ಪಾರ್ಶ್ವವಾಯು ಪೀಡಿತರಾಗಿದ್ದ ರಿಯಾದ್ ಉದ್ಯೋಗಿ ವಿಮಾನದ ಮೂಲಕ ತಾಯ್ನಾಡಿಗೆ. ಮಾನವೀಯತೆ ಮೆರೆದ ವೈದ್ಯರ ಮತ್ತು ಸಮಾಜಸೇವಕ ಬಳಗ.
ಮಂಗಳೂರು : ಕಳೆದ ಮೂರುವರೆ ತಿಂಗಳಿಂದ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದ ಕುಂದಾಪುರ ಮೂಲದ ವ್ಯಕ್ತಿಯೊಬ್ಬರನ್ನ ಕರಾವಳಿಯ ವೈದ್ಯರು ಮತ್ತು ಸಮಾಜ ಸೇವಕರು ರಾಜ್ಯಕ್ಕೆ ತಂದು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಕುಂದಾಪುರದ ಚಂದ್ರಶೇಖರ ಪಾಂಡುರಂಗ ಸಾರಂಗ ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದವರು. ಕಳೆದ 35 ವರ್ಷಗಳಿಂದ ಇವರು ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಡಿಸೆಂಬರ್ 5ರಂದು ಪಾರ್ಶ್ವವಾಯುವಿಗೆ ಒಳಗಾಗಿದ್ದರಿಂದ ಯಾವುದೇ ಅಂಗಾಗಗಳು ಕೆಲಸ ನಿರ್ವಹಿಸದೇ, ಕೇವಲ ಕಣ್ಸನ್ನೆ ಮೂಲಕ ತಿಳಿಸುತ್ತಿದ್ದಾರೆ.
ನಾಲ್ಕು ವರ್ಷದ ಹಿಂದೆ ಭಟ್ಕಳ ಮೂಲದ ಅಬುಬಕರ್ ಎಂಬುವವರು ಅನಾರೋಗ್ಯಕ್ಕೀಡಾದಾಗ ಭಟ್ಕಳ ಮತ್ತು ಮುರ್ಡೇಶ್ವರ ಜನರ ಸಹಾಯದಿಂದ ದುಬೈನಿಂದ ಕರೆತರಲಾಗಿತ್ತು.
ಭಾರತೀಯ ರಾಯಭಾರಿ ಕಚೇರಿ ಮೂಲಕ ಹಲವು ಬಾರೀ ಪ್ರಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ. ಬುಧವಾರ ನಸುಕಿನ ಜಾವ ಎರಡು ಗಂಟೆಗೆ ದಮಾಮ್ ನಿಂದ ಏರ್ ಇಂಡಿಯಾ ಎಕ್ಸಪ್ರೆಸ್ ವಿಮಾನದ ಮೂಲಕ ಕರೆತರಲಾಗಿದೆ. ಪಡುಬಿದ್ರಿಯ ಡಾ ಬೇಕಲ್ ಜೊತೆ ಕರೆತರಲಾಗಿದೆ.
ಸದ್ಯ ಚಂದ್ರಶೇಖರ್ ಸಾರಂಗ ಅವರನ್ನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣಕ್ಕೆ ಬಂದ ಅವರನ್ನ ದಂತ ವೈದ್ಯರಾದ ಡಾ ಜಹೀರ್ ಕೋಲಾ, ವೇಲ್ಪೆರ್ ಆಸ್ಪತ್ರೆಯ ಅಬ್ದುಲ್ ಅಲಾ ಮುಂತಾದವರು ಉಪಸ್ಥಿತರಿದ್ದರು.
ಸೌದಿಯಲ್ಲಿ ವಾಕಸ್ ರುಕ್ನುದ್ದಿನ್, ಡಾ. ವಾಸೀಮ್ ಮನಿ, ಪೌಜಾನ್ ಬಿದ್ಕೊಲ್, ಇಸ್ತಿಯಾಕ್ ಅರ್ಮರ್, ಡಾ. ಬೇಕಲ್ ಮತ್ತು ಇತರರು ಕರ್ನಾಟಕಕ್ಕೆ ಕರೆತರಲು ಸಹಾಯ ಮಾಡಿದ್ದರು.
ರಿಯಾದ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಚಂದ್ರಶೇಖರ ಅವರನ್ನ ವಿದೇಶಾಂಗ ಇಲಾಖೆ ಜೊತೆ ಮಾತಾಡಿದರೂ ಕರೆತರಲು ಆಗಿರಲಿಲ್ಲ. ಆದರೆ ದೇವರ ಹಾಗೆ ವೈದ್ಯರ ತಂಡ ಜಾತಿ, ಧರ್ಮ ನೋಡದೇ ತಾಯ್ನಾಡಿಗೆ ತರಲು ಸಹಕಾರಿಯಾಗಿರುವುದನ್ನ ಸಾಯುವವರೆಗೂ ಮರೆಯೋದಿಲ್ಲ ಎಂದು ಸಂಬಂಧಿ ಶರತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.