ಭಟ್ಕಳದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಜ್ವರ; ಡೆಂಗ್ಯೂ ಪೀಡಿತ ಪ್ರದೇಶಕ್ಕೆ ಮುಖ್ಯಾಧಿಕಾರಿ ಭೇಟಿ; ಅಗತ್ಯ ಕ್ರಮಕ್ಕೆ ಸಾರ್ವಜನಿಕರ ಆಗ್ರಹ
ಭಟ್ಕಳ: ಭಟ್ಕಳ ತಾಲೂಕಿನಲ್ಲಿ ದಿನೆ ದಿನೆ ಡೆಂಗ್ಯೂ ಜರವು ತನ್ನ ಹಿಡಿತವನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದು ಭಟ್ಕಳದ ಹಳೆಯ ಮೊಹಲ್ಲಾಗಳಲ್ಲಿ ವಾಸಿಸುವ ಜನರಲ್ಲಿ ಡೆಂಗ್ಯೂ ಉಲ್ಭಣಗೊಂಡು ಹಲವರು ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸೋಮವಾರ ಭಟ್ಕಳ ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾ ಹಾಗೂ ಆರೋಗ್ಯ ಸಿಬ್ಬಂಧಿಗಳು ಭಟ್ಕಳದ ಹಳೆ ಮೊಹಲ್ಲಾಗಳಾದ, ಫಾರೂಕಿ ಸ್ಟ್ರೀಟ್, ತಕ್ಕಿಯಾ ಸ್ಟ್ರೀಟ್, ಶಾಜ್ಲಿ ಸ್ಟ್ರೀಟ್, ಘೌಸಿಯಾ ಸ್ಟ್ರೀಟ್ ಮತ್ತು ಮುಖ್ಯ ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರ ಕಾಳಜಿಯನ್ನು ಪರಿಹರಿಸುವುದು ಮತ್ತು ಸಂಭಾವ್ಯ ಪರಿಹಾರಗಳನ್ನು ಗುರುತಿಸುವುದು ಈ ಭೇಟಿಯ ಉದ್ದೇಶವಾಗಿತ್ತು ಎಂದು ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಡೆಂಗೆಯಿಂದ ಪೀಡಿತ ಪ್ರದೇಶಗಳಲ್ಲಿ, ನಿವಾಸಿಗಳು ಪುರಸಭೆ ಮುಖ್ಯ ಅಧಿಕಾರಿಗೆ ಸೊಳ್ಳೆಗಳ ಹೆಚ್ಚಿನ ಪ್ರಾಬಲ್ಯದ ಬಗ್ಗೆ ತಮ್ಮ ಆತಂಕ ವ್ಯಕ್ತಪಡಿಸಿದರು. ಕೆಲವರು ತಮ್ಮ ಡೆಂಗೆ ಪೀಡಿತ ಮಕ್ಕಳನ್ನು ತೋರಿಸಿದರೆ, ಇನ್ನೂ ಕೆಲವರು ತಮ್ಮ ದೇಹದ ಮೇಲೆ ಸೊಳ್ಳೆ ಕಚ್ಚುವಿಕೆಯ ಗುರುತುಗಳನ್ನು ತೋರಿಸಿದರು. ಹೊಗೆಯಾವರಣ ನಿಯಂತ್ರಣ ಕ್ರಮಗಳ ಅಗತ್ಯವನ್ನು ಒತ್ತಿ ಹೇಳಿದರು. ನಿವಾಸಿಗಳು ರಸ್ತೆ ಬದಿಯಲ್ಲಿ ನಿಂತ ನೀರು ಮತ್ತು ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳನ್ನು ಸಹ ಗಮನಿಸಿದರು. ಕೆಲವು ಪ್ರದೇಶಗಳಲ್ಲಿ ತ್ಯಾಜ್ಯ ರಾಶಿಗಳು ಮತ್ತು ಚರಂಡಿಗಳ ಬಳಿ ಸ್ವಚ್ಛತೆಯ ನಂತರ ಉಳಿದ ಮಣ್ಣು ಮತ್ತು ಕಸದ ಬಗ್ಗೆ ಅಧಿಕಾರಿಗಳಲ್ಲಿ ದೂರಿದರು.
ಘೌಸಿಯಾ ಸ್ಟ್ರೀಟ್‌ನಲ್ಲಿರುವ ಒಳಚರಂಡಿ ಪಂಪಿಂಗ್ ಸ್ಟೇಷನ್‌ನ ಹೊರಗೆ ಇರುವ ಒಣ ತ್ಯಾಜ್ಯ ಸಂಗ್ರಹ ಪ್ರದೇಶದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ಗಮನಿಸಿದ ಮೇಲೆ, ಪುರಸಭೆಯ ಮುಖ್ಯ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಬಾವಿಯನ್ನು ಮುಚ್ಚಲು ಮತ್ತು ಪುರಸಭೆಯ ಸಿಬ್ಬಂಧಿಗಳು ವಾರಕ್ಕೆ ಎರಡು ಬಾರಿ ಪ್ರದೇಶವನ್ನು ಸ್ವಚ್ಛಗೊಳಿಸಲು ಸೂಚಿಸಿದರು. ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳನ್ನು ತಕ್ಷಣವೇ ತೆರವುಗೊಳಿಸಲಾಗುವುದು ಮತ್ತು ಮಣ್ಣು ಮತ್ತು ಕಸವನ್ನು ತೆಗೆದುಹಾಕಲಾಗುವುದು ಎಂದು ಸ್ಥಳಿಯರಿಗೆ ಭರವಸೆ ನೀಡಿದರು
ಘೌಸಿಯಾ ಸ್ಟ್ರೀಟ್‌ನ ದುರ್ಬಲ ಸೇತುವೆ:
ಘೌಸಿಯಾ ಬೀದಿಯಲ್ಲಿರುವ ದುರ್ಬಲ ಸೇತುವೆಯ ಬಳಿಗೆ ಆ ಭಾಗದ ಜನರು ನಗರಸಭೆ ಅಧಿಕಾರಿಗಳನ್ನು ಕರೆದೊಯ್ದು ದ್ವಿಚಕ್ರ ವಾಹನಗಳು ಹಾದು ಹೋಗುವುದರಿಂದ ಸೇತುವೆ ಕಂಪಿಸುತ್ತದೆ ಎಂದು ತಿಳಿಸಿದಾಗ ಸ್ಥಳದಲ್ಲಿದ್ದ ಎಂಜಿನಿಯರ್ ಅರವಿಂದರಾವ್, ಸೇತುವೆಯ ಕಂಪನದಿಂದ ಯಾವುದೇ ತೊಂದರೆಯಾಗುವುದಿಲ್ಲ, ಇದರಿಂದಾಗಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಇಲ್ಲ, ಜನರು ಭಯಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.
ಮನೆ ಬಳಿ ಕಸದ ಲಾರಿ ಬಾರದ ಬಗ್ಗೆ ದೂರು:
ಮನೆ ಮನೆಗೆ ಕಸ ಸಂಗ್ರಹಿಸಲು ಬರುವ ಪುರಸಭೆ ವಾಹನ ತಮ್ಮ ಮನೆಯಿಂದ ದೂರ ನಿಂತು ಮನೆ ಬಳಿ ಬಾರದೆ ದೂರದಲ್ಲಿ ನಿಲ್ಲುವುದರಿಂದ ವಾಹನ ಬರುತ್ತಿರುವುದು ನಿವಾಸಿಗಳಿಗೆ ತಿಳಿಯುತ್ತಿಲ್ಲ ಹೀಗಾಗಿ ಕಸ ನೀಡಲು ಸ್ವಲ್ಪ ತಡವಾದರೆ ಆ ವ್ಯಕ್ತಿ ಕಸದ ಚೀಲವನ್ನು ಮನೆ ಮುಂದೆ ಎಸೆದು ಓಡಿ ಹೋಗುತ್ತಾನೆ ಎಂದು ಸ್ಥಳದಲ್ಲಿದ್ದ ಕೆಲವರು ಮುಖ್ಯಾಧಿಕಾರಿಗೆ ದೂರಿದರು. ವಾಹನವನ್ನು ಮನೆ ಬಳಿ ತರುವಂತೆ ಮತ್ತು ಸಾರ್ವಜನಿಕರಿಗೆ ದೂರು ನೀಡಲು ಅವಕಾಶ ನೀಡದಂತೆ ನೋಡಿಕೊಳ್ಳಲು ಮುಖ್ಯಾಧಿಕಾರಿ ಸ್ಥಳದಲ್ಲಿದ್ದ ಹಿರಿಯ ಆರೋಗ್ಯಾಧಿಕಾರಿ ಸೊಜಿಯಾ ಸುಮನ್ ಅವರಿಗೆ ಸೂಚಿಸಿದರು.
ಆ ಸಂದರ್ಭದಲ್ಲಿ ಮಳೆ ಬಂದಿದ್ದರಿಂದ ಭೇಟಿ ಮೊಟಕುಗೊಳಿಸಬೇಕಾಯಿತು ನಂತರ ನಗರಸಭೆ ಅಧಿಕಾರಿಗಳ ಈ ನಿಯೋಗ ಮುಂದೊಂದು ದಿನ ಹೆಚ್ಚಿನ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ಭರವಸೆ ನೀಡಿ ವಾಪಸ್ ತೆರಳಿತ್ತು. ಪುರಸಭಾ ಸದಸ್ಯ ಫಯಾಜ್ ಮುಲ್ಲಾ, ಕೌಸರ್ ಚಾಮಂಡಿ ಜತೆಗಿದ್ದರು.