ನ.21 ರಿಂದ ಮುರ್ಡೇಶ್ವರದಲ್ಲಿ ಮತ್ಸ ಮೇಳ; ಪ್ರಥಮ ಬಾರಿಗೆ ಉತ್ತರಕನ್ನಡದಲ್ಲಿ ಆಯೋಜನೆ; ಮೂರು ದಿನಗಳ ಕಾಲ ಮೀನು ಖಾದ್ಯ ಪ್ರಿಯರಿಗೆ ಹಬ್ಬ
ಭಟ್ಕಳ: ಉತ್ತರಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿಶ್ವ ಮೀನುಗಾರಿಕಾ ದಿನಾಚರಣೆಯ ಅಂಗವಾಗಿ ನ.21ರಿಂದ ನ.23ರವರೆಗೆ ಪ್ರವಾಸಿ ತಾಣ ಮುರುಡೇಶ್ವರದಲ್ಲಿ ಇರುವ ಆರೆನ್ನೆಸ್ ಗಾಲ್ಫ್ ರೆಸಾರ್ಟನಲ್ಲಿ ಮತ್ಸಮೇಳವನ್ನು ಆಯೋಜಿಸಲಾಗುತ್ತಿದೆ ಎಂದು ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದರು.
ಮಂಗಳವಾರ ಮಧ್ಯಾಹ್ನ ಮುರುಡೇಶ್ವರ ಆರೆನ್ನೆಸ್ ಗಾಲ್ಫ್ ರೆಸಾರ್ಟನಲ್ಲಿ ಪತ್ರಿಕಾಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿದರು. ಸಮುದ್ರ 'ಹಾಗೂ ಒಳನಾಡು ಮೀನುಗಾರಿಕೆಯಲ್ಲಿ ತೊಡಗಿಕೊಂಡಿರುವ ಮೀನುಗಾರರನ್ನು ಒಗ್ಗೂಡಿಸಿಕೊಂಡು ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.
ರಾಜ್ಯದ ಬೇರೆ ಬೇರೆ ಕಡೆಗಳಿಂದ 5 ಲಕ್ಷ ಜನರು ಈ ಮೂರು ದಿನಗಳ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ವಿವಿಧ ಸ್ಟಾಲ್‌ಗಳನ್ನು ಹಾಕಲಾಗುತ್ತಿದ್ದು, ಅಲ್ಲಿಯೂ ಕೂಡಾ ವಿವಿಧ ಬಗೆಯ ಮೀನು ಖಾದ್ಯ ಲಭ್ಯವಿರುತ್ತದೆ. ಅಲ್ಲದೇ ಬಂದವರಿಗೆ ಊಟದ ವ್ಯವಸ್ಥೆ ಕೂಡಾ ಮಾಡಲಾಗಿದೆ ಎಂದರು.
ಕರಾವಳಿ ಜಿಲ್ಲೆಗಳಾದ ಉಡುಪಿ, ಮಂಗಳೂರು, ಮತ್ತು ಉತ್ತರ ಕನ್ನಡ ಮೀನುಗಾರಿಕೆಯಲ್ಲಿ ಎಷ್ಟೊಂದು ಮುನ್ನಡೆ ಸಾಧಿಸಿದ್ದವೋ, ಅಷ್ಟೇ ಮಟ್ಟಿಗೆ ಒಳನಾಡಿನ ಮೀನುಗಾರರೂ ತಮ್ಮನ್ನು ಸ್ಥಾಪಿಸಿದ್ದಾರೆ ಎಂದು ಹೇಳಿದರು. ಒಂದು ಹಂತದಲ್ಲಿ ಕರಾವಳಿ ಹಾಗೂ ಒಳನಾಡು ಮೀನುಗಾರಿಗೆ ಸರಿಸಮನಾಗಿದೆ ಎಂದ ಸಚಿವರು ಇದು ಮೀನುಗಾರರಿಗೆ ಮತ್ತು ನಾಗರಿಕರಿಗೆ ಹಬ್ಬದ ಕಾರ್ಯಕ್ರಮವಾಗಿದೆ.
ಕಳೆದ ಹತ್ತು ವರ್ಷಗಳಿಂದ ಬೆಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ನಡೆಯುತ್ತಿರುವ ವಿಶ್ವ ಮೀನುಗಾರಿಕಾ ದಿನಾಚರಣೆ ಈ ಬಾರಿ ಮೀನುಗಾರರ ಸಮುದಾಯದ ಮಧ್ಯೆ ನಡೆಯುತ್ತಿರುವುದು ವಿಶೇಷವಾಗಿದೆ ಎಂದೂ ಹೇಳಿದರು.
ನ.21, 22 ಹಾಗೂ 23 ರಂದು ವಿವಿಧ ಗೋಷ್ಠಿಗಳನ್ನು ಆಯೋಜಿಲಾಗಿದ್ದು, ಮೀನುಗಾರಿಕೆಯಲ್ಲಿ ಮೀನು ಸಂಸ್ಮರಣೆಯಲ್ಲಿ ಮೀನು ಸಾಕಾಣಿಕೆಯಲ್ಲಿ ಮೀನು ಖಾದ್ಯ ತಯಾರಿಕೆ ಸೇರಿದಂತೆ ವಿವಿಧ ಪರಿಣಿತರು ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ ಎಂದು ಮಂಕಾಳ ವೈದ್ಯ ಹೇಳಿದರು.
ಈ ಮೇಳವನ್ನು ಕೇವಲ ಆಕರ್ಷಣೆಯಿಗಾಗಿ ಮಾತ್ರ ಆಯೋಜಿಸಿಲ್ಲ. ವಿವಿಧ ತಳಿಯ ಮೀನಿನ ಸಂತತಿ, 500 ವಿಧದ ಜಲಚರ ಜೀವಿಗಳ ಪ್ರದರ್ಶನ ನಡೆಯಲಿದೆ. ರಾಜ್ಯದಲ್ಲಿ ಕೆಲವು ಮೀನುಗಾರರು ವಿಭಿನ್ನ ರೀತಿಯಲ್ಲಿ ಮನೆಯ ಆಸುಪಾಸಿನ ಪರಿಸರದಲ್ಲಿ ವಿಭಿನ್ನ ರೀತಿಯಲ್ಲಿ ಮೀನುಗಾರಿಕೆಯನ್ನು ನಡೆಸಿಕೊಂಡು ಜೀವನ ಸಾಗಿಸುತ್ತಿದ್ದು, ಅವೆಲ್ಲವನ್ನೂ ಸಾಮಾನ್ಯ ಜನರಿಗೆ ಪರಿಚಯಿಸಲಾಗುವುದು. ಮತ್ಸಮೇಳದಲ್ಲಿ 60 ವಿವಿಧ ಮಳಿಗೆಗಳು, ಖಾಸಗಿ ಕೈಗಾರಿಕೆಗಳು, ಅಕ್ವಾರಿಸ್ಟ್‌ಗಳು, ಮೀನು ಕೃಷಿಗೆ ಅಗತ್ಯ ಇರುವ ಪರಿಕರಗಳ ವಿತರಕರು ತಮ್ಮ ಉತ್ಪನ್ನಗಳು ಮತ್ತು ಚಟುವಟಿಕೆಗಳನ್ನು ಪ್ರದರ್ಶಿಸಲಿದ್ದಾರೆ.
ಈ ಮೇಳದಲ್ಲಿ ಸುರಂಗ ಅಕ್ಟೇರಿಯಮ್ ಮತ್ತು ಅಲಂಕಾರಿಕ ಮೀನುಗಳ ಪ್ರದರ್ಶನವೂ ನಡೆಯಲಿದೆ. ಕಾರ್ಯಕ್ರಮದ ಭಾಗವಾಗಿ ವಿವಿಧ ತಾಂತ್ರಿಕ ವಿಚಾರಧಾರೆಗಳ ಗೋಷ್ಠಿಗಳನ್ನು ಆಯೋಜಿಸಲಾಗಿದ್ದು, ಅಲ್ಲಿ ತಜ್ಞರು ಇತ್ತೀಚಿನ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಬಗ್ಗೆ ಚರ್ಚಿಸಲಿದ್ದಾರೆ. ಪ್ರಗತಿಪರ ರೈತರು ತಮ್ಮ ಯಶಸ್ಸಿನ ಯಶೋಗಾಥೆಗಳನ್ನು ಹಂಚಿಕೊಳ್ಳಲಿದ್ದಾರೆ.
ನಾಡಿನ ಖ್ಯಾತ ಕಲಾವಿದರಾದ ಅರ್ಜುನ ಜನ್ಯ, ನಿರೂಪಕಿ ಅನುಶ್ರೀ, ದಿವ್ಯಾ ರಾಮಚಂದ್ರ, ಸುಮಿತ್ರ ಮಲ್ನಾಡ್, ಭಟ್ಕಳದ ಪ್ರಸಿದ್ದ ಝೇಂಕಾರ ಮೆಲೋಡೀಸ್ ಸಂಗಮದೊಂದಿಗೆ ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಮೇಳದಲ್ಲಿ ಪಾಲ್ಗೊಳ್ಳಲು ಸಚಿವರು ವಿನಂತಿಸಿದ್ದಾರೆ.