ಅಕ್ರಮ ಗಣಿಗಾರಿಕೆ; ಬಂಧಿತ ರೌಡಿಶೀಟ‌ರ್ ಬಿಡುಗಡೆ ಮಾಡಲು ಪೊಲೀಸರಿಗೆ ಬೆದರಿಕೆ; ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್

Source: Vb | By I.G. Bhatkali | Published on 20th May 2024, 8:25 PM | Coastal News |

ಬೆಳ್ತಂಗಡಿ: ಅಕ್ರಮ ಕಲ್ಲಿನಕೋರೆ ಪ್ರಕರಣದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ ವೇಳೆ ಠಾಣೆಗೆ ಬಂದು ಪೊಲೀಸರಿಗೆ ಬೆದರಿಕೆ ಹಾಕಿ ಅವಾಚ್ಯವಾಗಿ ನಿಂದಿಸಿ ಪೊಲೀಸ್ ಇಲಾಖೆ ಹಾಗೂ ಅಧಿಕಾರಿಗಳ ಬಗ್ಗೆ ಅಸಾಂವಿಧಾನಿಕ ಶಬ್ದಗಳಲ್ಲಿ ಮಾತನಾಡಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕರು ರೌಡಿ ಶೀಟರ್ ಆಗಿರುವ ಶಶಿರಾಜ್ ಶೆಟ್ಟಿಯನ್ನು ಕಾನೂನು ಬಾಹಿರವಾಗಿ ಬಿಡುಗಡೆ ಮಾಡುವಂತೆ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಅವಾಚ್ಯವಾಗಿ ಬೈದು ಬೆದರಿಸಿದ್ದಾರೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಪೊಲೀಸ್ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳ ಬಗ್ಗೆ ಅಸಾಂವಿಧಾನಿಕ ಶಬ್ದಗಳಲ್ಲಿ ಮಾತನಾಡಿ ದುರ್ವತ್ರನೆ ತೋರಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅದರನ್ವಯ ಶಾಸಕ ಹರೀಶ್ ಪೂಂಜಾ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಅ.ಕ್ರ.57/2024, ಕಲಂ 353, 504 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

ಈ ಹಿಂದೆ ಕಳೆಂಜದಲ್ಲಿ ಅರಣ್ಯ ಅತಿಕ್ರಮಣ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಅದನ್ನು ತಡೆದ ಘಟನೆಯ ಹಿನ್ನೆಲೆಯಲ್ಲಿ ಶಾಸಕ ಹರೀಶ್ ಪೂಂಜಾ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯೇ ಪ್ರಕರಣ ದಾಖಲಿಸಿದೆ.

ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಕಲ್ಲಿನ ಕೋರೆಗೆ ದಾಳಿ ನಡೆಸಿದ ಬೆಳ್ತಂಗಡಿ ತಹಶೀಲ್ದಾರ್ ನೇತೃತ್ವದ ತಂಡವು ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷನನ್ನು ಮೇಲಂತಬೆಟ್ಟು ಗ್ರಾಮದ ಮೂಡಲ ಎಂಬಲ್ಲಿ ಶನಿವಾರ ಬಂಧಿಸಿತ್ತು. ರೌಡಿ ಶೀಟರ್, ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಬಂಧಿತ ಆರೋಪಿ.

Read These Next