ಹೊಸದಿಲ್ಲಿ: ಬಹ್ರೈಚ್ ಹಿಂಸಾಚಾರದಲ್ಲಿ ಮೃತ ರಾಮ್ ಗೋಪಾಲ್ ಮಿಶ್ರಾ ಸಾವಿಗೆ ಸಂಬಂಧಿಸಿ ಸುಳ್ಳು ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ನಾಯಕಿ ನೂಪುರ್ ಶರ್ಮಾ ಸಾರ್ವಜನಿಕ ಕ್ಷಮೆಯಾಚನೆ ಮಾಡಿದ್ದಾರೆ. ಸಮಾವೇಶವೊಂದರಲ್ಲಿ ಶರ್ಮಾ, "ರಾಮ್ ಗೋಪಾಲ್ ಮಿಶ್ರಾ ಮೇಲೆ 35 ಗುಂಡುಗಳು ತಗುಲಿದ್ದು, ಅವರನ್ನು ಭೀಕರವಾಗಿ ಚಿತ್ರಹಿಂಸೆಗೊಳಪಡಿಸಲಾಗಿದೆ" ಎಂಬ ಹೇಳಿಕೆ ನೀಡಿದ್ದು, ಕೋಮು ಉದ್ವಿಗ್ನತೆಗೆ ಕಾರಣವಾಯಿತು. ಹಿಂಸಾಚಾರದ ಬಗ್ಗೆ ದೇಶದ ಕಾನೂನು ಪ್ರಶ್ನಿಸುವಂತಿಯೂ ಮಾತನಾಡಿದ ಆಕೆಯ ಈ ಹೇಳಿಕೆ ತೀವ್ರ ವಿರೋಧಕ್ಕೆ ಕಾರಣವಾಯಿತು.
ಈ ಸಂಬಂಧ ಎಕ್ಸ್ ನಲ್ಲಿ (ಹಿಂದಿನ ಟ್ವಿಟರ್) ಶರ್ಮಾ ಕ್ಷಮೆಯಾಚನೆ ಮಾಡಿ, "ನನ್ನ ಹೇಳಿಕೆ ಮಾಧ್ಯಮ ವರದಿಗಳ ಆಧಾರದ ಮೇಲೆ ನೀಡಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ವಿವರ ನನಗೆ ತಿಳಿದಿರಲಿಲ್ಲ. ಈಗ ನನಗೆ ಮಾಹಿತಿ ದೊರೆತಿದ್ದು, ನಾನು ನನ್ನ ಮಾತುಗಳನ್ನು ಹಿಂಪಡೆದು ಕ್ಷಮೆಯಾಚಿಸುತ್ತೇನೆ" ಎಂದು ಹೇಳಿದ್ದಾರೆ.
ಆಕೆಯ ಭಾಷಣದ ವೇಳೆ ಹಿಮಾಚಲ ಪ್ರದೇಶದ ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಮತ್ತು ರಾಜಸ್ಥಾನದ ಮಾಜಿ ರಾಜ್ಯಪಾಲ ಕಲ್ರಾಜ್ ಮಿಶ್ರಾ ಉಪಸ್ಥಿತರಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಪೊಲೀಸರು, "ಮಿಶ್ರಾ ಅವರಿಗೆ ಚಿತ್ರಹಿಂಸೆ ನೀಡಲಾಯಿತೆಂಬ ವರದಿಗಳು ಆಧಾರವಿಲ್ಲದವು. ಅವರ ಸಾವಿಗೆ ಗುಂಡೇಟಿನ ಗಾಯವೇ ಕಾರಣ," ಎಂದು ಸ್ಪಷ್ಟಪಡಿಸಿದರು.