ಗಾಝಾ ಪಟ್ಟಿ: ಗಾಝಾ ಯುದ್ಧವು ರವಿವಾರ ನೂರನೇ ದಿನಕ್ಕೆ ಕಾಲಿರಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಶನಿವಾರ ಹಮಾಸ್‌ನ್ನು ದಮನಿಸುವ ತನ್ನ ಪ್ರತಿಜ್ಞೆಯನ್ನು ಪುನರುಚ್ಚರಿಸಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯು ಗಾಝಾ ಯುದ್ಧವು ಮಾನವೀಯತೆಯನ್ನು ಕಳಂಕಿತಗೊಳಿಸುತ್ತಿದೆ ಎಂದು ಕಳವಳವನ್ನು ವ್ಯಕ್ತಪಡಿಸಿದೆ.
ವಿನಾಶಕಾರಿ ಸಂಘರ್ಷವು ಗಾಝಾದಲ್ಲಿ ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸಿದೆ. ಕೆಂಪು ಸಮುದ್ರದಲ್ಲಿ ಸರಕು ಸಾಗಣೆ ಹಡಗುಗಳ ಮೇಲೆ ದಾಳಿಗಳಿಗೆ ಪ್ರತೀಕಾರವಾಗಿ ಅಮೆರಿಕ ಮತ್ತು ಬ್ರಿಟನ್ ಪಡೆಗಳು ಶುಕ್ರವಾರ ಯಮನ್‌ನಲ್ಲಿ ಹಮಾಸ್ ಪರ ಹೌದಿ ಬಂಡುಕೋರರ ಮೇಲೆ ದಾಳಿಗಳನ್ನು ನಡೆಸಿದ ಬಳಿಕ ಪ್ರಾದೇಶಿಕ ಸಂಘರ್ಷ ಉಲ್ಬಣಗೊಳ್ಳುವ ಭೀತಿ ತೀವ್ರಗೊಂಡಿದೆ.
ಅ.7ರಂದು ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ದಾಳಿ ನಡೆಸಿ ಸುಮಾರು 1,140 ಸಾವುಗಳಿಗೆ ಕಾರಣರಾದ ಬಳಿಕ ಇಸ್ರೇಲ್ ಹಮಾಸ್‌ನ್ನು ನಾಶಗೊಳಿಸುವ ಪಣವನ್ನು ತೊಟ್ಟಿದ್ದು,ಗಾಝಾದ ಮೇಲೆ ಅದು ನಡೆಸಿದ ನಿರಂತರ ಬಾಂಬ್ ದಾಳಿಗಳಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 23,843 ಜನರು ಕೊಲ್ಲಲ್ಪಟ್ಟಿದ್ದಾರೆ.
ಇಸ್ರೇಲಿ ಪಡೆಗಳ ಮುತ್ತಿಗೆಯಿಂದಾಗಿ ಗಾಝಾದಲ್ಲಿ ಆಹಾರ, ನೀರು, ಔಷಧಿಗಳು ಮತ್ತು ಇಂಧನದ ತೀವ್ರ ಕೊರತೆಯುಂಟಾಗಿದ್ದು, ಆರೋಗ್ಯ ವ್ಯವಸ್ಥೆಯು ಕುಸಿದು ಬಿದ್ದಿದೆ.
ಗಾಝಾ ಪಟ್ಟಿಗೆ ಭೇಟಿ ನೀಡಿದ ಫೆಲೆಸ್ತೀನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಏಜೆನ್ಸಿಯ ಮುಖ್ಯಸ್ಥ ಫಿಲಿಪ್ ಲ್ಯಾಝಾರಿನಿ ಅವರು, 'ಕಳೆದ ನೂರು ದಿನಗಳಲ್ಲಿಯ ಬೃಹತ್ ಸಂಖ್ಯೆಯ ಸಾವುಗಳು, ವಿನಾಶ, ಸ್ಥಳಾಂತರ, ಹಸಿವು, ನಷ್ಟ ಮತ್ತು ದುಃಖವು ನಾವು ಹಂಚಿಕೊಂಡಿರುವ ಮಾನವೀಯತೆಯನ್ನು ಕಳಂಕಿತಗೊಳಿಸುತ್ತಿದೆ' ಎಂದು ಹೇಳಿದರು.
ಗಾಝಾದಲ್ಲಿ ಮಕ್ಕಳ ಸಂಪೂರ್ಣ ಪೀಳಿಗೆಯು ಆಘಾತಕ್ಕೊಳಗಾಗಿದೆ, ರೋಗಗಳು ಹರಡುತ್ತಿವೆ ಮತ್ತು ಸಮಯವು ಕ್ಷಾಮದತ್ತ ವೇಗವಾಗಿ ಚಲಿಸುತ್ತಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಹೇಗ್‌ನಲ್ಲಿರುವ ಅಂತರ್‌ರಾಷ್ಟ್ರೀಯ ನ್ಯಾಯಾಲಯವು ಇಸ್ರೇಲ್ ವಿಶ್ವಸಂಸ್ಥೆಯ ನರಮೇಧ ಒಪ್ಪಂದವನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿ ದಕ್ಷಿಣ ಆಫ್ರಿಕಾ ದಾಖಲಿಸಿರುವ ಪ್ರಕರಣದಲ್ಲಿ ವಾದಗಳನ್ನು ಈ ವಾರ ಆಲಿಸಿದೆ. ಗಾಝಾ ನಿವಾಸಿಗಳು ದ.ಆಫ್ರಿಕಾದ ಕ್ರಮವನ್ನು ಸ್ವಾಗತಿಸಿದ್ದಾರೆ.
ಗಾಝಾದಲ್ಲಿ ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಪ್ರಕರಣವು ಕೋರಿದೆ. ಆದರೆ ಆತ್ಮರಕ್ಷಣೆಗಾಗಿ ತಾನು ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದ್ದೇನೆ ಮತ್ತು ಅದು ಫೆಲೆಸ್ತೀನ್ ನಿವಾಸಿಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಇಸ್ರೇಲ್ ನ್ಯಾಯಾಲಯದಲ್ಲಿ ಪ್ರತಿಪಾದಿಸಿದೆ.
ಆದರೆ, ಯಾವುದೇ ನ್ಯಾಯಾಲಯ ಅಥವಾ ವಿರೋಧಿ ಗುಂಪಿನ ಸೇನೆಯು ಹಮಾಸನ್ನು ನಿರ್ನಾಮಗೊಳಿಸುವ ತನ್ನ ಗುರಿಯನ್ನು ಸಾಧಿಸುವುದರಿಂದ ಇಸ್ರೇಲ್‌ನ್ನು ತಡೆಯಲು ಸಾಧ್ಯವಿಲ್ಲ ಎಂದು ಶುಕ್ರವಾರ ಒತ್ತಿ ಹೇಳಿದ ನೆತನ್ಯಾಹು, 'ಜಯವನ್ನು ಸಾಧಿಸುವವರೆಗೆ ಯುದ್ಧವನ್ನು ಮುಂದುವರಿಸುವುದು ಅಗತ್ಯವಾಗಿದೆ ಮತ್ತು ನಾವು ಅದನ್ನು ಮಾಡುತ್ತೇವೆ. ಗಾಝಾದಲ್ಲಿ ಹೆಚ್ಚಿನ ಹಮಾಸ್ ಬೆಟಾಲಿಯನ್‌ಗಳನ್ನು ನಿರ್ನಾಮಗೊಳಿಸಲಾಗಿದೆ'' ಎಂದು ತಿಳಿಸಿದರು.