ಬೆಂಗಳೂರು: ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್ ಹಂತಕರನ್ನು ಬಂಧಿಸಲು ಆಗ್ರಹಿಸಿ `ಲೇಖನಿ ರಕ್ಷಿಸಿ’ ಅಭಿಯಾನದ ಮನವಿ ಸಲ್ಲಿಕೆ

Source: so english | By Arshad Koppa | Published on 22nd September 2017, 3:23 PM | State News | Guest Editorial |

ಪತ್ರಿಕಾ ಪ್ರಕಟಣೆ

ಬೆಂಗಳೂರು, ಸೆ ೨೨: ಈಗಾಗಲೇ ತಮಗೆ ತಿಳಿದಿರುವಂತೆ ರಾಜ್ಯದಲ್ಲಿ ಡಾ. ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರನ್ನು ಗುಂಡಿಟ್ಟು ಕೊಲ್ಲಲಾಗಿದೆ. ಪಕ್ಕದ ರಾಜ್ಯವಾದ ಮಹಾರಾಷ್ಟ್ರದಲ್ಲಿಯೂ ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪನ್ಸಾರೆ ಅವರನ್ನು ಹತ್ಯೆಗೈಯಲಾಗಿದೆ. ಈ ಸರಣ  ಹತ್ಯೆಗಳು ಇಡೀ ದೇಶದ ಜನಸಾಮಾನ್ಯರಲ್ಲಿ ಭಯದ ವಾತಾವರಣ ಸೃಷ್ಟಿಸಿವೆ. ವಿಭಿನ್ನ ವಿಚಾರಧಾರೆಯ ಲೇಖಕರು, ಚಿಂತಕರು, ಕಲಾವಿದರ ಕುಟುಂಬಗಳಲ್ಲಿ ಸಾಕಷ್ಟು ತಲ್ಲಣವನ್ನು ಉಂಟು ಮಾಡಿವೆ.
ತಮಗೆ ನೆನಪಿರಬಹುದು, ಸಂಶೋಧಕ ಕಲಬುರ್ಗಿ ಅವರ ಹತ್ಯೆಯ ನಂತರ ರಾಷ್ಟ್ರದಲ್ಲಿ ಆರಂಭವಾದ ಪ್ರಶಸ್ತಿ ವಾಪಸಾತಿ ಚಳವಳಿಗೆ ರಾಜ್ಯದ ಸುಮಾರು 30 ಸಾಹಿತಿಗಳೂ ತಮ್ಮ ಪ್ರಶಸ್ತಿಗಳನ್ನು ಸರಕಾರಕ್ಕೆ, ಸರಕಾರದ ಸಂಸ್ಥೆಗಳಿಗೆ ಹಿಂತಿರುಗಿಸುವ ಮೂಲಕ ಹತ್ಯೆಯ ಕೃತ್ಯಕ್ಕೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರೊ. ಚಂಪಾ, ಅರವಿಂದ ಮಾಲಗತ್ತಿ, ಕುಂ ವೀರಭದ್ರಪ್ಪ, ರಹಮತ್ ತರಿಕೆರೆ, ಜಿ.ಎನ್. ರಂಗನಾಥ ಮುಂತಾದ ಹಿರಿಯರ ಜೊತೆಗೆ ಯುವ ಲೇಖಕರ-ಕಲಾವಿದರ ಸಮೂಹವೇ ಇದರಲ್ಲಿ ಪಾಲ್ಗೊಂಡಾಗ ಚಳವಳಿ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆದಿತ್ತು.
ದುರದೃಷ್ಟವಶಾತ್ ಇಂಥ ಚಳವಳಿ, ಪ್ರತಿಭಟನೆಗಳ ನಂತರವೂ ಈಗ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ನಡೆದಿದೆ. ಕೋಮು ಸಾಮರಸ್ಯ, ವಿವಿಧತೆಯಲ್ಲಿ ಏಕತೆ, ಜೀವಪರ ಕಳಕಳಿಗೆ ಹೆಸರಾದ ಕರ್ನಾಟಕದಂಥ ರಾಜ್ಯದಲ್ಲಿ ಹತ್ಯಾ ಕೃತ್ಯ ಮರುಕಳಿಸಿರುವುದು ಕಳವಳದ ಸಂಗತಿ.
ಕರ್ನಾಟಕ ಮತ್ತು ಪಶ್ಚಿಮ ಬಂಗಾಳದ ಕೆಲವು ಲೇಖಕರು, ಚಿಂತಕರು ಮತ್ತು ಹೋರಾಟಗಾರರು ಒಟ್ಟಾಗಿ ತಮಗೆ ಲೇಖನಿಯ ಜೊತೆಗೆ ಈ ಮನವಿಯಲ್ಲಿ ಸಲ್ಲಿಸುತ್ತಿದ್ದೇವೆ. ತಾವು ಅಭಿವ್ಯಕ್ತಿ ಸ್ವಾತಂತ್ರ್ಯದ ಸಂಕೇತವಾಗಿರುವ ಈ ಲೇಖನಿಗೆ ರಕ್ಷಣೆ ನೀಡುವುದರ ಮೂಲಕ ಪತ್ರಕರ್ತರು, ಸಾಹಿತಿಗಳು, ಚಿಂತಕರಲ್ಲಿ ಭದ್ರತಾ ಭಾವ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿ ಈ ಮೂಲಕ ವಿನಂತಿಸುತ್ತೇವೆ. ಪ್ರತಿಯೊಬ್ಬರಿಗೂ ಪ್ರತ್ಯೇಕ ಭದ್ರತೆ ಒದಗಿಸುವುದು ಈ ಭೂಮಿ ಮೇಲಿನ ಯಾವ ಸರಕಾರಕ್ಕೂ ಸಾಧ್ಯವಿಲ್ಲ ಎಂಬ ಸತ್ಯ ನಮಗೂ ತಿಳಿದಿದೆ. ಹಾಗಾಗಿ ನಾವೇನು ಎಲ್ಲರಿಗೂ ಪ್ರತ್ಯೇಕ ಭದ್ರತೆ ಒದಗಿಸಿ ಎಂದು ಕೇಳುತ್ತಿಲ್ಲ. ಬದಲಾಗಿ ಇಂಥ ಘಟನೆಗಳು ನಡೆದಾಗ ತ್ವರಿತವಾಗಿ ಕ್ರಮ ಕೈಗೊಳ್ಳುವುದರ ಮೂಲಕ ಹಂತಕರಲ್ಲಿ ಅಳುಕು ಮೂಡಿಸುವ ಕಾರ್ಯ ಸರಕಾರದಿಂದ ನಡೆಯಬೇಕಿದೆ.


ಕಲಬುರ್ಗಿ ಅವರ ಹತ್ಯೆಯ ನಂತರ ತನಿಖೆಯನ್ನು ತೀವ್ರಗೊಳಿಸಿ, ಹಂತಕರನ್ನು ಬಂಧಿಸಿದ್ದರೆ, ಗೌರಿ ಅವರ ಹತ್ಯೆ ನಡೆಯುತ್ತಿರಲಿಲ್ಲ ಎಂಬುದೇ ನಮ್ಮೆಲ್ಲರ ಅಭಿಪ್ರಾಯವಾಗಿದೆ.
ಈಗಾಗಲೇ ಗೌರಿ ಅವರ ಹತ್ಯೆಯನ್ನು ವಿರೋಧಿಸಿ ಬೃಹತ್ ಪ್ರತಿಭಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಒಂದು ಪ್ರತಿಭಟನೆಯ ನಂತರ ರಾಜ್ಯದ ಚಿಂತಕ-ಲೇಖಕ-ಹೋರಾಟಗಾರರು ವಿಶ್ರಮಿಸುವುದಿಲ್ಲ; ನ್ಯಾಯ ಸಿಗುವವರೆಗೂ ತಮ್ಮ ಸರಕಾರ ಎಚ್ಚರಿಸುತ್ತಲೇ ಇರುತ್ತೇವೆ ಎಂಬುದನ್ನು ಸಾಬೀತುಪಡಿಸಲು ಈ `ಲೇಖನಿ ರಕ್ಷಿಸಿ’ ಚಳವಳಿ ಹುಟ್ಟುಹಾಕಿದ್ದೇವೆ.
ಮಾನ್ಯ ಮುಖ್ಯಮಂತ್ರಿಗಳೇ, ನಾವು ತಮಗೆ ಲೇಖನಿಯನ್ನು ಸಲ್ಲಿಸುತ್ತಿರುವುದರ ಅರ್ಥ ನಾವು ಬರವಣ ಗೆಯನ್ನು ಸ್ಥಗಿತಗೊಳಿಸುತ್ತೇವೆ ಎಂದಲ್ಲ; ನಮ್ಮ ಪೆನ್ನು ಗನ್ನಿಗೆ ಬೆದರಿದೆ ಎಂದಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಸಾಧನವಾದ ಈ ಲೇಖನಿಗೆ ಭದ್ರತೆ ಒದಗಿಸುವುದು ಸರಕಾರದ ಕರ್ತವ್ಯ ಎಂಬುದನ್ನು ನೆನಪಿಸಲು ಈ ಲೇಖನಿಯನ್ನು ಸಲ್ಲಿಸುತ್ತಿದ್ದೇವೆ. ಉಳಿದಂತೆ ನಮ್ಮ ಬರವಣ ಗೆ, ಭಾರತದ ಸಂವಿಧಾನವೇ ಒದಗಿಸಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಯಥಾ ಪ್ರಕಾರ ಮುಂದುವರಿಯುತ್ತದೆ ಎಂಬುದನ್ನೂ ಈ ಸಂದರ್ಭದಲ್ಲಿ ಸ್ಪಷ್ಟಪಡಿಸುತ್ತೇವೆ.
ಇದೇ ದಿನ ಕೋಲ್ಕತ್ತಾದಲ್ಲಿ ಲೇಖಕ ಬಿಮಲ್ ಶರ್ಮಾ ಮತ್ತು ಅವರ ನೂರಾರು ಗೆಳೆಯರು ಅಲ್ಲಿನ ಸರಕಾರಕ್ಕೆ ಲೇಖನಿ ಜೊತೆಗೆ ಮನವಿ ಸಲ್ಲಿಸಲಿದ್ದಾರೆ. ಬೆಳಗಾವಿಯಲ್ಲಿ ಸರಜೂ ಕಾಟ್ಕರ್ ಮತ್ತಿತರರು, ಹೊಸಪೇಟೆಯಲ್ಲಿ ಪ್ರೊ. ರಹಮತ್ ತರಿಕೆರೆ ಹಾಗೂ ಅವರ ಗೆಳೆಯರು ಕೂಡ ಲೇಖನಿಯ ಜೊತೆಗೆ ಮನವಿ ಸಲ್ಲಿಸಲಿದ್ದಾರೆ. ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿಯೂ ಪಂಪಾರಡ್ಡಿ ಮತ್ತಿತರರು ಇಂದು ಈ ಚಳವಳಿಯಲ್ಲಿ ಪಾಲ್ಗೊಂಡಿದ್ದಾರೆ. ಈ `ಲೇಖನಿ ರಕ್ಷಿಸಿ’ ದೇಶಾದ್ಯಂತ, ರಾಜ್ಯಾದ್ಯಂತ ಇನ್ನೂ ಮುಂದುವರಿಯಲಿದೆ.
ತಾವು ಕಲಬುರ್ಗಿ ಹಾಗೂ ಗೌರಿ ಹತ್ಯಾ ಪ್ರಕರಣಗಳನ್ನು ಬೇಧಿಸಿ, ಹಂತಕರಿಗೆ ಸೂಕ್ತ ಶಿಕ್ಷೆ ಕೊಡಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ.
ಭಾರತದ ಬಹುತ್ವದ ದೇಶ. ಇಲ್ಲಿ ಮೊದಲಿನಿಂದಲೂ ವೈವಿಧ್ಯಮಯ ಭಿನ್ನ ನೆಲೆಯ ಹಲವಾರು ವಿಚಾರಧಾರೆಗಳು ಜೀವಚಿತವಾಗಿವೆ. ಲೋಕಾಯತ, ಚಾರ್ವಾಕ, ಬುದ್ಧ ಬಸವಣ್ಣ, ಗಾಂಧಿ, ಅಂಬೇಡ್ಕರ್, ಕಲ್ಬುರ್ಗಿ, ಗೌರಿ ಹೀಗೆ ಸಾಕಷ್ಟು ಜನ ಮಹಾನುಭಾವರು ನಮ್ಮ ದೇಶದ ಬಹ್ಮತ್ವಧಾರೆಯ ವೈಚಾರಿಕತೆಗೆ ಕೊಡುಗೆ ಕೊಟ್ಟಿದ್ದಾರೆ. ವಿಚಾರಗಳನ್ನು ವಿಚಾರಗಳಿಂದ ಎದುರಿಸಬೇಕು. ಅದು ಬಿಟ್ಟು ವಿಚಾರಗಳನ್ನು ಬಂದೂಕಿನಿಂದ ಕೊಲ್ಲಲು ಹೊರಡುವುದು ಹೇಡಿತನವಲ್ಲದೇ ಮತ್ತೇನಲ್ಲ. ಗೌರಿಯನ್ನು ಕೊಲ್ಲುವ ಮೂಲಕ ನಮ್ಮ ವಿಚಾರಗಳನ್ನು, ಬರಹಗಳನ್ನು ಹತ್ತಿಕ್ಕಬಹುದು ಅಂದುಕೊಂಡಿರುವ ಸನಾತನಿ ದುಷ್ಕರ್ಮಿಗಳನ್ನು ಬಂಧಿಸಿ ಶಿಕ್ಷಿಸಬೇಕು. ಆ ಮೂಲಕ ವಿಚಾರಗಳನ್ನು ಹತ್ತಿಕ್ಕುವ ವೈದಿಕ ಮನಸ್ಸುಗಳಿಗೆ ಸೂಕ್ತ ಎಚ್ಚರಿಕೆಯನ್ನು ನೀಡಬೇಕೆಂದು ಕೋರಿಕೊಳ್ಳುತ್ತೇವೆ.

ಧನ್ಯವಾದಗಳು,                                    21.09.17
ತಮ್ಮ ವಿಶ್ವಾಸಿಗಳು.                                ಬೆಂಗಳೂರು

ಸಂಪರ್ಕ ವಿಳಾಸ: ಹನುಮಂತ ಹಾಲಿಗೇರಿ, 114/351, ನಿರೀಕ್ಷಾ ಸೈಬರ್, ಬೃಂದಾವನ ನಗರ ಮುಖ್ಯ ರಸ್ತೆ, ಶ್ರೀನಗರ, ಬೆಂಗಳೂರು-19, ಮೊಬೈಲ್: 9986302947

ಹೆಸರು                            ಸಹಿ
ಪ್ರೊ. ಚಂಪಾ
.ಎನ್. ನಾಗರಾಜ್
ಪ್ರೊ. ಶಿವರಾಮಯ್ಯ
ಶ್ರೀಪಾದ ಭಟ್
ಕೆ.ಎಲ್. ಅಶೋಕ್
ಬಂಜಗೆರೆ ಜಯಪ್ರಕಾಶ್
ಬಸವರಾಜ ಸೂಳಿಭಾವಿ
ಮಂಗಳೂರು ವಿಜಯ್
ಪ್ರೊ ಎ.ಎಸ್. ಪ್ರಭಾಕರ್
ನವೀನ್ ಸೂರಿಂಜೆ
ಸಂಗಮೇಶ ಮೆಣಸಿನಕಾಯಿ
ಹನುಮಂತ ಹಾಲಿಗೇರಿ
ಚಾಂದಕವಿ
ಪ್ರಗತ ಕೆ.ಆರ್.
ಸತೀಶ್ ಜವರೇಗೌಡ
ಅನಂತ ನಾಯಕ
ಶ್ರೀನಿವಾಸ ಕರಿಯಪ್ಪ
ವಿ.ಆರ್. ಕಾರ್ಪೆಂಟರ್

Read These Next

ರಾಜ್ಯದ ಮೂರೂ ಕ್ಷೇತ್ರಗಳು ಕೈವಶ; ಉಪಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ ಎನ್‌ಡಿಎ

ರಾಜ್ಯದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆಗೆ ಕಾರಣವಾಗಿದ್ದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ...

ನ.21 ರಿಂದ ಮುರ್ಡೇಶ್ವರದಲ್ಲಿ ಮತ್ಸ ಮೇಳ; ಪ್ರಥಮ ಬಾರಿಗೆ ಉತ್ತರಕನ್ನಡದಲ್ಲಿ ಆಯೋಜನೆ; ಮೂರು ದಿನಗಳ ಕಾಲ ಮೀನು ಖಾದ್ಯ ಪ್ರಿಯರಿಗೆ ಹಬ್ಬ

ಉತ್ತರಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿಶ್ವ ಮೀನುಗಾರಿಕಾ ದಿನಾಚರಣೆಯ ಅಂಗವಾಗಿ ನ.21ರಿಂದ ನ.23ರವರೆಗೆ ...

ಶಿಗ್ಗಾಂವಿ: ಬ್ಯಾಲೆಟ್ ಬಾಕ್ಸ್‌ ಗಳು ಚರಂಡಿಯಲ್ಲಿ ಪತ್ತೆ; ಉಪಚುನಾವಣೆ ಮುಗಿದ ಮರುದಿನವೇ ನಡೆದ ಘಟನೆ

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಜಿಲ್ಲೆಯ ಯತ್ತಿನಹಳ್ಳಿ ಗ್ರಾಮದ ಬಳಿಯ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...