ಹೊಸದಿಲ್ಲಿ: ದಿಲ್ಲಿ ಸರಕಾರದ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿ ಸಿಬಿಐ ದಾಖಲಿಸಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಶುಕ್ರವಾರ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರವಾಲ್ ರಿಗೆ ಜಾಮೀನು ನೀಡಿದೆ. ಆದರೆ, ಅದೇ ವೇಳೆ, ಅವರು ಮುಖ್ಯಮಂತ್ರಿಯ ಕಚೇರಿಗೆ ಹೋಗಬಾರದು ಮತ್ತು ಕಡತಗಳಿಗೆ ಸಹಿ ಹಾಕಬಾರದು ಎನ್ನುವುದು ಸೇರಿದಂತೆ ಹಲವು ಶರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
ದಿಲ್ಲಿ ಮುಖ್ಯಮಂತ್ರಿಯು ಜಾಮೀನು ಪಡೆಯಲು 10 ಲಕ್ಷ ರೂ. ಮೊತ್ತದ ಒಂದು ಬಾಂಡ್ ಮತ್ತು ಅಷ್ಟೇ ಮೊತ್ತದ ಎರಡು ಭದ್ರತೆಗಳನ್ನು ಒದಗಿಸಬೇಕು ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರನ್ನು ಒಳಗೊಂಡ ನ್ಯಾಯಪೀಠವೊಂದು ಹೇಳಿದೆ. ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಈ.ಡಿ.) ದಾಖಲಿಸಿರುವ ಪ್ರಕರಣದಲ್ಲಿ ಕೇಜ್ರವಾಲ್ ರನ್ನು ಮಾರ್ಚ್ 21ರಂದು ಬಂಧಿಸಲಾಗಿತ್ತು. ಅವರಿಗೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಚಾರ ಮಾಡುವುದಕ್ಕಾಗಿ ಸುಪ್ರೀಂ ಕೋರ್ಟ್ ಮೇ 10ರಂದು 21 ದಿನಗಳ ಮಧ್ಯಂತರ ಜಾಮೀನು ನೀಡಿತ್ತು. ಬಳಿಕ ಅವರು ಜೂನ್ 2ರಂದು ಜೈಲಿಗೆ ವಾಪಸಾಗಿದ್ದು, ಅಂದಿನಿಂದ ಜೈಲಿನಲ್ಲಿದ್ದಾರೆ. ನಿರಂತರ ಜೈಲುವಾಸವು ವ್ಯಕ್ತಿಗಳ ಸ್ವಾತಂತ್ರ್ಯವನ್ನು ಅನ್ಯಾಯವಾಗಿ ಕಸಿದುಕೊಳ್ಳುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಅರವಿಂದ ಕೇಜ್ರವಾಲ್ ಸುಪ್ರೀಂ ಕೋರ್ಟ್‌ನಲ್ಲಿ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು. ಒಂದು ಅರ್ಜಿಯಲ್ಲಿ ಅವರು ತನಗೆ ಜಾಮೀನು ನಿರಾಕರಿಸಿರುವುದನ್ನು ಪ್ರಶ್ನಿಸಿದರೆ, ಇನ್ನೊಂದರಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ತನ್ನನ್ನು ಸಿಬಿಐ ಬಂಧಿಸಿರುವುದನ್ನು ಪ್ರಶ್ನಿಸಿದ್ದರು.
ಆಪ್ ಮುಖ್ಯಸ್ಥರನ್ನು ಸಿಬಿಐಯು ಜೂನ್ 26ರಂದು ಬಂಧಿಸಿತ್ತು. ಅವರು ತನ್ನ ಬಂಧನವನ್ನು ದಿಲ್ಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಹೈಕೋರ್ಟ್ ಆಗಸ್ಟ್ 5ರಂದು ತೀರ್ಪು ನೀಡಿ, ಅವರ ಬಂಧನವನ್ನು ಎತ್ತಿಹಿಡಿದಿತ್ತು. ದಿಲ್ಲಿ ಹೈಕೋರ್ಟ್ ತೀರ್ಪನ್ನು ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಸುಪ್ರೀಂ ಕೋರ್ಟ್ ಜುಲೈ 12ರಂದು ಅಕ್ರಮ ಹಣ ವರ್ಗಾವಣೆಯ ಈ.ಡಿ. ಪ್ರಕರಣದಲ್ಲಿ ಜಾಮೀನು ನೀಡಿತ್ತು.