ಹೊಸದಿಲ್ಲಿ: ಭಾರತದ ಓರ್ವ ಶ್ರೇಷ್ಠ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ಬುಧವಾರ ನಿವೃತ್ತಿ ಪ್ರಕಟಿಸಿದ್ದಾರೆ. ಮಿಥಾಲಿ ಅವರು ತನ್ನ 23 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಮಹಿಳಾ ಕ್ರಿಕೆಟಿನ ಜನಪ್ರಿಯತೆಯಲ್ಲಿ ಗಮನಾರ್ಹ ಕೊಡುಗೆಯನ್ನು ನೀಡಿದ್ದಾರೆ.
ಮಿಥಾಲಿ 232 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ 7,805 ರನ್ ಗಳಿಸಿದ್ದಾರೆ. ಇದು ಏಕದಿನ ಕ್ರಿಕೆಟ್ ನಲ್ಲಿ ಮಹಿಳಾ ಕ್ರಿಕೆಟರ್ ಗಳಿಸಿದ ಗರಿಷ್ಠ ಸ್ಕೋರಾಗಿದೆ. 39ರ ಹರೆಯದ ಮಿಥಾಲಿ 89 ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ 2,364 ರನ್ ಗಳಿಸಿದ್ದಾರೆ. ತನ್ನ ಸುದೀರ್ಘ ವೃತ್ತಿಬದುಕಿನಲ್ಲಿ ಕೇವಲ 12 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದರೂ ದ್ವಿಶತಕ(214) ಗಳಿಸಿದ್ದರು. ಟೆಸ್ಟ್ ನಲ್ಲಿ ಈ ಸಾಧನೆ ಮಾಡಿರುವ ಏಕೈಕ ಮಹಿಳಾ ಕ್ರಿಕೆಟರ್ ಆಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 699 ರನ್ ಗಳಿಸಿದ್ದರು. ಒಟ್ಟು 10,868 ರನ್ ಗಳಿಸಿರುವ ಮಿಥಾಲಿ ಮಹಿಳಾ ಕ್ರಿಕೆಟ್‌ನಲ್ಲಿ ಎಲ್ಲ ಮಾದರಿ ಯಲ್ಲಿ ಗರಿಷ್ಠ ರನ್ ಸ್ಕೋರರ್ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.