ಕಾರವಾರ: ಅನುಸೂಚಿತ ಜಾತಿ ಮತ್ತು ಪಂಗಡ ಉಪ ಹಂಚಿಕೆ ಯೋಜನೆಯಲ್ಲಿ 100% ಗುರಿ ಸಾಧಿಸಿ : ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ
ಕಾರವಾರ:- ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಎಲ್ಲಾ ಇಲಾಖೆಗಳಲ್ಲಿ ಅನುಸೂಚಿತ ಜಾತಿ ಉಪ ಹಂಚಿಕೆ ಮತ್ತು ಅನುಸೂಚಿತ ಪಂಗಡ ಉಪ ಹಂಚಿಕೆ ಯೋಜನೆಯಡಿ ಮೀಸಲಿಟ್ಟಿರುವ ಅನುದಾನವನ್ನು ಸಂಪೂರ್ಣವಾಗಿ ವೆಚ್ಚ ಮಾಡುವುದರ ಮೂಲಕ, ಯೋಜನೆಯಲ್ಲಿ ಸಂಪೂರ್ಣ ಗುರಿ ಸಾಧಿಸಿ, ಈ ಯೋಜನೆಯ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಅನುಸೂಚಿತ ಜಾತಿ ಉಪ ಹಂಚಿಕೆ ಮತ್ತು ಅನುಸೂಚಿತ ಪಂಗಡ ಉಪ ಹಂಚಿಕೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲ್ಲಾ ಇಲಾಖೆಗಳು ಈ ಯೋಜನೆಯಡಿ ಮೀಸಲಿಟ್ಟಿರುವ ಅನುದಾನದಲ್ಲಿ ಪ.ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಅವರ ಅಭಿವೃದ್ಧಿಗೆ ನೆರವು ನೀಡಬೇಕು. ಫಲಾನುಭವಿ ಆಧಾರಿತ ಯೋಜನೆಗಳು ಮತ್ತು ಸಮುದಾಯದ ಹಂತದಲ್ಲಿ ಕೈಗೊಳ್ಳುವ ಕಾಮಗಾರಿಗಳಲ್ಲಿ ಯಾವುದೇ ದೂರುಗಳು ಬಾರದಂತೆ ಪಾರದರ್ಶಕವಾಗಿ ಕಾರ್ಯಕ್ರಮಗಳನ್ನು ರೂಪಿಸಿ, ನಿಗಧಿತ ಅವಧಿಯೊಳಗೆ ಸೌಲಭ್ಯಗಳನ್ನು ದೊರಕಿಸುವಂತೆ ಸೂಚಿಸಿದರು.
ಯೋಜನೆಯಡಿ ಇದುವರೆಗೆ ಬಿಡುಗಡೆಯಾಗಿರುವ ಅನುದಾನದಲ್ಲಿ ಶೇ.100 ಗುರಿ ಸಾಧಿಸುವಂತೆ ಹಾಗೂ ಮತ್ತು ಯಾವುದೇ ಕಾರಣಕ್ಕೂ ಅನುದಾನವನ್ನು ವ್ಯರ್ಥ ಮಾಡದಂತೆ ತಿಳಿಸಿದ ಅವರು, ಇಂಜಿನಿಯರಿಗ್ ವಿಭಾಗಗಳಲ್ಲಿ ಕಳೆದ ಸಾಲಿನಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಮುಕ್ತಾಯಗೊಳಿಸಬೇಕು. ಯೋಜನೆಯ ಪ್ರಗತಿ ಕುರಿತಂತೆ ಪ್ರತೀ ತಿಂಗಳು ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.