ಭಟ್ಕಳ: ನ್ಯಾಯಾಧೀಶರ ಮಾನವೀಯತೆ - ನಾಲ್ಕು ವರ್ಷಗಳಿಂದ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥನಿಗೆ ನೆರವಾದ ಕಾನೂನು ಸೇವಾ ಸಮಿತಿ
ಭಟ್ಕಳ: ಭಟ್ಕಳದಲ್ಲಿ ನಾಲ್ಕು ವರ್ಷಗಳಿಂದ ರಸ್ತೆಯ ಬದಿಯಲ್ಲಿ ಹರಕು ಬಟ್ಟೆ ಹಾಕಿಕೊಂಡು ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಇಲ್ಲಿನ ಹಿರಿಯ ಸಿವಿಲ್ ಜಡ್ಜ್ ಹಾಗೂ ತಾಲ್ಲೂಕು ಕಾನೂನ ಸೇವಾ ಸಮಿತಯ ಅಧ್ಯಕ್ಷ ಕಾಂತ ಕುರಣಿ ಮಾನವೀಯತೆ ಮೆರೆದು ನೆರವಾದ ಘಟನೆ ಜನಮಾನಸದಲ್ಲಿ ಮೆಚ್ಚುಗೆ ವ್ಯಕ್ತವಾಗುವಂತೆ ಮಾಡಿದೆ.
ಗುರುವಾರದಂದು ನ್ಯಾಯಾಲಯದ ಎದುರುಗಡೆ ಕಾಣಿಸಿಕೊಂಡ ಈ ವ್ಯಕ್ತಿಯನ್ನು ಸರಿಯಾಗಿ ಆರೈಕೆ ಮಾಡಿ, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ ನ್ಯಾಯಾಧೀಶರ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಸ್ಥಳೀಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರ ಆದೇಶ ಮೇರೆಗೆ, ಸ್ಥಳೀಯ ಪೊಲೀಸ್ ಅಧಿಕಾರಿ ಮತ್ತು ಆರೋಗ್ಯ ಇಲಾಖೆಯ ಸಹಾಯದಿಂದ ಈ ವ್ಯಕ್ತಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಆತನ ತಲೆಗೂದಲು ಕಟಿಂಟ್ ಮಾಡಿಸಿ, ಆರೋಗ್ಯ ತಪಾಸಣೆ ಮಾಡಿ ಸರಿಯಾದ ಆರೈಕೆ ಆರಂಭಿಸಲಾಗಿದೆ. 50 ವರ್ಷ ಪ್ರಾಯದ ನಾಗಭೂಷಣ ಆಚಾರಿ ಎಂದು ಗುರುತಿಸಿಕೊಂಡ ಈ ವ್ಯಕ್ತಿ, ಇತ್ತೀಚಿನ ವರ್ಷಗಳಲ್ಲಿ ಭಟ್ಕಳ, ಮುರ್ಢೆಶ್ವರ ಮತ್ತು ಹೊನ್ನಾವರದಲ್ಲಿ ತಿರುಗಾಡುತ್ತಿದ್ದನು ಎಂದು ಹೇಳಲಾಗಿದೆ. ನ್ಯಾಯಾಧೀಶರ ಈ ಮಾನವೀಯ ಕಾರ್ಯದಲ್ಲಿ ಹಲವಾರು ಜನರು ಶ್ರಮಿಸಿದ್ದಾರೆ.
ಸಾಮಾನ್ಯವಾಗಿ ನಿರ್ಗತಿಕರು ಮತ್ತು ಅಸ್ವಸ್ಥರನ್ನು ಕಂಡು ಕಾಣದಂತೆ ನೋಡುವ ಮನಸ್ಥಿತಿ ಇರುವಾಗ ನ್ಯಾಯಾಧೀಶರೊಬ್ಬರು ಮಾಡಿದ ಇಂತಹ ಮಾನವೀಯ ಕೆಲಸವು ಭಟ್ಕಳದ ಇತರರಿಗೆ ಮಾದರಿಯೋಗ್ಯವಾಗಿದೆ.
ಮಾನಸಿಕ ಅಸ್ವಸ್ಥನ ಆರೈಕೆಯಲ್ಲಿ ಪಿ.ಎಸ್.ಐ. ಶಿವಾನಂದ ಸಮಾಜ ಸೇವಕ ಮಂಜು ನಾಯ್ಕ ಮುಟ್ಟಳ್ಳಿ ವಕೀಲರು ನ್ಯಾಯಾಲಯದ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಪೌರ ಕಾರ್ಮಿಕರು ಹಾಗೂ ವಿಶ್ವನಾಥ ಸೇರಿದಂತೆ ಹಲವರು ಶ್ರಮಿಸಿದ್ದಾರೆ.