ಭಟ್ಕಳ: ಮುರುಡೇಶ್ವರದ ಸಮುದ್ರದಲ್ಲಿ ಮುಳುಗಿ ಕಣ್ಮರೆಯಾಗಿದ್ದ ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲ್ಲೂಕಿನ ಎಂ.ಕೊತ್ತೂರು ಗ್ರಾಮದ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯರಾದ ದೀಕ್ಷಾ ಜೆ (15), ಲಾವಣ್ಯ (15), ಮತ್ತು ವಂದನಾ (15) ಅವರ ಮೃತದೇಹ ಬುಧವಾರ ಪತ್ತೆಯಾಗಿದೆ.
ಕರಾವಳಿ ಕಾವಲು ಪೊಲೀಸ್ ಪಡೆ ಹಾಗೂ ಸ್ಥಳೀಯ ಮೀನುಗಾರರ ಸಹಯೋಗದೊಂದಿಗೆ ಮುಂಜಾನೆ ಪತ್ತೆ ಕಾರ್ಯಾಚರಣೆ ಆರಂಭಗೊಂಡು, ಬೆಳಗ್ಗೆ 11.30ಕ್ಕೆ ದೀಕ್ಷಾ ಹಾಗೂ ಲಾವಣ್ಯ ಅವರ ಮೃತದೇಹ ಆರ್.ಎನ್.ಎಸ್. ರೆಸಿಡೆನ್ಸಿ ಹಿಂಭಾಗದ ಕಲ್ಲುಬಂಡೆ ಸಮೀಪ ಪತ್ತೆಯಾಯಿತು. ವಂದನಾ ಅವರ ಮೃತದೇಹ ಸಮೀಪದ ಗುಡ್ಡದ ಕೆಳಭಾಗದಲ್ಲಿ ಪತ್ತೆಯಾಯಿತು.
ಈ ಕಾರ್ಯಾಚರಣೆಯನ್ನು ಕರಾವಳಿ ಪೊಲೀಸ್ ಕಾವಲು ಪಡೆ ಸಿಪಿಐ ಕುಸುಮಧರಾ ಅವರ ನೇತೃತ್ವದಲ್ಲಿ ನಡೆಸಲಾಗಿದ್ದು, ಮಂಗಳವಾರ ಸಂಜೆ ಮತ್ತೊಬ್ಬ ವಿದ್ಯಾರ್ಥಿನಿ ಶ್ರಾವಂತಿ ಗೋಪಾಲಪ್ಪ (15) ಕೂಡಾ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಳು.
ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಹಾಗೂ ಉಪವಿಭಾಗಾಧಿಕಾರಿ ಡಾ. ನಯನಾ ಭೇಟಿ ನೀಡಿ, ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರು.