ಮೀನು ಕೃಷಿಕರಿಗೆ 10 ಲಕ್ಷ ಪರಿಹಾರ; ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಣೆ

Source: SOnews | By Staff Correspondent | Published on 21st November 2024, 9:41 PM | Coastal News | State News |

ಭಟ್ಕಳ: ಮೀನುಕೃಷಿಕರಿಗೆ ತೊಂದರೆಯಾದಲ್ಲಿ 10ಲಕ್ಷ ರೂ ಪರಿಹಾರ ನೀಡಲಾಗುವುದು ಅಲ್ಲದೆ ಮೀನುಗಾರರಿಗಾಗಿ ಹತ್ತು ಸಾವಿರ ಮನೆಗಳನ್ನು ಕೊಡುವ ನಿರ್ಧಾರ ಸರ್ಕಾರ ಮಾಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದರು.

ಅವರು ಗುರುವಾರ ಭಟ್ಕಳ ತಾಲೂಕಿನ ಮುರುಡೇಶ್ವರದ ಆರ್.ಎನ್.ಎಸ್. ಗಾಲ್ಫ್ ಕ್ಲಬ್ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ವಿಶ್ವಮೀನುಗಾರಿಕೆ ದಿನಾಚರಣೆ ಕಾರ್ಯಕ್ರಮ ಹಾಗೂ ಮತ್ಸ್ಯಮೇಳ-2024 ಉದ್ಘಾಟಿಸಿ ಮಾತನಾಡಿದರು.

ರೈತರು ಭೂಮಿಯಲ್ಲಿ ಕೃಷಿ ಮಾಡುತ್ತಿರುವಂತೆ ಮೀನುಗಾರರು ಸಮುದ್ರದಲ್ಲಿ ಕೃಷಿ ಮಾಡುತ್ತಾರೆ. ಆದರೆ ಅವರ ಬದುಕು ಭದ್ರತೆ ಇಲ್ಲದ ಚಟುವಟಿಕೆಯಾಗಿದೆ" ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಟ್ಕಳದಲ್ಲಿ ನಡೆದ ಸಮಾರಂಭದಲ್ಲಿ ಹೇಳಿದರು. ಅವರು ಸಮುದ್ರವನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ಮೀನುಗಾರರ ಪರಿಶ್ರಮವನ್ನು ಪ್ರಶಂಸಿಸಿದರು.

ಮೀನುಗಾರರು ತಮ್ಮ ಜೀವನವನ್ನು ಪ್ರಾಣದ ಕೈಯಲ್ಲಿ ಹಿಡಿದುಕೊಂಡು ಸಮಾಜದ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆಂದು ಪ್ರಶಂಸಿಸಿದ ಉಪಮುಖ್ಯಮಂತ್ರಿಗಳು, "ಮೀನುಗಾರರು ಡಿಸೆಲ್ ಬೆಲೆ ಇಳಿಕೆ, ಸಬ್ಸಿಡಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಈ ಎಲ್ಲ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ" ಎಂದು ಭರವಸೆ ನೀಡಿದರು.

ಬಂದರು ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಕರಾವಳಿ ಪ್ರದೇಶದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ವಿವರಿಸಿದ ಅವರು, "ಇಲ್ಲಿ ಬಂದರುಗಳ ನಿರ್ಮಾಣದಿಂದ ಮೀನುಗಾರರಿಗೆ ಉತ್ತಮ ಅನುಕೂಲಗಳು ಲಭ್ಯವಾಗಲಿವೆ. ಯುವಕರಿಗೆ ಹೊಸ ಪ್ರವಾಸೋದ್ಯಮ ನೀತಿಗಳ ಮೂಲಕ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. 5-ಸ್ಟಾರ್ ಹೊಟೇಲ್‌ಗಳು ಮತ್ತು ಉತ್ತಮ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗಳ ಕೊರತೆಯನ್ನು ನಿವಾರಿಸಲು ಯೋಜನೆ ರೂಪಿಸಲಾಗುತ್ತಿದೆ" ಎಂದರು.

ಮೀನುಗಾರರ ಸಮುದಾಯದಿಂದಲೇ ಬಂದಿರುವ ಮೀನುಗಾರಿಕೆ ಸಚಿವ ಮಂಕಾಳ್ ವೈದ್ಯರು ಮೀನುಗಾರರ ಸಮುದಾಯದ ಅಭಿವೃದ್ಧಿಗಾಗಿ ಪಣತೊಟ್ಟಿದ್ದಾರೆ ಎಂದರು.

ಬಾಂಗ್ಲದೇಶದ ಅಧ್ಯಕ್ಷರ ಮಾತುಗಳಿಂದ ಪ್ರೇರಣೆ:  ಉಪಮುಖ್ಯಮಂತ್ರಿಗಳು ಬಂಗ್ಲಾದೇಶದ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನೂಸ್ ಅವರ ಮಾತುಗಳನ್ನು ಉಲ್ಲೇಖಿಸಿದರು: "ಒಂದು ಹೊತ್ತು ಮೀನು ಕೊಟ್ಟರೆ ಅದು ಒಂದು ಬಾರಿ ಹಸಿವು ನೀಗಿಸುತ್ತದೆ. ಆದರೆ ಮೀನು ಹಿಡಿಯಲು ಕಲಿಸಿದರೆ ಅವರು ಜೀವನವನ್ನು ಸ್ವಾವಲಂಬಿಯಾಗಿಯೇ ಕಟ್ಟಿಕೊಳ್ಳುತ್ತಾರೆ." ಈ ತತ್ವವನ್ನು ಅನುಸರಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಸ್ಥಳೀಯ ಮೀನುಗಾರರ ರಕ್ಷಣೆಗೆ ಸರ್ಕಾರ ಬದ್ಧ ಸ್ಥಳೀಯ ಮೀನುಗಾರರನ್ನು ರಕ್ಷಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಇವರ ಬದುಕು ಸ್ಥಿರವಾಗಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅವರು ಘೋಷಿಸಿದರು. ಈಗಾಗಲೇ ಪ್ರಾರಂಭಿಸಿರುವ ಯೋಜನೆಗಳು ಮತ್ತು ಮುಂದಿನ ದಿನಗಳಲ್ಲಿ ಮೀನುಗಾರರ ಸಮಾಜವನ್ನು ಬಲಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.

ಜಿಲ್ಲೆಯಲ್ಲಿ ನನಗೆ ಹೆಬ್ಬಾರ್ ಸೇರಿದಂತೆ ೫ ಜನ ಶಾಸಕರ ಬಲ ನೀಡಿದ್ದೀರಿ. ಮುಂದಿನ ದಿನಗಳಲ್ಲಿ ನನಗೆ ಇನ್ನಷ್ಟು ಹೆಚ್ಚಿನ ಶಕ್ತಿ ನೀಡಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಶಾಸಕರಾದ ಸತೀಶ್ ಸೈಲ್, ಶಿವರಾಮ ಹೆಬ್ಬಾರ್, ಭೀಮಣ್ಣ ನಾಯ್ಕ, ಉ.ಕ.ಜಿಲ್ಲಾಧಿಕಾರಿ ಲಕ್ಷ್ಮೀ ಪ್ರೀಯಾ, ಮೀನುಗಾರಿಕಾ ಇಲಾಖೆ ನಿರ್ದೇಶಕ ದಿನೇಶ್ ಕುಮಾರ್ ಮತ್ತಿರರು ಉಪಸ್ಥಿತರಿದ್ದರು.

 

Read These Next

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ಉಚಿತ ವೈದ್ಯಕೀಯ ಶಿಬಿರ

ಭಟ್ಕಳ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕೆ ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ನವೆಂಬರ್ 24 ರಂದು ಬೃಹತ್ ...

ನ.21 ರಿಂದ ಮುರ್ಡೇಶ್ವರದಲ್ಲಿ ಮತ್ಸ ಮೇಳ; ಪ್ರಥಮ ಬಾರಿಗೆ ಉತ್ತರಕನ್ನಡದಲ್ಲಿ ಆಯೋಜನೆ; ಮೂರು ದಿನಗಳ ಕಾಲ ಮೀನು ಖಾದ್ಯ ಪ್ರಿಯರಿಗೆ ಹಬ್ಬ

ಉತ್ತರಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿಶ್ವ ಮೀನುಗಾರಿಕಾ ದಿನಾಚರಣೆಯ ಅಂಗವಾಗಿ ನ.21ರಿಂದ ನ.23ರವರೆಗೆ ...

ಶಿಗ್ಗಾಂವಿ: ಬ್ಯಾಲೆಟ್ ಬಾಕ್ಸ್‌ ಗಳು ಚರಂಡಿಯಲ್ಲಿ ಪತ್ತೆ; ಉಪಚುನಾವಣೆ ಮುಗಿದ ಮರುದಿನವೇ ನಡೆದ ಘಟನೆ

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಜಿಲ್ಲೆಯ ಯತ್ತಿನಹಳ್ಳಿ ಗ್ರಾಮದ ಬಳಿಯ ...