ಗುತ್ತಿಗೆ ಪಡೆಯಲು 2,240 ಕೋಟಿ ರೂ. ಲಂಚ; ಅದಾನಿ ವಿರುದ್ಧ ಅಮೆರಿಕ ಬಂಧನ ವಾರಂಟ್
ಹೊಸದಿಲ್ಲಿ: ಸೌರ ವಿದ್ಯುತ್ ಖರೀದಿ ಒಪ್ಪಂದಗಳನ್ನು ಏರ್ಪಡಿಸಲು ಭಾರತದಲ್ಲಿ ಸರಕಾರಿ ಅಧಿಕಾರಿಗಳಿಗೆ 265 ಮಿಲಿಯ ಡಾಲರ್ (ಸುಮಾರು 2,240 ಕೋಟಿ ರೂಪಾಯಿ) ಲಂಚ ನೀಡಿರುವ ಆರೋಪದಲ್ಲಿ, ನ್ಯೂಯಾರ್ಕ್‌ನ ನ್ಯಾಯಾಲಯವೊಂದು ಬುಧವಾರ ಅದಾನಿ ಗುಂಪಿನ ಸ್ಥಾಪಕ ಗೌತಮ್ ಅದಾನಿ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ.
ಅಮೆರಿಕದ ಕಾನೂನು ಇಲಾಖೆಯು ಅದಾನಿ, ಅವರ ಸಹೋದರನ ಮಗ ಸಾಗರ್ ಅದಾನಿ ಮತ್ತು ಅದಾನಿ ಗ್ರೀನ್ ಕಂಪೆನಿಯ ಇತರ ಹಿರಿಯ ಅಧಿಕಾರಿಗಳು ಸೇರಿದಂತೆ 8 ಮಂದಿಯ ವಿರುದ್ದ ನ್ಯೂಯಾರ್ಕ್‌ನ ಜಿಲ್ಲಾ ನ್ಯಾಯಾಲಯವೊಂದರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ ಬಳಿಕ, ನ್ಯಾಯಾಲಯವು ಅದಾನಿ ಮತ್ತು ಅವರ ಸಹೋದರನ ಮಗ ಸಾಗರ್ ಆದಾನಿಯ ಬಂಧನಕ್ಕೆ ವಾರಂಟ್‌ಗಳನ್ನು ಹೊರಡಿಸಿತು. ಬಂಧನ ವಾರಂಟ್‌ಗಳನ್ನು ವಿದೇಶಿ ಕಾನೂನು ಅನುಷ್ಠಾನ ಇಲಾಖೆಗೆ ಹಸ್ತಾಂತರಿಸಲು ಪ್ರಾಸಿಕ್ಯೂಟರ್‌ಗಳು ನಿರ್ಧರಿಸಿದ್ದಾರೆ. ಅದಾನಿ ಗ್ರೀನ್ ಕಂಪೆನಿಯು ವಿದ್ಯುತ್ ಖರೀದಿ ಒಪ್ಪಂದಗಳಿಗಾಗಿ ಭಾರತದಲ್ಲಿ ಅಧಿಕಾರಿಗಳಿಗೆ ಲಂಚ ನೀಡಿದ್ದರೂ, ಅವೇ ಯೋಜನೆಗಳಿಗೆ ಅಮೆರಿಕದಲ್ಲಿ ನಿಧಿ ಸಂಗ್ರಹಿಸುವ ಉದ್ದೇಶದಿಂದ, ಕಂಪೆನಿಯು ಅಮೆರಿಕದ ಲಂಚ ನಿಗ್ರಹ ಕಾನೂನುಗಳನ್ನು ಪಾಲಿಸಿದೆ ಎಂಬ ಸುಳ್ಳು ಭರವಸೆಯನ್ನು ಆರೋಪಿಗಳು ನೀಡಿದ್ದಾರೆ ಹಾಗೂ ಆ ಮೂಲಕ ಅಮೆರಿಕದ ಹೂಡಿಕೆದಾರರನ್ನು ವಂಚಿಸಿದ್ದಾರೆ ಎಂಬ ಆರೋಪವನ್ನು ಅವರ ವಿರುದ್ದ ಹೊರಿಸಲಾ ಗಿದೆ.
ಇಂಥ ಸುಳ್ಳು ಭರವಸೆಯನ್ನು ಅಮೆರಿಕದ ಫೆಡರಲ್ ಕಾನೂನಿನಡಿ ವಂಚನೆ ಎಂಬುದಾಗಿ ಪರಿಗಣಿಸಲಾಗುತ್ತದೆ. ಅದು ಸಾಬೀತಾದರೆ ಆರೋಪಿಗಳು ನ್ಯಾಯಾಲಯದ ಕ್ರಿಮಿನಲ್ ದಂಡನೆಗೆ ಒಳಪಡಬಹುದು. ಅಂದರೆ ಅವರ ವಿರುದ್ದ ಆರ್ಥಿಕ ದಂಡ ವಿಧಿಸಬಹುದಾಗಿದೆ ಮತ್ತು ಅಮೆರಿಕದ ಶೇರು ವಿನಿಮಯ ಕೇಂದ್ರದಲ್ಲಿ ನೋಂದಾಯಿಸಲ್ಪಟ್ಟಿರುವ ಕಂಪೆನಿಗಳಲ್ಲಿ ಅವರು ನಿರ್ದೇಶಕರಾಗಿ ಅಥವಾ ಅಧಿಕಾರಿಗಳಾಗಿ ಸೇವೆ ಸಲ್ಲಿಸುವುದನ್ನು ನಿಷೇಧಿಸಬಹುದಾಗಿದೆ.
ರಾಜ್ಯಗಳ ವಿದ್ಯುತ್ ವಿತರಣಾ ಕಂಪೆನಿಗಳು (ಡಿಸ್ತಾಮ್ಗಳು) ಅದಾನಿ ಗ್ರೀನ್ ಕಂಪೆನಿಯು ಉತ್ಪಾದಿಸುವ ಸೌರ ವಿದ್ಯುತ್ತನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದಲ್ಲಿ ಖರೀದಿಸುವಂತೆ ಮಾಡಲು ಒಡಿಶಾ ಮತ್ತು ಆಂಧ್ರಪ್ರದೇಶಗಳ ಸರಕಾರಿ ಅಧಿಕಾರಿಗಳಿಗೆ ಲಂಚ ನೀಡಲಾಗಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಇದೇ ಕಾರಣಕ್ಕಾಗಿ ಅದಾನಿ ಗ್ರೀನ್ ಕಂಪೆನಿಯ ಅಧಿಕಾರಿಗಳು ತಮಿಳುನಾಡು, ಛತ್ತೀಸ್ ಗಢ ಹಾಗೂ ಜಮ್ಮು ಮತ್ತು ಕಾಶ್ಮೀರದ ಸರಕಾರಿ ಅಧಿಕಾರಿಗಳಿಗೂ ಲಂಚ ನೀಡಿರುವ ಸಾಧ್ಯತೆಯಿದೆ ಎಂಬುದಾಗಿಯೂ ಆರೋಪದಲ್ಲಿ ಹೇಳಲಾಗಿದೆ.
ಲಂಚಗಳನ್ನು 2021ರ ಮಧ್ಯ ಭಾಗದಿಂದ ಆ ವರ್ಷದ ಕೊನೆಯವರೆಗಿನ ಅವಧಿಯಲ್ಲಿ ನೀಡಲಾಗಿದೆ ಎನ್ನಲಾಗಿದೆ. ಇಲ್ಲಿ ಹೆಸರಿಸಲಾಗಿರುವ ನಾಲ್ಕು ರಾಜ್ಯಗಳಲ್ಲಿ ಆ ಅವಧಿಯಲ್ಲಿ ಕ್ರಮವಾಗಿ ಬಿಜು ಜನತಾ ದಳ, ವೈಎಸ್‌ಆರ್ ಕಾಂಗ್ರೆಸ್, ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷಗಳ ಸರಕಾರಗಳಿದ್ದವು. ಅದೇ ವೇಳೆ, ಜಮ್ಮು ಮತ್ತು ಕಾಶ್ಮೀರವನ್ನು ಲೆಫ್ಟಿನೆಂಟ್ ಗವರ್ನರ್ ಮೂಲಕ ಕೇಂದ್ರದ ಬಿಜೆಪಿ ಸರಕಾರ ಆಳುತ್ತಿತ್ತು. "2020 ಮತ್ತು 2024ರ ನಡುವಿನ ಅವಧಿಯಲ್ಲಿ, ಅದಾನಿ ಗ್ರೀನ್ ಮತ್ತು ಅದರೊಂದಿಗೆ ಗುರುತಿಸಿಕೊಂಡಿರುವ ಸಂಸ್ಥೆಗಳ ಹಿರಿಯ ಅಧಿಕಾರಿಗಳು, ಕಂಪೆನಿಯ ಲಂಚ-ವಿರೋಧಿ ನೀತಿಗಳ ಬಗ್ಗೆ ಅಮೆರಿಕದ ಹೂಡಿಕೆದಾರರು ಮತ್ತು ಅಂತರ್ ರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಗೆ ಸುಳ್ಳು ಮಾಹಿತಿ ನೀಡಿದ್ದಾರೆ'' ಎಂದು ನ್ಯೂಯಾರ್ಕ್ ಈಸ್ಟರ್ನ್ ಡಿಸ್ಟ್ರಿಕ್ಟ್ ನ್ಯಾಯಾಲಯಕ್ಕೆ ಸಂಬಂಧಿಸಿದ ಅಮೆರಿಕದ ಅಟಾರ್ನಿ ಕಚೇರಿ ತನ್ನ ದೋಷಾರೋಪ ಪಟ್ಟಿಯಲ್ಲಿ ಹೇಳಿದೆ.
"ಭಾರತೀಯ ಸರಕಾರಿ ಅಧಿಕಾರಿಗಳಿಗೆ ಲಂಚ ನೀಡಿರುವುದನ್ನು ಅದಾನಿ ಗ್ರೀನ್ನ ಹಿರಿಯ ಅಧಿಕಾರಿಗಳು ಈ ಹೂಡಿಕೆದಾರರಿಂದ ಗೌಪ್ಯವಾಗಿಟ್ಟಿದ್ದರು. ಕಂಪೆನಿಯ ಹಸಿರು ಇಂಧನ ಯೋಜನೆಗಳಿಗಾಗಿ ನೂರಾರು ಕೋಟಿ ಡಾಲರ್ ನಿಧಿ ಸಂಗ್ರಹಿಸುವ ಉದ್ದೇಶದಿಂದ ಅವರು ಸುಳ್ಳು ಹೇಳಿದ್ದಾರೆ'' ಎಂದು ದೋಷಾರೋಪ ಪಟ್ಟಿ ಹೇಳಿದೆ. ಇದರ ಜೊತೆಗೆ, ಇದೇ ಆರೋಪಗಳಿಗೆ ಸಂಬಂಧಿಸಿ, "ಬೃಹತ್ ಭ್ರಷ್ಟಾಚಾರ ಯೋಜನೆ''ಯೊಂದನ್ನು ನಡೆಸಿರುವುದಕ್ಕಾಗಿ ಅದಾನಿ, ಅವರ ಸಹೋದರನ ಮಗ ಹಾಗೂ ಅದಾನಿ ಗ್ರೀನ್ ಕಾರ್ಯಕಾರಿ ನಿರ್ದೇಶಕ ಸಾಗರ್ ವಿರುದ್ಧ ಅಮೆರಿಕ ಶೇರು ವಿನಿಮಯ ಆಯೋಗ (ಎಸ್‌ಇಸಿ)ವು ಪ್ರತ್ಯೇಕ ದೂರೊಂದನ್ನು ಸಲ್ಲಿಸಿದೆ. "ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಹೇಳಿಕೆಗಳ ಆಧಾರದಲ್ಲಿ ಅಮೆರಿಕದ ಹೂಡಿಕೆದಾರರಿಂದ 175 ಮಿಲಿಯ ಡಾಲರ್ (ಸುಮಾರು 1,450 ಕೋಟಿ ರೂಪಾಯಿ) ಸಂಗ್ರಹಿಸಲಾಗಿದೆ ಎಂದು ಅದು ತನ್ನ ದೂರಿನಲ್ಲಿ ಆರೋಪಿಸಿದೆ.
ಅದೇ ವೇಳೆ, ಅಝರ್ ಪವರ್ ಗ್ಲೋಬಲ್ ಲಿಮಿಟೆಡ್ ಸಿರಿಲ್ ಕಬಾನೀಸ್ ವಿರುದ್ದವೂ ಅಮೆರಿಕದ ಕಾನೂನು ಇಲಾಖೆ ಮತ್ತು ಶೇರು ವಿನಿಮಯ ಆಯೋಗ ಎರಡೂ ದೋಷಾರೋಪ ಹೊರಿಸಿವೆ. ಈ ಕಂಪೆನಿಯು ಲಂಚದ ಏರ್ಪಾಡುಗಳನ್ನು ಮಾಡಿದೆ ಮತ್ತು ಅಮೆರಿಕದ ವಿದೇಶಿ ಭ್ರಷ್ಟಾಚಾರ ಹವ್ಯಾಸಗಳ ಕಾಯ್ದೆಯನ್ನು ಉಲ್ಲಂಘಿಸಿದೆ ಎಂಬುದಾಗಿ ಆರೋಪಿಸಲಾಗಿದೆ. ಈ ಕಂಪೆನಿಯನ್ನು ಮಾರಿಶಸ್‌ನ ಕಾನೂನುಗಳ ಅಡಿಯಲ್ಲಿ ಸ್ಥಾಪಿಸಲಾಗಿದೆ ಮತ್ತು ಎರಡು ಕೆನಡಿಯನ್ ಪೆನ್ನನ್ ಫಂಡ್ ಗಳು ಅದರ ಮಾಲೀಕರಾಗಿವೆ ಹಾಗೂ ಭಾರತದಲ್ಲಿ ಸೌರ ವಿದ್ಯುತ್ ಉತ್ಪಾದಿಸಿ ಮಾರಾಟ ಮಾಡುತ್ತದೆ ಎಂಬುದಾಗಿ ಶೇರು ವಿನಿಮಯ ಆಯೋಗ ಹೇಳಿದೆ. ಕೇಂದ್ರ ಸರಕಾರದ ಅದೇ ಸೌರ ಇಂಧನ ಯೋಜನೆ ಯಡಿಯಲ್ಲಿ ಅಝರ್ ಕಂಪೆನಿಗೂ ಗುತ್ತಿಗೆಗಳು ಸಿಕ್ಕಿದ್ದವು.