ಅಯೋಧ್ಯೆ ದೇವಾಲಯದ ಸ್ವಚ್ಛತಾ ಸಿಬ್ಬಂದಿ ಮೇಲೆ ಸಾಮೂಹಿಕ ಅತ್ಯಾಚಾರ; 8 ಮಂದಿಯ ಬಂಧನ
ಲಕ್ನೋ: ಅಯೋಧ್ಯೆಯ ರಾಮಜನ್ಮಭೂಮಿ ದೇವಾಲಯದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಸರಣಿ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದಲ್ಲಿ ಎಂಟು ಮಂದಿಯನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಅಯೋಧ್ಯೆ ಜಿಲ್ಲೆಯ ಸಹಾದತ್‌ಗಂಜ್‌ನ ನಿವಾಸಿಯಾದ ವಂಶ್ ಚೌಧುರಿ ಎಂಬಾತ ತನ್ನನ್ನು ಮನರಂಜನೆಗಾಗಿ ಜಿಲ್ಲೆಯ ವಿವಿಧ ತಾಣಗಳಿಗೆ ಕರೆದೊಯ್ಯುವುದಾಗಿ ಭರವಸೆ ನೀಡಿದ್ದ. ಆತ ತನ್ನನ್ನು ಆಗಸ್ಟ್ 16ರಂದು ಅತಿಥಿ ಗೃಹವೊಂದಕ್ಕೆ ಕೊಂಡೊಯ್ದು ಅಲ್ಲಿ ಕೂಡಿ ಹಾಕಿದ್ದ ಹಾಗೂ ಇಬ್ಬರು ಸ್ನೇಹಿತರೊಂದಿಗೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ. ತನಗೆ ಲೈಂಗಿಕ ಕಿರುಕುಳ ನೀಡಲು ವಂಶ್ ಇನ್ನೂ ಮೂವರು ಗೆಳೆಯರನ್ನು ಆಹ್ವಾನಿಸಿದ್ದನೆಂದು ವಿದ್ಯಾರ್ಥಿನಿಯು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ಆನಂತರ ಆರೋಪಿಗಳು ಅತಿಥಿಗೃಹದಿಂದ ತನ್ನನ್ನು ಬಾನರ್‌ಪುರದಲ್ಲಿರುವ ಅಣೆಕಟ್ಟು ಪ್ರದೇಶಕ್ಕೆ ಕೊಂಡೊಯ್ದು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಆನಂತರ ಆಗಸ್ಟ್ 18ರಂದು ತನ್ನನ್ನು ಬಂಧಮುಕ್ತಗೊಳಿಸಿರುವುದಾಗಿ ಆಕೆ ಹೇಳಿದರು. ತನಗೆ ಲೈಂಗಿಕ ಕಿರುಕುಳ ನೀಡಿದ ಇತರ ಆರೋಪಿಗಳನ್ನು ಆಕೆ ವಿನಯಕುಮಾರ್ ಹಾಗೂ ಮುಹಮ್ಮದ್ ಶಾರಿಕ್ ಎಂದು ಗುರುತಿಸಿದ್ದಾಳೆ.
ಆರೋಪಿಗಳು ತನ್ನನ್ನು ಹಾಗೂ ಕುಟುಂಬಿಕರನ್ನು ಹತ್ಯೆಗೈಯುವ ಬೆದರಿಕೆಯೊಡ್ಡಿದ್ದರಿಂದ ಪೊಲೀಸರಿಗೆ ತಾನು ದೂರು ನೀಡಲು ಹಿಂದೇಟು ಹಾಕಿದ್ದೆ. ಆದರೆ ತಾನು ಆಗಸ್ಟ್ 25ರಂದು ದೇವಾಲಯಕ್ಕೆ ಹೋಗುತ್ತಿ ದ್ದಾಗ ವಂಶ್ ಮತ್ತೆ ತನ್ನನ್ನು ಅಪಹರಿಸಿದ್ದನು. ಆಗ ಆತನೊಂದಿಗೆ ಉದಿತ್‌ಕುಮಾರ್ ಹಾಗೂ ಸತರಾಮ್ ಚೌಧುರಿ ಮತ್ತು ಇನ್ನಿಬ್ಬರು ಅಪರಿಚಿತರಿದ್ದರು. ಅವರು ತನ್ನನ್ನು ಕಾರಿನಲ್ಲಿ ಅಪಹರಿಸಲು ಯತ್ನಿಸಿದ್ದರು. ಆದರೆ ಕಾರು ರಸ್ತೆ ವಿಭಜಕಕ್ಕೆ ಅಪ್ಪಳಿಸಿದ್ದರಿಂದ ತಾನು ಅವರ ಕೈಯಿಂದ ತಪ್ಪಿಸಿಕೊಂಡಿದ್ದಾಗಿ ಸಂತ್ರಸ್ತ ಯುವತಿಯು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.
ಸಂತ್ರಸ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಸ್ಥಳಗಳು ಅಯೋಧ್ಯೆಯ ಅತ್ಯಂತ ಬಿಗುಭದ್ರತೆಯ ಪ್ರದೇಶಗಳಾಗಿವೆ. ತಾನು ಮೊದಲು ಆಗಸ್ಟ್ 26ರಂದು ಪೊಲೀಸರಿಗೆ ದೂರು ನೀಡಿದ್ದು, ಆದರೆ ಅವರು ಪ್ರಕರಣವನ್ನು ದಾಖಲಿಸಿಕೊಳ್ಳಲಿಲ್ಲವೆಂದು ಆಕೆ ಸ್ಥಳೀಯ ವರದಿಗಾರರಿಗೆ ತಿಳಿಸಿದ್ದಾಳೆ.
ಅಯೋಧ್ಯೆಯ ಕಂಟೋನ್ವೆಂಟ್ ಪೊಲೀಸ್ ಠಾಣೆಯ ಉಸ್ತುವಾರಿ ಅಮರೇಂದ್ರ ಸಿಂಗ್ ಅವರು ಹೇಳಿಕೆಯೊಂದನ್ನು ನೀಡಿ, ಸೆಪ್ಟೆಂಬರ್ 2ರಂದು ತನಿಖೆಯ ಬಳಿಕ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಹಾಗೂ ತರುವಾಯ ಎಲ್ಲಾ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಅವರೆಲ್ಲರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಜೈಲಿನಲ್ಲಿರಿಸಲಾಗಿದೆ ಎಂದರು. ಸಂತ್ರಸ್ತೆಗೆ ಕಳೆದ ನಾಲ್ಕು ವರ್ಷಗಳಿಂದ ಆರೋಪಿ ವಂಶ್‌ನ ಪರಿಚಯವಿದ್ದ ಕಾರಣ ಆತನ ಮೇಲೆ ಆಕೆ ವಿಶ್ವಾಸವಿರಿಸಿದ್ದಳೆಂದು ಪೊಲೀಸರು ತಿಳಿಸಿದ್ದಾರೆ. ತಾನು ಅಯೋಧ್ಯೆ ನಗರದ ಪದವಿ ಕಾಲೇಜೊಂದರಲ್ಲಿ ತೃತೀಯ ವರ್ಷದ ಬಿಎ ವಿದ್ಯಾರ್ಥಿನಿಯಾಗಿದ್ದು, ರಾಮಜನ್ಮಭೂಮಿ ದೇವಾಲಯದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವುದಾಗಿ ಸಂತ್ರಸ್ತೆ ತಿಳಿಸಿದ್ದಾಳೆ.