ಭಟ್ಕಳ: ಮುರ್ಡೇಶ್ವರ ಸಮುದ್ರದಲ್ಲಿ ದೋಣಿ ಮಗುಚಿ; ಒಬ್ಬ ಸಾವು, ನಾಲ್ವರ ರಕ್ಷಣೆ

Source: SOnews | By Staff Correspondent | Published on 13th September 2024, 10:38 AM | Coastal News |

ಭಟ್ಕಳ: ತಾಲೂಕಿನ ಮುರ್ಡೇಶ್ವರ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಎತ್ತರದ ಅಲೆಗಳ ಅಬ್ಬರಕ್ಕೆ ದೋಣಿಯೊಂದು ಪಲ್ಟಿಯಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಉಳಿದ ನಾಲ್ವರನ್ನು ದಡದಲ್ಲಿದ್ದ ಇತರ ಮೀನುಗಾರರ ಸಹಾಯದಿಂದ ರಕ್ಷಿಸಲಾಗಿದೆ.

ಇವರಲ್ಲಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಹೈದರ್ ಅಲಿ ಜಕರಿಯಾ ಬಾಬು (44) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇಬ್ಬರು ವ್ಯಕ್ತಿಗಳಾದ ಇಬ್ರಾಹಿಂ ಫಕೀರ ಮುಲ್ಲಾ (50) ಮತ್ತು ಅಬು ಮೊಹಮ್ಮದ್ ಉಮ್ರಾ (50) ಗಂಭೀರವಾಗಿ ಗಾಯಗೊಂಡು ಮುರ್ಡೇಶ್ವರ ಆರ್ಎನ್ಎಸ್ ಆಸ್ಪತ್ರೆಗೆ ದಾಖಲಾಗಿದ್ದರೆ, ಅಬ್ದುಲ್ ಸಮಿ ಇಲ್ಯಾಸ್ ಕಾಲು (21) ಮತ್ತು ಮುಹಮ್ಮದ್ ಶಾಫಿ ತಡ್ಲಿಕರ್ (45) ಪ್ರಾಣಾಪಾದಿಂದ ಪಾರಾಗಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾಹಿತಿ ನೀಡಿದ ಅಬ್ದುಲ್ ಸಮಿ, ಗುರುವಾರ ಬೆಳಿಗ್ಗೆ 6 ಗಂಟೆಯ ಸುಮಾರಿಗೆ ನಾವು ಐವರು ದೋಣಿಯಲ್ಲಿದ್ದು ಸಮುದ್ರದಲ್ಲಿ ಬಲೆ ಹಾಕುತ್ತಿದ್ದೆವು, ದಡಕ್ಕೆ ಹಿಂತಿರುಗುವಾಗ ಹಠಾತ್ ಅಲೆಯೊಂದು ಅಪ್ಪಳಿ ದೋಣಿ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ. ಅಲೆಯ ರಭಸಕ್ಕೆ ದೋಣಿಯಲ್ಲಿದ್ದ ಓರ್ವ ಮೀನುಗಾರ ಸಮುದ್ರಕ್ಕೆ ಎಸೆಯಲ್ಪಟ್ಟರು. ನೋಡ ನೋಡುತ್ತಿದ್ದಂತೆ ಮತ್ತೊಂದು ಅಲೆಯು ಅಪ್ಪಳಿಸಿ ದೋಣಿಯಲ್ಲಿದ್ದ ಮೂವರನ್ನು ಸಮುದ್ರದಲ್ಲಿ ಮುಳುಗಿಸಿತು. ಇತರ ಬೋಟಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಆದರೆ ಹೈದರಲಿ ಝಕರಿಯಾ ಎಂಬುವವರು ಈ ದುರಂತದಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಮುರ್ಡೇಶ್ವರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೈದರ್ ಅಲಿ ಅವರ ಮೃತದೇಹವನ್ನು ಬೀಚ್ ರಸ್ತೆಯಲ್ಲಿರುವ ಅವರ ಮನೆಗೆ ತಂದು ಅಂತಿಮ ಸಂಸ್ಕಾರ ನೆರವೇರಿಸಲಾಯಿತು. ಹೈದರ್ ಅಲಿ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರು ಸೇರಿದಂತೆ ಮೂವರು ಮಕ್ಕಳನ್ನು ಅಗಲಿದ್ದಾರೆ.

Read These Next

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡದ ಕ್ರಮಕ್ಕೆ ಸಂಸದ ಕಾಗೇರಿ ಕಿಡಿ: ಸೇಡಿನ ರಾಜಕೀಯ ಆರೋಪ

ಭಟ್ಕಳ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಮಾನ ಮರ್ಯಾದೆ ರಾಷ್ಟ್ರಮಟ್ಟದಲ್ಲಿ ದಿನದಿಂದ ದಿನಕ್ಕೆ ಹರಾಜಾಗುತ್ತಿದೆಯಾದರೂ, ...

ಕಾರವಾರ: ಗ್ರಾಮ ಆರೋಗ್ಯ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ; ಈಶ್ವರ್ ಕಾಂದೂ

ಉತ್ತರ ಕನ್ನಡ​​​​​​​ ಜಿಲ್ಲೆಯಲ್ಲಿ ಗ್ರಾಮ ಆರೋಗ್ಯ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕೆಂದು ಜಿಲ್ಲಾ ...

ಸೆ. 19ರಿಂದ 24ರ ವರೆಗೆ ಉತ್ತರ ಕನ್ನಡದಲ್ಲಿ ದಸರಾ ಕ್ರೀಡಾಕೂಟ: ಜಿಲ್ಲಾ ಮಟ್ಟದ ಕ್ರೀಡಾಪಟುಗಳ ಆಯ್ಕೆಗೆ ತಾಲ್ಲೂಕು ಮಟ್ಟದ ಸ್ಪರ್ಧೆಗಳು

ಪ್ರಸಕ್ತ ಸಾಲಿನ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ಪುರುಷ ಮತ್ತು ಮಹಿಳೆಯರಿಗಾಗಿ ತಾಲ್ಲೂಕು, ಜಿಲ್ಲಾ, ವಿಭಾಗ ಹಾಗೂ ರಾಜ್ಯ ...