ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ
ಗಾಝಾ: ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ಪ್ರದೇಶಕ್ಕೆ ಭೇಟಿ ನೀಡಿದ ವಿಶ್ವಸಂಸ್ಥೆಯ ಶಸಂಸೆಯ ಜಂಟಿ ಜಂಟಿ ಮೌಲ್ಯಮಾಪನ ತಂಡ ಗಾಝಾಪಟ್ಟಿಯಲ್ಲಿ, ವಿಶೇಷವಾಗಿ ಅಲ್-ಶಿಫಾ ಆಸ್ಪತ್ರೆಯ ಪ್ರದೇಶದಲ್ಲಿ ಇರುವ ಗಂಭೀರ ಮಾನವೀಯ ಬಿಕ್ಕಟ್ಟಿನ ಬಗ್ಗೆ ವರದಿ ನೀಡಿದೆ.
ಇಸ್ರೇಲ್ ಭದ್ರತಾ ಪಡೆಗಳ ಸಮನ್ವಯ ದೊಂದಿಗೆ ನಡೆಸಿದ ಮೌಲ್ಯಮಾಪನದಲ್ಲಿ ಅಲ್ ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಲಾಗಿದೆ. ಆಸ್ಪತ್ರೆಯ ಸಮೀಪದಲ್ಲೇ ನಡೆಯುತ್ತಿರುವ ಭಾರೀ ಘರ್ಷಣೆ ಕಳವಳಕಾರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
'ಶೆಲ್ ದಾಳಿ ಮತ್ತು ಗುಂಡಿನ ದಾಳಿಗಳ ಚಿಹ್ನೆಗಳು ಸ್ಪಷ್ಟವಾಗಿದೆ. ಆಸ್ಪತ್ರೆಯ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ ಕಂಡುಬಂದಿದೆ ಮತ್ತು ಇಲ್ಲಿ 80ಕ್ಕೂ ಅಧಿಕ ಜನರನ್ನು ಸಮಾಧಿ ಮಾಡಲಾಗಿದೆ ಎಂಬ ಮಾಹಿತಿ ದೊರಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಒಂದು ಕಾಲದಲ್ಲಿ ಗಾಝಾದ ಅತೀ ದೊಡ್ಡ ಮತ್ತು ಅತ್ಯಾಧುನಿಕ ಆಸ್ಪತ್ರೆ ಎಂಬ ಹೆಗ್ಗಳಿಕೆ ಹೊಂದಿದ್ದ ಅಲ್-ಶಿಫಾ ಶುದ್ಧ ನೀರು, ಇಂಧನ, ಔಷಧಿಗಳು, ಆಹಾರ ಕೊರತೆಯನ್ನು ಎದುರಿಸುತ್ತಿದೆ. ಹೊಸ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಗಾಝಾದಲ್ಲಿರುವ ಇಂಡೋನೇಶ್ಯ ಆಸ್ಪತ್ರೆಯಲ್ಲಿ ಈಗಾಗಲೇ ಹೆಚ್ಚುವರಿ ರೋಗಿಗಳಿದ್ದು ಅಲ್-ಶಿಫಾ ಆಸ್ಪತ್ರೆಯ ರೋಗಿ ಗಳನ್ನು ಈಗ ಇಂಡೋನೇಶ್ಯ ಆಸ್ಪತ್ರೆಗೆ ದಾಖಲಿಸಲು ಸೂಚಿಸಲಾಗುತ್ತಿದೆ. ಪ್ರಸ್ತುತ ಅಲ್-ಶಿಫಾದಲ್ಲಿ 25 ಆರೋಗ್ಯ ಕಾರ್ಯಕರ್ತರು, ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ 32 ಶಿಶುಗಳು, ತೀವ್ರ ನಿಗಾ ಘಟ ಕದಲ್ಲಿರುವ ಇಬ್ಬರ ಸಹಿತ 291 ರೋಗಿಗಳು ಉಳಿದಿದ್ದಾರೆ. 22 ಡಯಾಲಿಸಿಸ್ ರೋಗಿಗಳು ಆಸ್ಪತ್ರೆಯ ಪ್ರವೇಶಕ್ಕಾಗಿ ಅನುಮತಿಯ ನಿರೀಕ್ಷೆಯಲ್ಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಆಸ್ಪತ್ರೆಯಲ್ಲಿ ಉಳಿದಿರುವ ರೋಗಿಗಳು, ಅವರ ಕುಟುಂಬದವರು, ಸಿಬ್ಬಂದಿಯನ್ನು ತಕ್ಷಣವೇ ಸ್ಥಳಾಂತರಿಸಲು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇತರ ಸಂಸ್ಥೆಗಳು ತುರ್ತಾಗಿ ಯೋಜನೆಯನ್ನು ರೂಪಿಸುತ್ತಿವೆ. ಸುರಕ್ಷಿತ ಮಾರ್ಗದ ಖಾತರಿ ದೊರೆತರೆ ಮುಂದಿನ 72 ಗಂಟೆಗಳಲ್ಲಿ ರೋಗಿ ಗಳನ್ನು ಇತರ ಆಸ್ಪತ್ರೆಗಳಿಗೆ ಸಾಗಿಸಲು ಹೆಚ್ಚುವರಿ ಕಾರ್ಯಾಚರಣೆಯನ್ನು ವ್ಯವಸ್ಥೆಗೊಳಿಸಲಾಗಿದೆ. ಗಾಝಾ ಪ್ರದೇಶದ ಹಲವಡೆ ಆರೋಗ್ಯ ಪರಿಸ್ಥಿತಿ ಹದಗೆಟ್ಟಿದ್ದು ತಕ್ಷಣ ಯುದ್ಧವಿರಾಮ ಜಾರಿಯಾಗಬೇಕು ಎಂದು ವಿಶ್ವಸಂಸ್ಥೆ ಆಗ್ರಹಿಸಿದೆ.