ಪೈಗಂಬರ್ ಹಜ್ರತ್ ಮುಹಮ್ಮದ್ (ಸ.) ವಿರುದ್ಧ ನಿಂದನೆಯ ಆರೋಪ
-
ತಂಝೀಮ್ ನೇತೃತ್ವದಲ್ಲಿ ವಿವಿಧ ಸಂಘಸಂಸ್ಥೆಗಳಿಂದ ಅ.15 ರಂದು ಭಟ್ಕಳ ಬಂದ್ ಕರೆ
ಭಟ್ಕಳ: ಯತಿ ನರಸಿಂಹಾನಂದ್ ಎಂಬಾತನಿಂದ ಹಜ್ರತ್ ಮುಹಮ್ಮದ್ ಮುಸ್ತಫಾ (ಸ.) ಅವರ ವಿರುದ್ಧ ನೀಡಲಾದ ಅವಮಾನಕರ ಹೇಳಿಕೆ ಬಗ್ಗೆ ಭಟ್ಕಳದ ರಾಜಕೀಯ ಮತ್ತು ಸಮಾಜಿಕ ಸಂಸ್ಥೆ ಮಜ್ಲಿಸ್ ಇಸ್ಲಾಹ್ ವ ತಂಝೀಮ್ ತನ್ನ ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದು, ಅ.14 ಸೋಮವಾರದಂದು ಸಹಾಯಕ ಆಯುಕ್ತರ ಮೂಲಕ ಭಾರತದ ಮುಖ್ಯ ನ್ಯಾಯಮೂರ್ತಿಯವರಿಗೆ ಮನವಿ ಸಲ್ಲಿಸಲು ಹಾಗೂ ಅ.15 ಮಂಗಳವಾರದಂದು ಭಟ್ಕಳ ಬಂದ್ ಗೆ ಕರೆ ನೀಡಿದೆ.
ಹಿಂದಿನ ಕೆಲವು ದಿನಗಳಿಂದ ಸಂಘಟನೆಯ ಹಿರಿಯರು, ವಿವಿಧ ಸಂಸ್ಥೆಗಳ ಮತ್ತು ಫೆಡರೇಶನ್‌ಗಳ ಪ್ರಮುಖರು, ಹಾಗೂ ಕ್ರೀಡಾ ಕೇಂದ್ರಗಳ ಪ್ರತಿನಿಧಿಗಳ ಜೊತೆ ನಡೆದ ಸಭೆಗಳಲ್ಲಿ ಈ ನಿರ್ಣಯಕ್ಕೆ ಬಂದಿದ್ದು, ಸೋಮವಾರದಂದು ಭಟ್ಕಳ ಪೊಲೀಸ್ ಠಾಣೆಗೆ ನಿಯೋಗ ತೆರಳಿ ಯತಿ ನರಸಿಂಹಾನಂದ್ ವಿರುದ್ಧ FIR ದಾಖಲಿಸಲಿದ್ದಾರೆ. ಅದೇ ಸಂಜೆ ಮಿನಿ ವಿಧಾನಸೌಧದ ಹೊರಗೆ ಪ್ರತಿಭಟನೆ ನಡೆಸಿ, ಸಹಾಯಕ ಆಯುಕ್ತರ ಮೂಲಕ ಮುಖ್ಯ ನ್ಯಾಯಮೂರ್ತಿಗೆ ಮನವಿ ಸಲ್ಲಿಸಲಾಗುತ್ತದೆ. ಸಾರ್ವಜನಿಕರು ಸಾಯಂಕಾಲ 4:30 ಕ್ಕೆ ಮಿನಿ ವಿಧಾನಸೌಧದ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆ ವಿನಂತಿಸಲಾಗಿದೆ.
ಅ.15 ಮಂಗಳವಾರ ಭಟ್ಕಳ ಬಂದ್ ಗೆ ಕರೆ ನೀಡಲಾಗಿದ್ದು ಎಲ್ಲಾ ಅಂಗಡಿಗಳು, ವ್ಯಾಪಾರ, ಕಚೇರಿಗಳು, ಶಾಲೆ ಕಾಲೇಜುಗಳು, ಧಾರ್ಮಿಕ ಶಿಕ್ಷಣ ಕೇಂದ್ರಗಳು, ಆಟೋ, ಟ್ಯಾಂಪೊ, ಹೋಟೆಲ್‌ಗಳು ಹಾಗೂ ಕಟ್ಟಡ ಕಾಮಗಾರಿ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಮಾಂಸ, ಮೀನು, ಹಾಲು, ತರಕಾರಿ, ಹಣ್ಣುಗಳ ಖರೀದಿ-ಮಾರಾಟ ಕೂಡ ಬಂದ್‌ನ ವ್ಯಾಪ್ತಿಗೆ ಒಳಪಡಲಿದೆ. ಸಾರ್ವಜನಿಕರು ಈ ಬಂದ್‌ನಲ್ಲಿ ಭಾಗವಹಿಸಿ ಪ್ರವಾದಿ ಮುಹಮ್ಮದ್ ಪೈಗಂಬರರ ವಿರುದ್ಧ ಮಾಡುತ್ತಿರುವ ಅವಮಾನವನ್ನು ಖಂಡಿಸುವಂತೆ ವಿನಂತಿ ಮಾಡಲಾಗಿದೆ.
ಈ ಬಂದ್ ಅನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಸಹಕರಿಸಬೇಕೆಂದು ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಘಟನೆಯು ತನ್ನ ಪ್ರಕಟಣೆಯಲ್ಲಿ ಮನವಿ ಮಾಡಿದೆ.