• ಎಂ.ಆರ್.ಮಾನ್ವಿ.
ಭಟ್ಕಳ: ಶಾಲೆಗಳು ಆರಂಭವಾಗಿ ಎರಡು ತಿಂಗಳು ಕಳೆದರೂ ಇದುವರೆಗೂ ರಾಜ್ಯದ 559 ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಉರ್ದು ಮಾಧ್ಯಮ ಶಾಲೆಗಳಿಗೆ ಪಠ್ಯಪುಸ್ತಕ ದೊರೆಯದೆ ವಿದ್ಯಾರ್ಥಿಗಳೂ, ಶಿಕ್ಷಕರು ಹಾಗೂ ಪಾಲಕರು ಅಂತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಉತ್ತರಕನ್ನಡ ಜಿಲ್ಲೆಯೊಂದರಲ್ಲೇ 6 ಉರ್ದು ಮಾಧ್ಯಮ ಸರ್ಕಾರಿ ಪ್ರೌಢಶಾಲೆಗಳು, 8 ಅನುದಾನಿತ ಹಾಗೂ 3 ಅನುದಾನ ರಹಿತ ಒಟ್ಟು 17ಉರ್ದು ಮಾಧ್ಯಮ ಶಾಲೆಗಳಿದ್ದು 2371 ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ಈಗಾಗಲೆ ಕನ್ನಡ ಹಾಗೂ ಆಂಗ್ಲ ಮಾಧ್ಯಮದ ಎಲ್ಲ ವಿಷಯದ ಪಠ್ಯಪುಸ್ತಕಗಳು ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ತಲುಪಿದ್ದು ಉರ್ದು ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಮಾತ್ರ ಪಠ್ಯಪುಸ್ತಕಗಳಿಲ್ಲದೆ ಅತಂತ್ರರಾಗಿದ್ದಾರೆ. 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ದೊರೆಯದೆ ಇರುವುದರಿಂದ ಎಫ್.ಎ1(ರೂಪಣಾತ್ಮಕ ಪರೀಕ್ಷೆ)ಗೆ ತೊಂದರೆಯಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ರಾಜ್ಯದ ಉರ್ದು ಮಾಧ್ಯಮ ಶಾಲೆಗಳು ದಯಾನೀಯ ಸ್ಥಿತಿಯಲ್ಲಿದ್ದು ಕೆಲವೊಂದು ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಬಾಗಿಲು ಹಾಕಿಕೊಂಡಿವೆ. ಈ ರೀತಿಯ ಸ್ಥಿತಿ ಮುಂದುವರೆದರೆ ಅಳಿದುಳಿದ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚಲ್ಪಡುವಂತಹ ಸ್ಥಿತಿ ಎದುರಾಗಲಿದೆ.
ಸರ್ಕಾರದ ಮಟ್ಟದಲ್ಲಿ ಶಿಕ್ಷಣ ಸಚಿವರು, ಅಧಿಕಾರಿಗಳು ಮೇ ತಿಂಗಳೊಳಗೆ ರಾಜ್ಯದ ಎಲ್ಲ ಶಾಲೆಗಳಿಗೆ ಪಠ್ಯಪುಸ್ತಕ ರವಾನೆ ಮಾಡುಲಾಗುವುದು ಎಂಬ ಹೇಳಿಕೆಗಳನ್ನು ನೀಡುತ್ತಾರೆ ಹೊರತುಪಡಿಸಿ ಅದನ್ನು ಕಾರ್ಯಗತ ಮಾಡದೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಅಡಕತ್ತರಿಯಲ್ಲಿ ಹಾಕುತ್ತಿದ್ದಾರೆ.
ಈ ಕುರಿತಂತೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿರುವ ಭಟ್ಕಳದ ಇಸ್ಲಾಮಿಯ ಆಂಗ್ಲೋ ಉರ್ದು ಪ್ರೌಢಶಾಲೆಯ ಮುಖ್ಯಾಧ್ಯಾಪಕ ಶಬ್ಬಿರ್ ದಫೆದಾರ್, ಕಳೆದ ಎರಡು ತಿಂಗಳಿಂದ ಪುಸ್ತಕಗಳಿಲ್ಲದೆ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿದೆ. ಗಣಿತ, ವಿಜ್ಞಾನ, ಹಾಗೂ ಸಮಾಜ ವಿಜ್ಞಾನ ವಿಷಯದ ಪಠ್ಯಪುಸ್ತಕಗಳು ಇಲ್ಲದೆ ಶಿಕ್ಷಕರು ಬೋಧನೆ ಮಾಡಲು ತೊಂದರೆಯಾಗುತ್ತಿದೆ. ಕೋರ್ ವಿಷಯಗಳ ಪಠ್ಯಕ್ರಮ ಬದಲಾಗಿದ್ದರಿಂದ ಹಳೆಯ ಪುಸ್ತಕಗಳು ಕೂಡ ಉಪಯೋಗಕ್ಕೆ ಬಾರದಂತಾಗಿವೆ. ಭಾಷಾ ವಿಷಯಗಳನ್ನು ಕಳೆದ ವರ್ಷದ ವಿದ್ಯಾರ್ಥಿಗಳಿಂದ ಪಡೆದು, ಅನ್ ಲೈನ್ ಮೂಲಕವೂ ಪಠ್ಯವನ್ನು ಡೌನ್‍ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಝೆರಾಕ್ಸ್ ಪ್ರತಿ ನೀಡಿದ್ದೇವೆ. ಎಲ್ಲ ವಿದ್ಯಾರ್ಥಿಗಳಿಗೆ ಸಾಧ್ಯವಾಗದಿದ್ದರೂ ಕೆಲ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಕಡಿಮೆಯಾಗುತ್ತಿದೆ ಎಂದರು.
ಪಠ್ಯಪುಸ್ತಕ ಸಮಸ್ಯೆ ಕುರಿತಂತೆ ಉತ್ತರಕನ್ನಡ ಜಿಲ್ಲಾ ಉಪನಿರ್ದೇಶಕ ಎನ್.ಜಿ.ನಾಯಕ ಹೇಳಿದ್ದು ಇಷ್ಟು. ‘ಉರ್ದು ಮಾಧ್ಯಮ ಪಠ್ಯಪುಸ್ತಕಗಳಲ್ಲಿ ಕೆಲವೊಂದು ವಿಷಯದ ಪುಸ್ತಕಗಳನ್ನು ಶಾಲೆಗಳಿಗೆ ರವಾನಿಸಲಾಗಿದೆ. ಇನ್ನುಳಿದ ಕೆಲ ವಿಷಯಳ ಪಠ್ಯಪುಸ್ತಕಗಳನ್ನು ಕೂಡಲೆ ಕಳುಹಿಸುವ ವವಸ್ಥೆ ಮಾಡಲಾಗುವುದು ಎನ್ನುತ್ತಾರೆ
ಮೇ ತಿಂಗಳಲ್ಲಿ ಚುನಾವಣೆ ಬಂದಿದ್ದರಿಂದಾಗಿ ಪಠ್ಯಪುಸ್ತಕಗಳನ್ನು ಮುದ್ರಿಸುವ ಸರ್ಕಾರಿ ಪ್ರೆಸ್ ಉರ್ದು ಮಾಧ್ಯಮ ಪಠ್ಯಗಳನ್ನು ಮುದ್ರಿಸಲು ತಡವಾಗಿದ್ದ ತಾಂತ್ರಿಕ ಕಾರಣದಿಂದಾಗಿ ಉರ್ದು ಮಾಧ್ಯಮ ಪಠ್ಯಪುಸ್ತಕಗಳನ್ನು ಇನ್ನೂ ಸಹ ಮುದ್ರಣಗೊಂಡಿಲ್ಲ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇತರೆ ಕನ್ನಡ ಹಾಗೂ ಆಂಗ್ಲ ಪಠ್ಯಪುಸ್ತಕಗಳು ಬೇಗನೆ ಮುದ್ರಣಗೊಂಡಿದ್ದು ಉರ್ದು ಮಾಧ್ಯಮ ಮುದ್ರಣಕ್ಕೆ ಸರ್ಕಾರ ಏಕಿಷ್ಟಿ ಅನಾಸಕ್ತಿ ಬೆಳೆಸಿಕೊಂಡಿದೆ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಉಂಟಾಗುತ್ತಿದೆ.
ಸಮುದಾಯದ ಮುಖಂಡರು, ಮುಸ್ಲಿಮ್ ರಾಜಕೀಯ ನಾಯಕರು, ಹಾಗೂ ಶಿಕ್ಷಣ ಸಂಘಟನೆಗಳು ನಿಷ್ಕ್ರೀಯರಾಗಿದ್ದು ತಮ್ಮ ದ್ವನಿಯನ್ನು ಸರ್ಕಾರದ ಮಟ್ಟದಲ್ಲಿ ಧ್ವನಿಸಲು ವಿಫಲರಾಗುತ್ತಿರುವುದಕ್ಕೆ ಸರ್ಕಾರ ಉರ್ದು ಹಾಗೂ ಮುಸ್ಲಿಮ್ ಸಮುದಾಯದ ಬಗೆಗಿನ ಮಲತಾಯಿ ದೋರಣಗೆ ಕಾರಣವೆನ್ನಲಾಗುತ್ತಿದೆ.
ರಾಜ್ಯ ಉರ್ದು ಮತ್ತು ಇತರ ಅಲ್ಪಸಂಖ್ಯಾತ ನಿರ್ದೇಶನಾಲಯದ ಅಂತರಜಾಲ ತಾಣದಲ್ಲಿರುವ ಮಾಹಿತಿಯಂತೆ ರಾಜ್ಯದಲ್ಲಿ 270ಸರಕಾರಿ ಉರ್ದು ಮಾಧ್ಯಮ ಪ್ರೌಢಶಾಲೆಗಳಿದ್ದು 22269 ವಿದ್ಯಾರ್ಥಿಗಳು, ಹಾಗೂ 2401 ಶಿಕ್ಷಕರು, 135 ಅನುದಾನಿತ ಉರ್ದು ಪ್ರೌಢಶಾಲೆಗಳಲ್ಲಿ 21036 ವಿದ್ಯಾರ್ಥಿಗಳು, 1162 ಶಿಕ್ಷಕರು ಮತ್ತು 154 ಅನುದಾನ ರಹಿತ ಉರ್ದು ಮಾಧ್ಯಮ ಪ್ರೌಢಶಾಲೆಗಳಲ್ಲಿ 5753 ವಿದ್ಯಾರ್ಥಿಗಳು, 739 ಶಿಕ್ಷಕರು ಸೇರಿದಂತೆ ರಾಜ್ಯದಲ್ಲಿ ಉರ್ದು ಮಾಧ್ಯಮ ಪ್ರೌಢಶಾಲೆಗಳಲ್ಲಿ 50ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಪಠ್ಯಪುಸ್ತಕ ವಿಳಂಬದಿಂದಾಗಿ ಈ ಎಲ್ಲ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರು ತಮ್ಮ ಮಕ್ಕಳ ಭವಿಷ್ಯವನ್ನು ಕಂಡು ಚಿಂತಿಸುವಂತೆ ಮಾಡಿದೆ.