ಕಾರವಾರ: ಜಿಲ್ಲೆಯಲ್ಲಿ 143 ಕಿಮೀ ಉದ್ದದ ಮಾನವ ಸರಪಳಿ ರಚನೆ ; ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ
ಕಾರವಾರ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೆಪ್ಟೆಂಬರ್ 15 ರಂದು ಹಳಿಯಾಳ ತಾಲೂಕಿನ ಮಾವಿನಕೊಪ್ಪದಿಂದ ಭಟ್ಕಳ ತಾಲೂಕಿನ ಶಿರೂರು ವರೆಗೆ ಸುಮಾರು 143 ಕಿ.ಮೀ ಉದ್ದದ ಮಾನವ ಸರಪಳಿ ರಚಿಸಲು ಉದ್ದೇಶಿಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಸಾರ್ವಜನಿಕರು ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿ/ಸಿಬ್ಬಂದಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು/ಸದಸ್ಯರು, ಜಿಲ್ಲೆಯ ಶಾಲಾ ಕಾಲೇಜು, ಬೋಧಕ/ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸ್ವ ಸಹಾಯ ಸಂಘಗಳ ಪದಾಧಿಕಾರಿ/ಸದಸ್ಯರುಗಳು, ರೋಟರಿ, ಲಯನ್ಸ್, ರೆಡ್‌ಕ್ರಾಸ್ ಸಂಸ್ಥೆಗಳ ಪದಾಧಿಕಾರಿ/ ಸದಸ್ಯರು ಸೇರಿದಂತೆ ಸುಮಾರು 80,000 ಕ್ಕೂ ಅಧಿಕ ಜನ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಾನವ ಸರಪಳಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ರಾಜ್ಯ ಸರ್ಕಾರದಿಂದ ಪ್ರಶಂಸನಾ ಪತ್ರವನ್ನು ಪಡೆಯಬಹುದಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುವವರ ಛಾಯಾಚಿತ್ರವನ್ನು ಪ್ರಮಾಣಪತ್ರದಲ್ಲಿ ಮುದ್ರಿಸಲು ಅವಕಾಶ ನೀಡಲಾಗಿದ್ದು, ಜಿಲ್ಲೆಯ ಸಾರ್ವಜನಿಕರು, ಸಂಘ ಸಂಸ್ಥೆಗಳು, ಪ್ರವಾಸಿಗರು ಮಾನವ ಸರಪಳಿಯಲ್ಲಿ ಭಾಗವಹಿಸುವ ಕುರಿತಂತೆ ತಮ್ಮ ಹೆಸರನ್ನು www.democracydaykarnataka.in ನಲ್ಲಿ ನೋಂದಾಯಿಸಿ ಕೊಂಡು ಪ್ರಮಾಣಪತ್ರವನ್ನು ಪಡೆಯಬಹುದಾಗಿದೆ.
ಸೆಪ್ಟೆಂಬರ್ 15 ರಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅಂದು ಬೆಳಿಗ್ಗೆ 9.30 ರಿಂದ 9.37 ರವರೆಗೆ ಮಾನವ ಸರಪಳಿಯಲ್ಲಿ ಭಾಗವಹಿಸುವವರು ಸರತಿ ಸಾಲಿನಲ್ಲಿ ನಿಲ್ಲುವುದು. ಬೆಳಗ್ಗೆ 9.37 ರಿಂದ 9.40 ರವರೆಗೆ ನಾಡಗೀತೆ, ಬೆಳಗ್ಗೆ 9.41 ರಿಂದ 9.55 ರವರೆಗೆ ಮುಖ್ಯ ಅತಿಥಿಗಳಿಂದ ಭಾಷಣ, ಬೆಳಗ್ಗೆ 9.55 ರಿಂದ 9.57 ರವರೆಗೆ ಸಂವಿಧಾನ ಪ್ರಸ್ತಾವನೆ ಓದುವುದು. ಬೆಳಗ್ಗೆ 9.57 ರಿಂದ 9.59 ರವರೆಗೆ ಮಾನವ ಸರಪಳಿಯಲ್ಲಿ ಕೈ-ಕೈ ಹಿಡಿದು ನಿಲ್ಲುವುದು (Drone shot, Videography etc. ಚಿತ್ರಿಸಿಕೊಳ್ಳುವುದು) 10ಗಂಟೆಗೆ ಮಾನವ ಸರಪಳಿಯಲ್ಲಿಯೇ ತಮ್ಮ 2 ಕೈಗಳನ್ನು ಮೇಲೆತ್ತಿ ”ಜೈ ಹಿಂದ್, ಜೈ ಕರ್ನಾಟಕ" ಘೋಷಣೆ ಕೂಗಿ ಸರವಳಿಯನ್ನು ಕಳಚುವುದರ ಮೂಲಕ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.
ಜಿಲ್ಲೆಯಲ್ಲಿ ಸೆ.15ರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ನಡೆಯುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.