ಶೋಕಸಾಗರದಲ್ಲಿ ಮುಳುಗಿದ ಭಟ್ಕಳ, ಗಣ್ಯರಿಂದ ಸಂತಾಪ
ಭಟ್ಕಳ: ಖಾಯಿದ್-ಇ- ಖೌಮ್ (ಸಾಮುದಾಯಿಕ ನಾಯಕ) ಎಂಬ ಬಿರುದು ಹೊಂದಿದ ಭಟ್ಕಳದ ಪ್ರಪ್ರಥಮ ಚಾರ್ಟೆಡ್ ಅಕೌಂಟೆಂಟ್ ಅಂಜುಮನ್ ಹಾಮಿಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಗಳ ಮಾಜಿ ಅಧ್ಯಕ್ಷ ಸಾಮಾಜಿಕ ಧುರಿಣ ಡಾ.ಸೈಯ್ಯದ್ ಖಲೀಲುರ್ರಹ್ಮಾನ್ ಎಸ್.ಎಮ್. ಗುರುವಾರ ಬೆಳಗಿನ ಜಾವ ದುಬೈ ಆಸ್ಪತ್ರೆಯೊಂದರಲ್ಲಿ ನಿಧನರಾದರು. ತಮ್ಮ ಜೀವನದ 86 ವರ್ಷ ಪೂರೈಸಿದ್ದ ಅವರು 'ಸಿ.ಎ. ಖಲೀಲ್' ಎಂಬ ಹೆಸರಿನಲ್ಲಿ ಖ್ಯಾತರಾಗಿದ್ದರು.
ಮಂಗಳವಾರ ಪಾದಗಳಲ್ಲಿ ತೀವ್ರ ದೌರ್ಬಲ್ಯದ ಸಮಸ್ಯೆಯಿಂದ ದುಬೈನ ಮಂಕೋಲ್ ಎಸ್ಟರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಖಲೀಲ್ ಸಾಹೇಬ್ ಅವರು ಚಿಕಿತ್ಸೆ ಪಡೆಯುತ್ತಿರುವ ವೇಳೆ ಬುದವಾರ ರಾತ್ರಿ ಸುಮಾರು 12 ಗಂಟೆಗೆ ಹೃದಯಾಘಾತಕ್ಕೊಳಗಾದರು. ತಕ್ಷಣ ಅವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಲಾಯಿತಾದರೂ, ಎಲ್ಲ ಪ್ರಯತ್ನಗಳ ನಡುವೆಯೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಅವರು ಗುರುವಾರ ಮುಂಜಾವಿನ ಸಮಯ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಖಲೀಲ್ ಸಾಹೇಬ್ ಅವರ ನಿಧನದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದು, ದೀರ್ಘ ಕಾಲದ ಸೇವೆ ಹಾಗೂ ಅವರ ಕೊಡುಗೆಯ ಕುರಿತು ಶ್ಲಾಘನೆಯ ಸಂದೇಶಗಳು ಹರಿಯತೊಡಗಿದವು. ನೂರಾರು ಮಂದಿ ತಮ್ಮ ವಾಟ್ಸಾಪ್ ಸ್ಟೇಟಸ್ ನಲ್ಲಿ ಸಂತಾಪ ಸಂದೇಶಗಳನ್ನು ಹಂಚಿಕೊಂಡರು. ನವಾಯತ್ ಸಮುದಾಯದ ಈ ಮಹಾನ್ ನಾಯಕನ ಅಗಲಿಕೆಯ ಸುದ್ದಿ ಭಟ್ಕಳ ನಗರವನ್ನು ಶೋಕಸಮುದ್ರದಲ್ಲಿ ಮುಳುಗಿಸಿದ್ದು, ಎಲ್ಲೆಡೆ ಸೂತಕದ ವಾತವರಣ ಮನೆಮಾಡಿದೆ.
ಅಂಜುಮನ್ ಹಾಮೀ-ಎ-ಮುಸ್ಲಿಮೀನ್ ಸಂಸ್ಥೆಯ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿರುವ ಖಲೀಲ್ ಸಾಹೇಬ್ ಅವರು, ಸಂಸ್ಥೆಯ ಶಿಕ್ಷಣ ಕ್ಷೇತ್ರವನ್ನು ಯಶಸ್ಸಿನ ಮೆಟ್ಟಿಲುಗಳತ್ತ ತೆಗೆದುಕೊಂಡು ಹೋಗಿದ್ದು ಶ್ರೇಷ್ಠ ಸೇವೆ ಸಲ್ಲಿಸಿದ್ದರು. ಭಟ್ಕಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ಶಾಲೆಗಳು ಹಾಗೂ ಕಾಲೇಜುಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರ ಸೇವೆಗೆ ಗೌರವ ಸೂಚಿಸಿ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಎಲ್ಲಾ ಶಾಲಾ ಕಾಲೇಜುಗಳು ಸೇರಿದಂತೆ ಜಾಮಿಆ ಇಸ್ಲಾಮಿಯ ನ್ಯೂ ಶಮ್ಸ್ ಸ್ಕೂಲ್, ಶಮ್ಸ್ ಪಿಯು ಕಾಲೇಜ್, ನೌನಿಹಾಲ್ ಸೆಂಟ್ರಲ್ ಶಾಲೆ, ಅಲಿ ಪಬ್ಲಿಕ್ ಶಾಲೆ, ಮದ್ರಸ ಇಸ್ಲಾಹ್ ಅಲ್-ಬನಾತ್ ಮತ್ತು ಕುಮಟಾ ದ ಐಡಿಯಲ್ ಇಂಗ್ಲಿಷ್ ಮೀಡಿಯಂ ಶಾಲೆಗಳಿಗೆ ಗುರುವಾರ ರಜೆಯನ್ನು ನೀಡಲಾಗಿದೆ.
ಖಲೀಲ್ ಸಾಹೇಬ್ ಅವರ ನಿಧನದ ಸುದ್ದಿ ಕೇಳಿದ ತಕ್ಷಣ, ಪ್ರಮುಖ ಸಾಮಾಜಿಕ ಮತ್ತು ರಾಜಕೀಯ ಸಂಸ್ಥೆಯಾಗಿರುವ ಭಟ್ಕಳ ಮಜ್ಲಿಸ್ ಇಸ್ಲಾಹ್-ಓ-ತಂಝೀಮ್ ಗುರುವಾರ ಬೆಳಗ್ಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಕಾರಿ ಸಮಿತಿ ಸಭೆಯನ್ನು ರದ್ದುಗೊಳಿಸಿದೆ. ನಾಳೆ ಶುಕ್ರವಾರ, ಇಶಾ ಪ್ರಾರ್ಥನೆಯ (ನಮಾಝ್) ನಂತರ ಜಾಮಿಯಾ ಮಸೀದಿಯಲ್ಲಿ ನಗರದ ಪ್ರಮುಖ ಐದು ಜಮಾಅತ್ ಗಳ ವತಿಯಿಂದ ಸಾಂತ್ವನ ಸಭೆ ಆಯೋಜಿಸಲಾಗಿದೆ.
ಪ್ರಸ್ತುತ, ಖಲೀಲ್ ಸಾಹೇಬ್ ಅವರ ಪಾರ್ಥಿವ ಶರೀರ ದುಬೈನ ಎಸ್ಟರ್ ಆಸ್ಪತ್ರೆಯಲ್ಲಿದ್ದು, ಕಾನೂನು ಸಂಬಂಧಿತ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಕುಟುಂಬದವರಿಗೆ ಹಸ್ತಾಂತರಿಸಲಾಗುತ್ತದೆ. ದುಬೈಯಲ್ಲಿ ಗುರುವಾರ ಸಂಜೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ತಿಳಿದುಬಂದಿದೆ.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಅಂಜುಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಯುನೂಸ್ ಕಾಜಿಯಾ, ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಪುರಸಭಾ ಅಧ್ಯಕ್ಷ ಮುಹಿದ್ದೀನ್ ಅಲ್ತಾಫ್ ಖರೂರಿ, ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಕಾಝಿ ಮೌಲಾನಾ ಅಬ್ದುಲ್ ರಬ್ ನದ್ವಿ, ಮರ್ಕಝಿ ಖಲಿಫಾ ಜಮಾಅತ್ ಪ್ರಧನ ಕಾಝೀ ಮೌಲಾನಾ ಕ್ವಾಜಾ ಮುಹಿದ್ದೀನ್ ಅಕ್ರಮಿ ನದ್ವಿ, ಜಾಮಿಯ ಇಸ್ಲಾಮಿಯ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಮೌಲಾನಾ ಮಕ್ಬೂಲ್ ಆಹ್ಮದ್ ಕೋಬಟ್ಟೆ ನದ್ವಿ, ಅಲಿಮಿಯಾ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಮುಹಮ್ಮದ್ ಇಲಿಯಾಸ್ ನದ್ವಿ, ಭಟ್ಕಳ ಯುತ್ ಫೆಡರೇಶನ್ ಅಧ್ಯಕ್ಷ ಮೌಲಾನಾ ವಸಿಯುಲ್ಲಾಹ್ ಡಿ.ಎಫ್, ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನಾ ಸೈಯ್ಯದ್ ಝುಬೇರ್, ಸದ್ಭಾವನಾ ಮಂಚ್ ಅಧ್ಯಕ್ಷ ಸತೀಶಕುಮಾರ್ ನಾಯ್ಕ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ ಸೇರಿದಂತೆ ಹಲವು ಗಣ್ಯರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.