ಭಾರೀ ಮಳೆಗೆ ಬೆಂಗಳೂರು ತತ್ತರ; ಯಲಹಂಕದಲ್ಲಿ 1 ಸಾವಿರ ಮನೆಗಳಿಗೆ ನುಗ್ಗಿದ ಮಳೆ ನೀರು

Source: Vb | By I.G. Bhatkali | Published on 23rd October 2024, 5:14 PM | State News |

ಬೆಂಗಳೂರು: ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಗರದ ವಿವಿಧೆಡೆ ಅವಾಂತರ ಸೃಷ್ಟಿಯಾಗಿದೆ. ಸೋಮವಾರ ರಾತ್ರಿಯೆಲ್ಲಾ ಸುರಿದು ಬೆಳಗ್ಗೆಯಿಂದ ಬಿಡುವು ನೀಡಿದ್ದ ಮಳೆ, ಮಧ್ಯಾಹ್ನದ ವೇಳೆಗೆ ಮತ್ತೆ ಸುರಿದಿದೆ.

ಭಾರೀ ಮಳೆಯಿಂದಾಗಿ ವಾಹನ ಸವಾರರು ತೊಂದರೆಗೀಡಾಗಿದ್ದು, ಜನರು ಮನೆಯಿಂದ ಹೊರಬರಲು ಯೋಚಿಸುವಂತಾಗಿದೆ. ಯಲಹಂಕ ವಲಯವೊಂದರಲ್ಲೇ 1,030 ಮನೆಗಳಿಗೆ ನೀರು ನುಗ್ಗಿದೆ. ನಗರದಲ್ಲಿ ಅ.1 ರಿಂದ ಅ.21ರವರೆಗೆ 156.6 ಮಿಮೀ ಮಳೆಯಾಗಿದೆ. ರಸ್ತೆಗಳೆಲ್ಲಾ ಜಲಾವೃತವಾಗಿದ್ದು, ವಾಹನ ಸವಾರರು ಹೈರಾಣಾಗಿದ್ದಾರೆ.

ನಗರದಲ್ಲಿರುವ ಮಾಗಡಿ ರಸ್ತೆ, ಭಾಷ್ಯಂ ಸರ್ಕಲ್, ಮೆಜೆಸ್ಟಿಕ್, ಕೆ.ಆರ್. ಪುರಂ, ಯಶವಂತಪುರ, ಮೇನ್ರಿ ಸರ್ಕಲ್, ಮಲ್ಲೇಶ್ವರಂ ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗಿದ್ದು, ಕೆಂಗೇರಿ ಸುತ್ತಮುತ್ತ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದೆ.

ಹವಾಮಾನ ಬದಲಾವಣೆಯಿಂದಾಗಿ ನಗರದ ಯಲಹಂಕ, ದಾಸರಹಳ್ಳಿ ಹಾಗೂ ಮಹದೇವಪುರ ಸೇರಿ ಹಲವಾರು ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಪ್ರವಾಹ ಪೀಡಿತ ಪ್ರದೇಶಗಳ ಮೇಲ್ವಿಚಾರಣೆ ಮಾಡಲು, ನಿರ್ವಹಿಸಲು ಬಿಬಿಎಂಪಿ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್, ಅಗ್ನಿ ಶಾಮಕ ದಳದ ತಂಡಗಳು 24X7 ಕಾರ್ಯನಿರ್ವಹಿಸುತ್ತಿವೆ. 

ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್: ಯಲಹಂಕ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ ಕೆರೆಯ ಮಟ್ಟಕ್ಕಿಂತ ಕೆಳಗಿದ್ದು, ಕೆರೆ ಕೋಡಿ ಹೊರ ಹರಿವಿನಿಂದಾಗಿ ಅಪಾರ್ಟ್ ಮೆಂಟ್‌ಗೆ ನೀರು ನುಗ್ಗಿದೆ. ನೀರಿನ ಹರಿವಿನ ಮಟ್ಟ ಹೆಚ್ಚಾಗಿದ್ದು, ಅಪಾರ್ಟ್ ಮೆಂಟ್ ಹಾಗೂ ರಸ್ತೆಯಲ್ಲಿ ನೀರು ನಿಂತಿದೆ. ನಿವಾಸಿಗಳನ್ನು ಸ್ಥಳಾಂತರ ಮಾಡುವುದರ ಜೊತೆಗೆ ಕುಡಿಯುವ ನೀರು ಹಾಗೂ ತಿಂಡಿ ವ್ಯವಸ್ಥೆ ಮಾಡಲಾಗಿದೆ. 

ಅಪಾರ್ಟ್‌ಮೆಂಟ್‌ನಲ್ಲಿ 604 ಮನೆಗಳಿದ್ದು, ಸುಮಾರು 2,500 ನಿವಾಸಿಗಳಿದ್ದಾರೆ. ಇನ್ನೂ ಮೂರು ದಿನ ಮಳೆಯಾಗುವ ಮುನ್ಸೂಚನೆಯಿದ್ದು, ಅಪಾರ್ಟ್‌ಮೆಂಟ್‌ನಲ್ಲಿರುವ ಎಲ್ಲ ನಿವಾಸಿಗಳನ್ನು ಸುರಕ್ಷತೆಯ ದೃಷ್ಟಿಯಿಂದ 8 ದಿನಗಳ ಕಾಲ ಬೇರೆಡೆ ಸ್ಥಳಾಂತರವಾಗಲು ಬಿಬಿಎಂಪಿ ಸೂಚಿಸಿದೆ. ಅದರಂತೆ ಈಗಾಗಲೇ ಬಹುತೇಕ ನಿವಾಸಿಗಳು ಬೇರೆಡೆ, ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಎನ್‌ಡಿಆರ್ ಎಫ್‌ನ 16 ಬೋಟ್‌ಗಳ ಮೂಲಕ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.

ಅಪಾರ್ಟ್‌ಮೆಂಟ್‌ಗೆ ಬರುವ ನೀರನ್ನು ತಡೆಯಲು ಪಾಲಿಕೆಯಿಂದ ತಾತ್ಕಾಲಿಕವಾಗಿ ಮರಳು ಚೀಲಗಳನ್ನು ಅಡ್ಡವಾಗಿ ಹಾಕಲಾಗಿದೆ. ಅಲ್ಲದೆ ನೀರುಗಾಲುವೆಯ ಪಕ್ಕದಲ್ಲೇ ಕಚ್ಚಾ ಡ್ರೈನ್ ಮಾಡಿ ಅದರ ಮೂಲಕ ನೀರು ಹರಿದು ಹೋಗುವಂತೆ ಮಾಡಲಾಗಿದೆ. 

ಎನ್‌ಡಿಆರ್‌ಎಫ್ ನ 75 ಸಿಬ್ಬಂದಿ, ಬಿಬಿಎಂಪಿಯ 25 ಅಧಿಕಾರಿ/ಸಿಬ್ಬಂದಿ, ಎಸ್‌ಡಿಆರ್‌ಎಫ್ ನ 25 ಸಿಬ್ಬಂದಿ, ಅಗ್ನಿ ಶಾಮಕ ದಳದ 20 ಸಿಬ್ಬಂದಿ ಸೇರಿ ಅಗ್ನಿ ಶಾಮಕದ 2 ವಾಹನಗಳು ಸ್ಥಳದಲ್ಲಿವೆ. 

ಟಾಟಾ ನಗರ ಸುತ್ತಮುತ್ತಲಿನ ಪ್ರದೇಶ ಪರಿಶೀಲನೆ: ಮಳೆಯಿಂದಾಗಿ ಜಲಾವೃತಗೊಂಡಿರುವ ಟಾಟಾ ನಗರ ವ್ಯಾಪ್ತಿಯ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

245 ಎಂಎಂ ಮಳೆ:
ಬೆಂಗಳೂರಿನಲ್ಲಿ ಅಕ್ಟೋಬರ್ ತಿಂಗಳಲ್ಲಿ 245 ಎಂಎಂ ಮಳೆಯಾಗಿದ್ದು, ಇದು ಅತಿ ಹೆಚ್ಚು ಮಳೆಯಾಗಿರುವ ಪೈಕಿ ನಾಲ್ಕನೇ ಮಳೆಯಾಗಿದೆ. ನಗರದ ಯಲಹಂಕ, ಮಹದೇವಪುರ, ದಾಸರಹಳ್ಳಿ ವಲಯದಲ್ಲಿ ಕಳೆದ 72 ಗಂಟೆಗಳಲ್ಲಿ ಭಾರೀ ಮಳೆಯಾಗಿದೆ. ಇದರಿಂದ ಕೆರೆಗಳೆಲ್ಲಾ ತುಂಬಿ ಕೋಡಿಯಲ್ಲಿ ಹೆಚ್ಚು ನೀರು ಹರಿದು ರಾಜಕಾಲುವೆಗಳಿಗೆ ಬರುತ್ತಿರುವ ಕಾರಣ ವಿವಿಧ ಪ್ರದೇಶಗಳು ಜಲಾವೃತವಾಗಿರುತ್ತದೆ. ಚೌಡೇಶ್ವರಿ ನಗರದಲ್ಲಿ 160 ಎಂ.ಎಂ ಮಳೆಯಾಗಿದ್ದು, ಇದು ಇತಿಹಾಸದಲ್ಲಿಯೇ ಅತಿ ಹೆಚ್ಚು ಮಳೆಯಾಗಿರುತ್ತದೆ.

Read These Next

ಬೆಂಗಳೂರು: ನಿರ್ದೇಶನಾಲಯದ ಕಚೇರಿಯಲ್ಲಿ ಮಾಹಿತಿ ತಂತ್ರಜ್ಞರ ಸೇವೆ ಪಡೆಯಲು ಅರ್ಜಿ ಆಹ್ವಾನ

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದ ಕಛೇರಿಯಲ್ಲಿ ಇಲಾಖೆಯ ಯೋಜನೆಗಳನ್ನು ಸಮಪರ್ಕವಾಗಿ ಇ-ಆಫೀಸ್ ತಂತ್ರಾಂಶ ...

ಬೆಂಗಳೂರು: ರಾಷ್ಟ್ರ ದಲ್ಲಿ ರಾಜ್ಯ ಕೃಷಿ ವಿಶ್ವವಿದ್ಯಾನಿಲಯವು ಸಂಶೋಧನೆ, ಅಭಿವೃದ್ಧಿಯಲ್ಲಿ ಪ್ರಮಖ ಪಾತ್ರ ವಹಿಸಿದೆ : ಕೆ.ಎಚ್.ಮುನಿಯಪ್ಪ

ರಾಷ್ಟ್ರದಲ್ಲಿ ನಮ್ಮ ಕೃಷಿ ವಿಶ್ವವಿದ್ಯಾನಿಲಯವು ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಸಂಶೋಧನೆ ಮತ್ತು ಅಭಿವೃಧ್ಧಿಯಲ್ಲಿ ಪ್ರಮುಖ ...