆ ಒಳ ಒಪ್ಪಂದ ಮಾಡಿಕೊಂಡು ಸುಖದ ಜೀವನ ಸವಿದವರು. ಸ್ವಾತಂತ್ರ್ಯ ಹೋರಾಟ ಮಾಡಿದವರಲ್ಲ. ಇವರಿಗೆ ಸ್ವಾತಂತ್ರ್ಯ, ಜ್ಯಾತ್ಯಾತೀತ ಮೌಲ್ಯಗಳ ಅರಿವಿಲ್ಲ.

Read These Next

ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗುತ್ತಿರುವ ಸತೀಶ್ ಆಚಾರ್ಯ ಅವರ “ಏಕ್ ಹೈ ತೊ ಸೈಫ್ ಹೈ”  ಅದ್ಭುತ ಕಾರ್ಟೂನ್

ಭಟ್ಕಳ: ಹಿಂದೂ ಮತಗಳನ್ನು ಕ್ರೂಢಿಕರಿಸಲು ಉತ್ತರಪ್ರದೇಶದ ಸಿ.ಎಂ. ಯೋಗಿ ಆಧಿತ್ಯನಾತ್ ನೀಡಿದ ಏಕ್ ಹೈ ತೋ ಸೇಫ್ ಹೈ” ರಾಜಕೀಯ ...

ಸಿ.ಎ.ಖಲೀಲ್ ಸಾಹೇಬರ ನಿಧನಕ್ಕೆ ಭಟ್ಕಳದ ಐದು ಕೇಂದ್ರಿಯ ಸಂಘಟನೆಗಳಿಂದ ಜಂಟಿ ಸಂತಾಪ ಸಭೆ

ಭಟ್ಕಳ: ಇಫ್ತಿಖಾರ್-ಇ-ಖೌಮ್ ಬಿರುದಾಂಕಿತ, ಪ್ರಸಿದ್ಧ ಉದ್ಯಮಿ ಮತ್ತು ಸಮಾಜ ಸೇವಕ ಸೈಯ್ಯದ್ ಖಲೀಲರ‍್ರಹ್ಮಾನ್ (ಸಿ.ಎ. ಖಲೀಲ್) ಅವರ ...

ಮೂರು ಕ್ಷೇತ್ರಗಳಲ್ಲಿ ಜಯಭೇರಿ: ಭಟ್ಕಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಭಟ್ಕಳ: ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮೂರು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದು, ಭಟ್ಕಳದಲ್ಲಿ ...

ರಾಜ್ಯದ ಮೂರೂ ಕ್ಷೇತ್ರಗಳು ಕೈವಶ; ಉಪಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ ಎನ್‌ಡಿಎ

ರಾಜ್ಯದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆಗೆ ಕಾರಣವಾಗಿದ್ದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ...

ನ.21 ರಿಂದ ಮುರ್ಡೇಶ್ವರದಲ್ಲಿ ಮತ್ಸ ಮೇಳ; ಪ್ರಥಮ ಬಾರಿಗೆ ಉತ್ತರಕನ್ನಡದಲ್ಲಿ ಆಯೋಜನೆ; ಮೂರು ದಿನಗಳ ಕಾಲ ಮೀನು ಖಾದ್ಯ ಪ್ರಿಯರಿಗೆ ಹಬ್ಬ

ಉತ್ತರಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿಶ್ವ ಮೀನುಗಾರಿಕಾ ದಿನಾಚರಣೆಯ ಅಂಗವಾಗಿ ನ.21ರಿಂದ ನ.23ರವರೆಗೆ ...

ಶಿಗ್ಗಾಂವಿ: ಬ್ಯಾಲೆಟ್ ಬಾಕ್ಸ್‌ ಗಳು ಚರಂಡಿಯಲ್ಲಿ ಪತ್ತೆ; ಉಪಚುನಾವಣೆ ಮುಗಿದ ಮರುದಿನವೇ ನಡೆದ ಘಟನೆ

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಜಿಲ್ಲೆಯ ಯತ್ತಿನಹಳ್ಳಿ ಗ್ರಾಮದ ಬಳಿಯ ...

ರಾಜ್ಯ ವಿಧಾನಸಭಾ ಚುನಾವಣೆ: ಮತದಾರರ ಪಟ್ಟಿಯಿಂದ ಶೇ.20ರಷ್ಟು ಮುಸ್ಲಿಮರ ಹೆಸರು ನಾಪತ್ತೆ!

ಅಬುಸಲೇಹ್ ಶರೀಫ್ ಭಾರತದಲ್ಲಿ ಮುಸ್ಲಿಂ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಅಧ್ಯಯನ ನಡೆಸಲು 2005ರಲ್ಲಿ ...

ಕೈಗೆ ರಕ್ತದ ಕಲೆಯೂ ಆಗಿಲ್ಲ, ಕತ್ತಿ ರಕ್ತದಿಂದ ತೊಯ್ದೂ ಇಲ್ಲ… ಈ ಅಪಾಯಕಾರಿ ರಾಜಕಾರಣದ ಕುತಂತ್ರವನ್ನು ಅರಿತು ಮತದಾರರು ಮತ ಚಲಾಯಿಸಬೇಕು..

ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಮುಹಮ್ಮದ್ ಅತ್ಹರುಲ್ಲಾ ಶರೀಫ್ ಅವರೊಂದಿಗೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ...

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ಉಚಿತ ವೈದ್ಯಕೀಯ ಶಿಬಿರ

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ...